ರಾಣೇಬೆನ್ನೂರು, ಜು.7- ಯುವಕರು ರಕ್ತದಾನದ ತಪ್ಪು ಕಲ್ಪನೆಯಿಂದ ಹೊರಬಂದು ರಕ್ತದಾನಿಗಳಾಗಿ ಎಂದು ಫಿಜಿಷಿಯನ್ ಡಾ.ಎಸ್.ಕೆ. ನಾಗರಾಜ್ ಹೇಳಿದರು.
ಸಿದ್ದಗಂಗಾ ಟ್ರಸ್ಟ್ ವತಿಯಿಂದ ರಾಣೇಬೆನ್ನೂರು ರಕ್ತ ನಿಧಿ ಆಶ್ರಯದಲ್ಲಿ ಇಲ್ಲಿನ ಮೃತ್ಯುಂಜಯ ನಗರದ ಸಿದ್ದಗಂಗಾ ಆಸ್ಪತ್ರೆಯಲ್ಲಿ ಭಾನುವಾರ ನಡೆದ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
18 ವರ್ಷ ಮೇಲ್ಪಟ್ಟ ಆರೋಗ್ಯವಂತರು, ಅವಶ್ಯ ಇರುವ ರೋಗಿಗಳಿಗೆ ರಕ್ತದಾನ ಮಾಡಿದರೆ, ಜೀವ ಉಳಿಸಿದ ಪುಣ್ಯ ಲಭಿಸಲಿದೆ ಎಂದು ಹೇಳಿದರು.
ನಿಯಮಿತವಾಗಿ ರಕ್ತದಾನ ಮಾಡಿದರೆ ಹೃದಯದ ಆರೋಗ್ಯ ಕಾಪಾಡಿಕೊಳ್ಳಬಹುದು ಮತ್ತು ಉತ್ತಮ ಆರೋಗ್ಯ ಹೊಂದ ಬಹುದು ಎಂದು ತಿಳಿಸಿದರು. ಶಿಬಿರದಲ್ಲಿ 22 ಜನ ರಕ್ತದಾನ ಮಾಡಿದರು. ಟ್ರಸ್ಟಿನ ಅಧ್ಯಕ್ಷ ಡಿ.ಕೆ. ಸಿದ್ದಪ್ಪ, ಕಾರ್ಯದರ್ಶಿ ಶಿವಗಂಗಮ್ಮ, ಚಂದ್ರಶೇಖರ್, ಡಾ. ಶಿಲ್ಪಾ ನಾಗರಾಜ್, ಬಸವರಾಜ್, ಕೊಟ್ರೇಶ್, ಸುನೀಲ್, ಶಿಲ್ಪಾ, ನಾಜಿಮಾ, ನುಸರತ್ ಉಮೇಶ್, ಪ್ರಭಾವತಿ, ಶರ್ಮಿಳಾ, ಅಶ್ವಿನಿ ಮತ್ತು ಆಸ್ಪತ್ರೆಯ ಸಿಬ್ಬಂದಿ ಇದ್ದರು.