ಪುರಸಭೆ ಸದಸ್ಯರಿಗೆ ಬೆಣ್ಣೆಹಳ್ಳಿ ಹಾಲೇಶಪ್ಪ ಕಿವಿಮಾತು
ಮಲೇಬೆನ್ನೂರು, ಜು.12- ಮಲೇಬೆನ್ನೂರು ಪಟ್ಟಣದ ಅಭಿವೃದ್ಧಿಗೆ ಪುರಸಭೆಯ ಎಲ್ಲಾ ಸದಸ್ಯರೂ ಒಟ್ಟಾಗಿ ಸೇರಿ ಶ್ರಮವಹಿಸಬೇಕೆಂದು ಜಿ.ಪಂ. ಮಾಜಿ ಸದಸ್ಯ ಬೆಣ್ಣೆಹಳ್ಳಿ ಹಾಲೇಶಪ್ಪ ಹೇಳಿದರು.
ಅವರು, ಗುರುವಾರ ಪಟ್ಟಣದ ಬಸವೇಶ್ವರ ಬಡಾವಣೆಯಲ್ಲಿ ಹಮ್ಮಿಕೊಂಡಿದ್ದ ಸರಳ ಅಭಿನಂದನಾ ಕಾರ್ಯಕ್ರಮದಲ್ಲಿ ಮಲೇಬೆನ್ನೂರು ಪುರಸಭೆಗೆ ಸರ್ಕಾರ ದಿಂದ ನಾಮನಿರ್ದೇಶಿತ ಸದಸ್ಯರಾಗಿ ನೇಮಕಗೊಂಡಿ ರುವ ಬಿ.ವೀರಯ್ಯ, ಬುಡ್ಡವರ್ ರಫೀಕ್ ಸಾಬ್, ಎ.ಆರೀಫ್ ಅಲಿ, ಎಕ್ಕೆಗೊಂದಿ ಕರಿಯಪ್ಪ, ಬಸವರಾಜ್ ದೊಡ್ಮನಿ ಮತ್ತು ಪಿಎಸಿಎಸ್ ನೂತನ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್ ಅವರನ್ನು ಸನ್ಮಾನಿಸಿ ಮಾತನಾಡಿದರು.
ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಸಂಸದರ ಮೇಲೆ ಒತ್ತಡ ಹಾಕಿ ಪಟ್ಟಣಕ್ಕೆ ಬೇಕಾದ ಯೋಜನೆಗಳನ್ನು ಮಂಜೂರು ಮಾಡಿಸಿಕೊಳ್ಳಲು ನಿಯೋಗ ಹೋಗೋಣ ಎಂದು ಹಾಲೇಶಪ್ಪ ತಿಳಿಸಿದರು.
ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಹನಗವಾಡಿ ಕುಮಾರ್ ಮಾತನಾಡಿ, ಮುಂದಿನ 15-20 ವರ್ಷಗಳ ಗುರಿ ಇಟ್ಟುಕೊಂಡು ಪಟ್ಟಣದ ಅಭಿವೃದ್ಧಿಗಾಗಿ ಮಾಸ್ಥರ್ ಪ್ಲಾನ್ ಸಿದ್ಧಪಡಿಸಿಕೊಳ್ಳಿ ಎಂದು ಪುರಸಭೆ ಸದಸ್ಯರಿಗೆ ತಿಳಿಸಿದರು.
ಹಿರಿಯರಾದ ಎಂ.ಕರಿಬಸಯ್ಯ ಅವರು, ಪಟ್ಟಣದಲ್ಲಿ ಒಳಚರಂಡಿ ಯೋಜನೆ ಜಾರಿಗೊಳಿಸಲು ಗಮನ ಹರಿಸಿ ಎಂದರು.
ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಸನ್ಮಾನಿತರಾದ ಜಿ.ಮಂಜುನಾಥ್ ಪಟೇಲ್ ಮಾತನಾಡಿದರು.
ಪುರಸಭೆ ಸದಸ್ಯ ಗೌಡ್ರ ಮಂಜಣ್ಣ ಮಾತನಾಡಿ, ಪುರಸಭೆಗೆ ಕಚೇರಿ ಸಂಕೀರ್ಣ ನಿರ್ಮಿಸಲು ಜಾಗ ಸೇರಿದಂತೆ ಇನ್ನಿತರೆ ಯೋಜನೆಗಳಿಗಾಗಿ ಹಿರಿಯರ ಸಹಕಾರ ಅಗತ್ಯ ಎಂದರು.
ಸನ್ಮಾನಿತರಾದ ಬಿ.ವೀರಯ್ಯ ಮಾತನಾಡಿ, ಬೈಪಾಸ್ ರಸ್ತೆ ನಿರ್ಮಾಣ, ಕಸ ವಿಲೇವಾರಿ ಘಟಕ, ಕುಡಿಯುವ ನೀರಿನ ಯೋಜನೆ ಜಾರಿ ಬಹಳ ಮುಖ್ಯವಾಗಿದ್ದು, ಇವುಗಳ ಜಾರಿಗಾಗಿ ಮುಖಂಡರ ನೇತೃತ್ವದಲ್ಲಿ ನಿಯೋಗ ಹೋಗುವುದು ಸೂಕ್ತ ಎಂದರು.
ರೈಸ್ ಮಿಲ್ ಮಾಲೀಕ ಯಕ್ಕನಹಳ್ಳಿ ಬಸವರಾಜಪ್ಪ, ವರ್ತಕ ತಳಸದ ಬಸವರಾಜ್, ಪುರಸಭೆ ಸದಸ್ಯರಾದ ಸಾಬೀರ್ ಅಲಿ, ಭೋವಿ ಶಿವು, ಬಿ.ಮಂಜುನಾಥ್, ಪಿ.ಆರ್.ರಾಜು, ಪಿಎಸಿಎಸ್ ಮಾಜಿ ಅಧ್ಯಕ್ಷ ಪಿ.ಆರ್.ಕುಮಾರ್, ಜನತಾ ಬಜಾರ್ ನಿರ್ದೇಶಕ ಪಿ.ಹೆಚ್.ಶಿವಕುಮಾರ್, ಯುನೂಸ್, ನಿವೃತ್ತ ಶಿಕ್ಷಕರಾದ ಡಿ.ರವೀಂದ್ರಪ್ಪ, ಜಿ.ಆರ್.ನಾಗರಾಜ್, ತಾ.ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಕುಂಗಳೂರು ವಾಸು, ಬೆಳ್ಳೂಡಿಯ ಸಚ್ಚಿನ್, ಮೆಡಿಕಲ್ ಷಾಪ್ ರಾಜೀವ್ ಈ ವೇಳೆ ಹಾಜರಿದ್ದರು.