ಮಲೇಬೆನ್ನೂರು, ಜು.5- ಭದ್ರಾ ಜಲಾಶಯದ ತಳಭಾಗದಲ್ಲಿರುವ ಗೇಟ್ ಹಾಳಾಗಿದ್ದು, ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಜಲಾಶಯ ತುಂಬುವುದನ್ನೇ ಕಾತುರದಿಂದ ಕಾಯುತ್ತಿರುವ ಅಚ್ಚುಕಟ್ಟಿನ ರೈತರಿಗೆ ನೀರು ಪೋಲಾಗುತ್ತಿರುವ ಸುದ್ದಿ ಆತಂಕ ತಂದಿದೆ. ಮಳೆಗಾಲಕ್ಕೂ ಮುನ್ನ ಜಲಾ ಶಯದ ವಾರ್ಷಿಕ ನಿರ್ವಹಣೆ ಮಾಡಿಲ್ಲವೇ ಎಂಬ ಅನುಮಾನ ಎಲ್ಲರಲ್ಲೂ ಕಾಡುತ್ತಿದೆ.
ವಾರದಿಂದ ನಿರಂತರವಾಗಿ ಮಳೆಯಾಗುತ್ತಿರುವ ಕಾರಣ ಜಲಾಶಯಕ್ಕೆ ಉತ್ತಮ ನೀರು ಬರುತ್ತಿದೆ. ಆದರೆ, ಭದ್ರಾ ಜಲಾಶಯದ ತಳಭಾಗದಲ್ಲಿರುವ ಗೇಟ್ ಹಾಳಾಗಿದ್ದು, ಮೂರ್ನಾಲ್ಕು ದಿನಗಳಿಂದ ಸಾವಿರಾರು ಕ್ಯೂಸೆಕ್ಸ್‌ಗೂ ಅಧಿಕ ನೀರು ನದಿಗೆ ಹರಿಯುತ್ತಿದ್ದು, ಬಹಳಷ್ಟು ನೀರು ವ್ಯರ್ಥವಾಗುತ್ತಿದೆ ಎಂದು ಹೇಳಲಾಗಿದೆ.
ಪ್ರಸ್ತುತ ಜಲಾಶಯದಲ್ಲಿ 129.6 ಅಡಿ ನೀರಿದ್ದು, 16171 ಕ್ಯೂಸೆಕ್ಸ್ ಒಳಹರಿವು ಇದೆ. ಕಳೆದ ವರ್ಷ ಇದೇ ದಿನ 137.2 ಅಡಿ ನೀರಿತ್ತು. ಕಳೆದ ವರ್ಷ ಮುಂಗಾರು ವಿಫಲ ವಾದ ಕಾರಣ ಬೇಸಿಗೆ ಬೆಳೆಗೆ ಪಾಳಿ ಪದ್ಧತಿ ಯಲ್ಲಿ ನೀರು ಕೊಡಲಾಗಿತ್ತು. ಜೂನ್‌ನಲ್ಲಿ ವಾಡಿಕೆಯಷ್ಟು ಮಳೆಯಾಗಿಲ್ಲ. ಜುಲೈ ಆರಂಭ ಆಶಾದಾಯಕವಾಗಿದ್ದು, ಮುಂದೆ ಇದೇ ರೀತಿ ಮಳೆ ಬಂದರೆ ಭದ್ರಾ ಜಲಾಶಯ ಈ ಬಾರಿ ಭರ್ತಿ ಆಗಲಿದೆ ಎಂಬ ಭರವಸೆಯಲ್ಲಿ ಅಚ್ಚುಕಟ್ಟಿನ ರೈತರಿದ್ದಾರೆ. ನೀರನ್ನು ಉಳಿಸಿಕೊಳ್ಳುವ ಇಂತಹ ಸಮಯದಲ್ಲಿ ಭದ್ರಾ ಅಚ್ಚುಕಟ್ಟು ಪ್ರಾಧಿಕಾರ ನಿರ್ಲಕ್ಷ್ಯ ಮಾಡಿದೆ ಎಂಬ ಮಾತು ರೈತರಿಂದ ಕೇಳಿ ಬಂದಿವೆ.