ಹರಪನಹಳ್ಳಿಯಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ
ಹರಪನಹಳ್ಳಿ,ಜು.5- ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಭಾರತ್ ಕಮ್ಯುನಿಸ್ಟ್ ಪಕ್ಷ, ರೈತ ಸಂಘ, ದಲಿತ ಸಂಘ, ಮಹಿಳಾ ಸಂಘ ಮತ್ತಿತರೆ ಸಂಘಟನೆಗಳು, ಏಳು ಗ್ರಾಮ ಪಂಚಾಯಿತಿಗಳ ಮುಖಂಡರು, ಅಂಗನವಾಡಿ ಕಾರ್ಯಕರ್ತೆಯರು ಅರಸೀಕೆರೆಯ ಸಮುದಾಯ ಆರೋಗ್ಯ ಕೇಂದ್ರದಿಂದ ನಾಡ ಕಛೇರಿಯವರೆಗೆ ಪಂಜಿನ ಮೆರವಣಿಗೆ ಮಾಡಿದರು.
ತಾಲ್ಲೂಕಿನ ಅರಸೀಕೆರೆ ಹೋಬಳಿ ಮಟ್ಟದ ಕೇಂದ್ರದಲ್ಲಿ ಶಾಲಾ ಕಾಲೇಜು ಮಕ್ಕಳಿಗೆ ಎಸ್.ಸಿ,ಎಸ್.ಟಿ, ಬಿ.ಸಿ.ಎಂ ಹಾಸ್ಟೆಲ್ ವ್ಯವಸ್ಥೆ, ಅರಸೀಕೆರೆಯಲ್ಲಿ ಅರ್ಧಕ್ಕೆ ನಿಂತ ಬಸ್ ನಿಲ್ದಾಣ, ವಿದ್ಯುತ್ ಪ್ರಸರಣ ಘಟಕ, ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಹಾಗೂ ನರ್ಸ್ ಗಳ ಕೊರತೆ, ಅರಸೀಕೆರೆ ಏಳು ಗ್ರಾಮ ಪಂಚಾಯಿತಿಗಳಿಗೆ ಆಶ್ರಯ ಮನೆಗಳ ಮುಂಜೂರು, ಎಸ್.ಎಂ. ಸಿ. ಕೆ. ಕಾಲೇಜಿನ ಹತ್ತಿರ ಸೇತುವೆ ನಿರ್ಮಾಣ, ಅರಸೀಕೆರೆಯಿಂದ ಹೊಸಪೇಟೆ – ದಾವಣಗೆರೆಗೆ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕೆಂದು ಅವರು ಒತ್ತಾಯಿಸಿದರು.
ಈ ವೇಳೆ ಕೆರೆಗುಡಿಹಳ್ಳಿ ಹಾಲೇಶ್ ಮಾತನಾಡಿ, ಹರಪನಹಳ್ಳಿ ತಾಲ್ಲೂಕಿನ ಅರಸೀಕೆರೆ ದೊಡ್ಡ ಹೋಬಳಿಯಾಗಿದೆ. ಅರಸೀಕೆರೆಯ ನಾಡಕಛೇರಿ, ಕೃಷಿ ಕಛೇರಿ, ಶಾಲಾ, ಕಾಲೇಜಿನ ವಿದ್ಯಾರ್ಥಿಗಳು, ಸಾವಿರಾರು ಸಾರ್ವಜನಿಕರು ಬಂದು ಹೋಗುವುದರಿಂದ ಬಸ್ ನಿಲ್ದಾಣ ಕಾಮಗಾರಿ, ವಿದ್ಯುತ್ ಪ್ರಸರಣ ಘಟಕ, ರಸ್ತೆ ಅಗಲೀಕರಣ, ಕಾಮಗಾರಿಗಳು ಮೂರು ವರ್ಷಗಳಿಂದ ಅರ್ಧಕ್ಕೆ ನಿಂತಿವೆ. ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಮತ್ತು ನರ್ಸ್ ಗಳು ಹಾಗೂ ನಾಡ ಕಛೇರಿಯಲ್ಲಿ ಸಿಬ್ಬಂದಿ ಕೊರತೆಯಿದೆ.
ಏಳು ಗ್ರಾಮ ಪಂಚಾಯಿತಿಗೆ ಮನೆ ನೀಡಲು ಮಲತಾಯಿ ಧೋರಣೆಯಾಗಿದೆ, ಶಾಸಕರು ಈ ಬಗ್ಗೆ ಮುಂಜಾಗ್ರತೆ ವಹಿಸುವಲ್ಲಿ ವಿಫಲರಾಗಿದ್ದಾರೆ. ಕಲ್ಯಾಣ ಕರ್ನಾಟಕದ ಅನುದಾನದಲ್ಲಿ ತಾರತಮ್ಯವಾಗಿದೆ. ಈ ಬಗ್ಗೆ ಹಲವಾರು ಬಾರಿ ಪ್ರತಿಭಟನೆ, ಧರಣಿ, ಮುತ್ತಿಗೆ, ಬೃಹತ್ ಹೋರಾಟದ ಮುಖಾಂತರ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ನೀಡಿದರೂ ಸಹ ಸಮಸ್ಯೆ ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ. ಅದಕ್ಕಾಗಿ ಇಂದು ವಿಭಿನ್ನ ರೀತಿಯಲ್ಲಿ ಪಂಜಿನ ಮೆರವಣಿಗೆ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
ತಹಶೀಲ್ದಾರ್ ಗಿರೀಶ್ ಬಾಬು ಅವರು ಮನವಿ ಸ್ವೀಕರಿಸಿ ಮಾತನಾಡಿ, ತಾಲ್ಲೂಕಿನ ಎಲ್ಲಾ ಇಲಾಖೆಯ ಸಂಬಂಧಪಟ್ಟ ಅಧಿಕಾರಿ ಗಳನ್ನು 15,20 ದಿನಗಳೊಳಗೆ ಅರಸೀಕೆರೆ ಯಲ್ಲಿ ಸಭೆ ಕರೆಸಿ ಚರ್ಚಿಸಿ ಸಮಸ್ಯೆ ಬಗೆಹರಿಸ ಲಾಗುವುದೆಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಹೆಚ್.ಎಂ.ಸಂತೋಷ್, ಬೂದಿಹಾಳ್ ಸಿದ್ದೇಶ್, ಕಬ್ಬಳ್ಳಿ ಮೈಲಪ್ಪ, ಬಳಿಗನೂರು ಕೊಟ್ರೇಶ್, ಹೆಚ್.ರಂಗಪ್ಪ, ಟಿ.ಬಸಮ್ಮ, ಎ.ದುರುಗಪ್ಪ, ಸತ್ತೂರು ಮಹದೇವಪ್ಪ, ಅರುಣ್ ಕುಮಾರ್, ಶರಂತ್ ಹಿರೇಮಠ್, ಹಗರಿ ಗುಡಿಹಳ್ಳಿ ಶಿವರಾಜ್, ಹರಿಯಮ್ಮನಹಳ್ಳಿ ಬಸವರಾಜ್, ತೌಡೂರು ಪ್ರಭುಗೌಡ ಮತ್ತಿತರರು ಭಾಗವಹಿಸಿದ್ದರು.
ಸಾರಿಗೆ ಇಲಾಖೆಯ ಅಧಿಕಾರಿ ಮಂಜುಳಾ, ಎಲ್ಲಾ ಇಲಾಖೆಯ ಅಧಿಕಾರಿಗಳು ಇನ್ನೂ ಮುಂತಾದವರು ಹಾಜರಿದ್ದರು. ಈ ಸಮಯದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.