ಸಾಕುಪ್ರಾಣಿಗಳಿಗೆ ತಪ್ಪದೇ ಲಸಿಕೆ ಹಾಕಿಸಿ

ಸಾಕುಪ್ರಾಣಿಗಳಿಗೆ ತಪ್ಪದೇ ಲಸಿಕೆ ಹಾಕಿಸಿ

ಮಲೇಬೆನ್ನೂರು, ಜು.9- ರೇಬಿಸ್ ಚುಚ್ಚುಮದ್ದು ಕಂಡು ಹಿಡಿದ ಲೂಯಿಸ್ ಪಾಶ್ಚರ್ ಅವರ ಕೊಡುಗೆ ಸ್ಮರಣೀಯವಾಗಿದ್ದು, ರೇಬಿಸ್ ಚುಚ್ಚುಮದ್ದು ಇಲ್ಲವಾಗಿದ್ದರೆ, ಪ್ರಾಣಿಗಳಿಂದ ದಾಳಿಗೊಳಗಾದ ಸಂದರ್ಭದಲ್ಲಿ ಚಿಕಿತ್ಸೆ ನೀಡಲು ಬಹಳ ತೊಂದರೆ ಆಗುತ್ತಿತ್ತು ಎಂದು ಟಿಹೆಚ್ಓ ಡಾ. ಅಬ್ದುಲ್ ಖಾದರ್ ತಿಳಿಸಿದರು.

ಅವರು ಮಂಗಳವಾರ ಪಟ್ಟಣದ ಹೊರ ವಲಯದಲ್ಲಿರುವ ಶ್ರೀ ಬೀರಲಿಂಗೇಶ್ವರ ಪ್ರಥಮ ದರ್ಜೆ ಕಾಲೇಜಿನಲ್ಲಿ ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಪ್ರಾಣಿ ಜನ್ಯರೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಶ್ರೇಷ್ಠ ವಿಜ್ಞಾನಿ ಲೂಯಿಸ್ ಪಾಶ್ಚರ್ ಅವರ ಗೌರವಾರ್ಥ ಪ್ರತಿ ವರ್ಗ ಜುಲೈ 6 ರಂದು ವಿಶ್ವ ಪ್ರಾಣಿ ಜನ್ಯ ರೋಗ ದಿನವನ್ನು ಆಚರಿಸುತ್ತೇವೆ. 1885ರಲ್ಲಿ ಮೊಟ್ಟ ಮೊದಲ ಬಾರಿಗೆ ರೇಬಿಸ್ ಲಸಿಕೆಯನ್ನು ಲೂಯಿಸ್ ಪಾಶ್ಚರ್ ಕಂಡು ಹಿಡಿದರು ಎಂದು ಡಾ. ಖಾದರ್ ಹೇಳಿದರು.

ಪುರಸಭೆ ಮುಖ್ಯಾಧಿಕಾರಿ ಎ.ಸುರೇಶ್ ಮಾತನಾಡಿ, ಮನೆಯಲ್ಲಿ ಸಾಕುವ ಎಲ್ಲಾ ಪ್ರಾಣಿಗಳಿಗೆ ಲಸಿಕೆಗಳನ್ನು ಹಾಕಿಸಬೇಕೆಂದರು.

ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಉಮ್ಮಣ್ಣ ಮಾತನಾಡಿ, ಯಾವುದೇ ಪ್ರಾಣಿ ಕಚ್ಚಿದ ತಕ್ಷಣ ಸುಣ್ಣ ಹಚ್ಚುವ ಬದಲು, ರಭಸವಾದ ನೀರಿನಿಂದ ಗಾಯವನ್ನು ತೊಳೆಯಬೇಕು. ನಂತರ ಸಮೀಪದ ಸರ್ಕಾರಿ ಆಸ್ಪತ್ರೆಗೆ ತೆರಳಿ ರೇಬಿಸ್ ಲಸಿಕೆ ಹಾಕಿಸಿಕೊಳ್ಳಬೇಕೆಂದರು.

ಸಾಕು ಪ್ರಾಣಿಗಳಿಂದ ಹರಡುವ ಮಾರಣಾಂತಿಕ ಕಾಯಿಲೆಗಳಿಂದ ರಕ್ಷಿಸಿಕೊಳ್ಳಲು ಕಾಲ ಕಾಲಕ್ಕೆ ಸರಿಯಾಗಿ ಅವುಗಳಿಗೆ ಲಸಿಕೆ ಹಾಕಿಸಬೇಕೆಂದು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಡಾಟಾ ವ್ಯವಸ್ಥಾಪಕ ಮಿಲನ್ ಹೇಳಿದರು.

ಕಾಲೇಜಿನ ಪ್ರಾಚಾರ್ಯ ರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ನಾಗರಾಜ್, ಪುರಸಭೆ ಆರೋಗ್ಯ ನಿರೀಕ್ಷಣಾಧಿಕಾರಿ ಶಿವರಾಜ್, ಸಮುದಾಯ ಆರೋಗ್ಯ ಕೇಂದ್ರದ ಕಿರಣ್, ಅರಣ್ಯ ಇಲಾಖೆಯ ಸದನ್ ಮತ್ತಿತರರು ಭಾಗವಹಿಸಿದ್ದರು.

error: Content is protected !!