ದಾವಣಗೆರೆ, ಜು. 10- ಸ್ವತಂತ್ರರಾಗಿ ಬದುಕಲು ಕ್ರೀಡೆ, ಸಾಂಸ್ಕೃತಿಕ , ರೆಡ್‌ಕ್ರಾಸ್ ಸೇರಿದಂತೆ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿವೆ ಎಂದು ಹುಬ್ಬಳ್ಳಿ-ದಾವಣಗೆರೆ ಉದ್ಯಮಿ ಎಂ.ಕೆ. ವೀರೇಂದ್ರ ಹೇಳಿದರು.
ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ನಿನ್ನೆ ನಡೆದ ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜಿನ 2023-24 ನೇ ಸಾಲಿನ ವಿದ್ಯಾರ್ಥಿ ಸಂಘ, ಕ್ರೀಡಾ, ಸಾಂಸ್ಕೃತಿಕ, ಎನ್‌ಎಸ್‌ಎಸ್, ರೆಡ್‌ಕ್ರಾಸ್ ಘಟಕಗಳ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಗುರುಗಳು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಇರಬೇಕು, ನಾನು ವಿದ್ಯಾರ್ಥಿ ದೆಶೆಯಲ್ಲಿ ಸಾಕಷ್ಟು ಸ್ನೇಹಿತರಂತಿರುವ ಗುರುಗಳ ಒಡನಾಟದಲ್ಲಿ ಇದ್ದೆ,
ಮುಂಚೆ ಇದೇ ಕಾಲೇಜಿನ ವಿದ್ಯಾರ್ಥಿಯಾಗಿ ಸಾಕಷ್ಟು ಕಲಿತಿದ್ದು, ಇಂದು ನಾನು ಉದ್ದಿಮೆದಾರನಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಹೇಳಿದರು.
ಕಾಲೇಜಿನ ಅಧ್ಯಕ್ಷ ಬಿ.ಸಿ. ಶಿವಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪದವಿ ನಿಮ್ಮ ಮುಂದಿನ ಭವಿಷ್ಯಕ್ಕೆ ಒಂದು ಹಂತ ಮಾತ್ರ. ಆದರೆ ಕ್ರೀಡೆ, ಎನ್‌ಎಸ್‌ಎಸ್, ರೆಡ್ ಕ್ರಾಸ್, ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ನಿಮ್ಮ ಜ್ಞಾನ
ಹೆಚ್ಚಿಸಿಕೊಳ್ಳಿ, ವಿದ್ಯಾರ್ಥಿ ಜೀವನದಲ್ಲಿ ಕಲಿಯುವುದಕ್ಕೆ
ಸಾಕಷ್ಟು ಅವಕಾಶಗಳು ಇವೆ, ಈ ಪದವಿ ಜೊತೆಗೆ ಬೇರೆ ಬೇರೆ ಕೋರ್ಸ್ ಗಳನ್ನೂ ಕಲಿತು ಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದು ಸ್ಪರ್ಧಾತ್ಮಕ ಯುಗ ನಿಮ್ಮ ಕಲಿಕೆ ಭಾಗವಹಿಸುವಿಕೆ ವೇಗವಾಗಿ ಇರಬೇಕು, ಗುಣಾತ್ಮಕ ಶಿಕ್ಷಣ ಕೊಡುವುದು ನಮ್ಮ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ಕೇವಲ ಒಂಬತ್ತು ವಿದ್ಯಾರ್ಥಿಗಳಿಂದ ಪ್ರಾರಂಭವಾದ ನಮ್ಮ ಕಾಲೇಜು ಈಗ ಒಂದು ಸಾವಿರ ವಿದ್ಯಾರ್ಥಿಗಳನ್ನು ತಲುಪಿದೆ. ಇದು ಗುಣಾತ್ಮಕ ಶಿಕ್ಷಣದ ಪ್ರತಿಫಲ ಎಂದರು.
ಬೇರೆ ಬೇರೆ ಕಾಲೇಜು ಇವೆಂಟ್‌ಗಳಲ್ಲಿ ಭಾಗವಹಿಸಿ ಎಲ್ಲಾ ಹಂತಗಳಲ್ಲೂ ಜ್ಞಾನ ಸಂಪಾದಿಸಿ ಹಾಗೂ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ನುಡಿದರು.
ವಿನೂತನ ಮ್ಯಾನೇಜ್‌ಮೆಂಟ್ ಫೆಸ್ಟ್ ಆಯೋಜಿಸಿದ್ದು, ಅದರಲ್ಲಿ ಪ್ರಥಮ ವರ್ಷದ ಬಿ.ಬಿ.ಎ. ವಿದ್ಯಾರ್ಥಿಗಳು ಹಾಗೂ ಪ್ರಥಮ ವರ್ಷದ ಬಿ.ಸಿ.ಎ. ‘ಸಿ’ ವಿಭಾಗ ಜಂಟಿಯಾಗಿ ಚಾಂಪಿಯನ್ ಶಿಪ್ ಪಡೆದರು. ಎನ್.ಎಸ್.ಎಸ್. ಘಟಕದಿಂದ ಗಣರಾಜ್ಯೋತ್ಸವ ಪಥ ಸಂಚಲನಕ್ಕೆ ಆಯ್ಕೆ ಆಗಿದ್ದ ಹೆಚ್.ಎಂ. ಅಭಿಷೇಕ್ ಅವರನ್ನು ಸನ್ಮಾನಿಸಲಾಯಿತು.
ವೀರೇಶ್ ಜೆ. ದ್ಯಾಮನಗೌಡರು ಹಾಗೂ ಉಮಾಮಹೇಶ್ವರಿ ಅತ್ಯುತ್ತಮ ಎನ್ ಎಸ್ ಎಸ್ ಸ್ವಯಂ ಸೇವಕ ಪ್ರಶಸ್ತಿಗೆ ಭಾಜನರಾದರು.
ಕಾಲೇಜಿನ ಪ್ರಾಂಶಪಾಲರಾದ ಪ್ರೊ. ಎಂ.ಸಿ. ಗುರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ವಿನಾಯಕ ಎಜುಕೇಶನ್ ಟ್ರಸ್ಟ್ ಸದಸ್ಯರೂ ಆದ ವೆಂಕಟ ರೆಡ್ಡಿ, ಡಾ. ಹೆಚ್.ಬಿ. ಮೋಹನ್, ಎಸ್ ಬಿ ಸಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಂಶುಪಾಲ ಡಾ. ಕೆ. ಷಣ್ಮುಖ, ಅಥಣಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶಪಾಲರಾದ ಶ್ರೀಮತಿ ಡಯಾನ ದಿವ್ಯ ಉಪಸ್ಥಿತರಿದ್ದರು.
ಕು. ಶಾಜಿಯಾ ನಿರೂಪಿಸಿದರು, ಕು. ಸಹನ ಸ್ವಾಗತಿಸಿದರು. ಕು. ಸಿರಿ ಗೌರಿ ವಂದಿಸಿದರು.