ಜಗಳೂರಿನ ಕಾರ್ಯಕ್ರಮದಲ್ಲಿ ಶಾಸಕ ಬಿ. ದೇವೇಂದ್ರಪ್ಪ
ಜಗಳೂರು, ಜು.14- ವಿದ್ಯಾರ್ಥಿಗಳ ಮಾನಸಿಕ ಬೆಳವಣಿಗೆ ಹಾಗೂ ಸುಸಂಸ್ಕೃತ ಬದುಕಿಗೆ ಮೌಲ್ಯಾಧಾರಿತ ಶಿಕ್ಷಣ ಅಗತ್ಯ ಎಂದು ಶಾಸಕ ಬಿ. ದೇವೇಂದ್ರಪ್ಪ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್, ಯುವ ರೆಡ್ ಕ್ರಾಸ್, ರೋವರ್ಸ್ ಮತ್ತು ರೇಂಜರ್ಸ್, ಐಕ್ಯೂಎಸಿ ಮತ್ತು ವಿವಿಧ ಸಮಿತಿಗಳ ಸಮಾರೋಪ ಹಾಗೂ ತೃತೀಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಟ್ಟ ಕಡೆಯ ವ್ಯಕ್ತಿಗೂ ಶಿಕ್ಷಣ ಸಾರ್ವತ್ರಿಕವಾಗಿ ಸದ್ಬಳಕೆ ಆಗಬೇಕು. ವಿದ್ಯಾರ್ಥಿಗಳು ಅಂಕ ಗಳಿಕೆಯ ಜತೆಗೆ ಉಜ್ವಲ ಭವಿಷ್ಯ ರೂಪಿಸುವ ಕೌಶಲ್ಯಾ ಧಾರಿತ ಶಿಕ್ಷಣ ಮತ್ತು ನೈತಿಕತೆ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾಲೇಜಿನ ವಿದ್ಯಾರ್ಥಿಗಳ ಬೇಡಿಕೆಯಂತೆ ಸರ್ಕಾರಿ ಬಸ್, ಕೊರೆದ ಬೋರ್‌ವೆಲ್‌ಗೆ ಪಂಪ್, ಮೋಟಾರ್ ವ್ಯವಸ್ಥೆ ಮತ್ತು ಕಾಂಪೌಂಡ್ ನಿರ್ಮಾಣ ಸೇರಿದಂತೆ, ಅಗತ್ಯ ಸೌಕರ್ಯ ಕಲ್ಪಿಸುವೆ ಎಂದು ಹೇಳಿದರು.
ಚಿತ್ರದುರ್ಗದ ಎಸ್‌ಜೆಎಂ ಕಾನೂನು ಕಾಲೇಜಿನ ಉಪನ್ಯಾಸಕ ಡಾ. ವಿಶ್ವನಾಥ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಆಲೋಚ ನಾಲಹರಿ ಬದಲಾವಣೆಗೊಂಡರೆ ಗುರಿ ಸಾಧಿಸಲು ಸಾಧ್ಯ. ಋಣಾತ್ಮಕ ಚಿಂತನೆ ತೊರೆದು ಧನಾತ್ಮಕ ಆಲೋಚನೆಗಳೊಂದಿಗೆ ಕಷ್ಟವನ್ನು ಎದುರಿಸುವ ನಾಯಕತ್ವದ ಗುಣ ಮೈ ಗೂಡಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಪದವಿ ಹಂತದಲ್ಲಿ ಯಾವುದೇ ಕೋರ್ಸ್ ಆಯ್ಕೆ ಮಾಡಿಕೊಂಡರೂ ಭವಿಷ್ಯ ಕುರಿತು ಆತಂಕ ಪಡುವ ಅಗತ್ಯವಿಲ್ಲ. ಕೋರ್ಸ್ ಗಳಲ್ಲಿನ ಕೌಶಲ್ಯಗಳನ್ನು ಗ್ರಹಿಸಿಕೊಂಡು ತಮ್ಮಲ್ಲಿ ಅಡಗಿರುವ ಪ್ರತಿಭೆ ಅನಾವರಣಗೊಳಿಸಿದರೆ ಯಶಸ್ಸು ನಿಶ್ಚಿತ ಎಂದು ತಿಳಿಸಿದರು.
ಈ ವೇಳೆ ತಹಶೀಲ್ದಾರ್ ಸೈಯ್ಯದ್ ಕಲೀಂ ಉಲ್ಲಾ, ಪ.ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಪ್ರಾಚಾರ್ಯ ಡಾ. ರಂಗಪ್ಪ, ರಾಜೇಶ್ವರಿ, ಪ.ಪಂ ಸದಸ್ಯ ರಮೇಶ್ ರೆಡ್ಡಿ, ಸಿ.ಡಿ.ಸಿ ಸಮಿತಿ ಸದಸ್ಯರಾದ ಷಂಷು ದ್ದೀನ್, ಜಯಶೀಲ ರೆಡ್ಡಿ, ಪಲ್ಲಾಗಟ್ಟೆ ಶೇಖ ರಪ್ಪ, ಪ್ರಾಧ್ಯಾಪಕರಾದ ಚೈತ್ರಾ, ಸತೀಶ್, ಸಲ್ಮಾಬಾನು, ಅಮರೇಶ್, ವಿದ್ಯಾಶ್ರೀ, ಮಲ್ಲಿಕಾರ್ಜುನ್ ಕಪ್ಪಿ, ಉಪನ್ಯಾಸ ಕರಾದ ಅಜ್ಜಪ್ಪ, ವೆಂಕಟೇಶ್, ಬಸವರಾಜ್, ಶ್ವೇತಾ, ಧನಂಜಯ್ ಮತ್ತು ಇತರರಿದ್ದರು.