ಹರಪನಹಳ್ಳಿಯ ಆಸ್ಪತ್ರೆಗಳಿಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೊಸಂಬೆ ಭೇಟಿ, ಪರಿಶೀಲನೆ
ಹರಪನಹಳ್ಳಿ, ಜು.11- ತಾಲ್ಲೂಕಿನಲ್ಲಿ ಡೆಂಘೀ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೊಸಂಬೆ, ಆರೋಗ್ಯ ಸಿಬ್ಬಂದಿಗೆ ಸೂಚನೆ ನೀಡಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ, ಆಯುಷ್ ಡಯಾಗ್ನೋ ಸೆಂಟರ್ ಹಾಗೂ ಮಹೇಶ ನರ್ಸಿಂಗ್ ಹೋಂ, ಆಸ್ಪತ್ರೆಗಳಿಗೆ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಹಿಂದಿಗಿಂತಲೂ ಚೇತರಿಕೆ ಕಂಡಿದ್ದು, ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲ್ಲೂಕಿನಲ್ಲಿ 5 ಡೆಂಘೀ ಶಂಕಿತ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ ಇಬ್ಬರಿಗೆ ಡೆಂಘೀ ಇರುವುದು ದೃಢವಾಗಿದೆ. ಆದ್ದರಿಂದ ವಸತಿ ಶಾಲೆ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ ವೈದ್ಯರು ತಂಡ ರಚನೆ ಮಾಡಿಕೊಂಡು, ಭೇಟಿ ನೀಡಿ ತಪಾಸಣೆ ನಡೆಸಿ, ಔಷಧೋಪಚಾರ ಮಾಡುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಹೇಳಿದರು.
ಕ್ರಮಕ್ಕೆ ಸೂಚನೆ: ಪಟ್ಟಣದ ಮಹೇಶ ನರ್ಸಿಂಗ್ ಹೋಂ ಹಾಗೂ ಆಯುಷ್ ಡಯಾಗ್ನೋ ಸೆಂಟರ್ಗೆ ಭೇಟಿ ನೀಡಿ ಪರಿಶೀಲಿಸಿದಾಗ ಕೆಪಿಎಂಇ ಕಾಯ್ದೆಯ ನಿಯಮ ಉಲ್ಲಂಘನೆ ಕಂಡು ಬಂದ ಹಿನ್ನೆಲೆಯಲ್ಲಿ ಎರಡೂ ಆಸ್ಪತ್ರೆಯ ಸ್ಕ್ಯಾನಿಂಗ್ ಸೆಂಟರ್ಗಳನ್ನು ಸೀಜ್ ಮಾಡಲು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಹಾಲಸ್ವಾಮಿ ಅವರಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಖಾಸಗಿ ಆಸ್ಪತ್ರೆಗೆ ಭೇಟಿ ನೀಡದೇ ನಿರ್ಲಕ್ಷ ವಹಿಸಿರುವ ಕಾರಣ ಅವರಿಗೂ ಕೂಡ ನೋಟಿಸ್ ನೀಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗರ್ಭಿಣಿ, ಪ್ರಸೂತಿ ಭ್ರೂಣ ಲಿಂಗ ಪತ್ತೆ ವಿಷಯ ನಿರ್ವಾಹಕ ಧರ್ಮನ ಗೌಡ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಹಾಲ ಸ್ವಾಮಿ, ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಶಂಕರನಾಯ್ಕ್, ಸಹಾಯಕ ಆಡಳಿತಾಧಿಕಾರಿ ವೆಂಕಟೇಶ್ ಬಾಗಲರ್, ಮಕ್ಕಳ ತಜ್ಞ ದತ್ತಾತ್ರೇಯ ಪಿಸೆ ಮತ್ತು ಇತರರು ಇದ್ದರು.