ಸಹಕಾರಿ ಕ್ಷೇತ್ರದಲ್ಲಿ ಪ್ರಾಮಾಣಿಕತೆ ಅಗತ್ಯ

ಸಹಕಾರಿ ಕ್ಷೇತ್ರದಲ್ಲಿ ಪ್ರಾಮಾಣಿಕತೆ ಅಗತ್ಯ

ದಾವಣಗೆರೆ, ಜು. 4- ಸಹಕಾರಿ ಕ್ಷೇತ್ರಕ್ಕೆ ಪ್ರಾಮಾಣಿಕತೆ, ಪರಿಶುದ್ಧತೆ ಇಂದಿನ ತುರ್ತು ಅಗತ್ಯವಾಗಿದೆ. ದೇಶದಲ್ಲಿ ಸಹಕಾರಿ ಚಳವಳಿ ಬೆಳೆಯುತ್ತಿದೆ. ಆದರೂ ಸಹಕಾರಿ ಕ್ಷೇತ್ರದಲ್ಲಿನ ಗುಣಮಟ್ಟ ಕ್ಷೀಣಿಸುತ್ತಿದೆ ಎಂದು ಜಿಲ್ಲಾ ಸಹಕಾರ ಸಂಘಗಳ ಇಲಾಖೆ ಉಪನಿರ್ದೇಶಕ ಕೆ. ಮಹೇಶ್ವರಪ್ಪ ವಿಷಾದಿಸಿದರು.

ನಗರದ ಜನತಾ ಬಜಾರ್ ಸಭಾಂಗಣದಲ್ಲಿ ರಾಜ್ಯ ಸಹಕಾರ ಮಹಾಮಂಡಳ,  ಸಹಕಾರ ಇಲಾಖೆ, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ, ಜಿಲ್ಲಾ ಸಹಕಾರ ಒಕ್ಕೂಟ,  ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್  ಸಂಯುಕ್ತಾಶ್ರಯದಲ್ಲಿ ಚನ್ನಗಿರಿ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರಿಗೆ ಹಮ್ಮಿಕೊಂಡಿದ್ದ ವಿಶೇಷ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿ ದಿನ ಒಂದಾದರೂ ಸಹಕಾರ ಬ್ಯಾಂಕ್ ಮುಳುಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇದು ಬಹಳ ನೋವಿನ ಸಂಗತಿಯಾಗಿದೆ. ಆದ್ದರಿಂದ ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರತಿಯೊಬ್ಬರೂ ಸಹ ನಿಷ್ಠೆ, ಪ್ರಾಮಾಣಿಕತೆ, ಬದ್ಧತೆಯಿಂದ ಕೆಲಸ ಮಾಡಿದರೆ ಮಾತ್ರ ಸಂಘಗಳಿಗೆ ಉಳಿಗಾಲ ಎಂದು ಹೇಳಿದರು.

ಆದಾಯ ತೆರಿಗೆಯ ನೀತಿ ನಿಯಮಗಳು ಕಾಲ ಕಾಲಕ್ಕೆ ಬದಲಾಗುತ್ತಿರುವುದರಿಂದ ಈ ಕುರಿತು ತಿಳಿವಳಿಕೆ ಹೊಂದುವ ಅವಶ್ಯವಿದ್ದು, ಈ ಹಿನ್ನೆಲೆಯಲ್ಲಿ ವಿಶೇಷ ತರಬೇತಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

ಆದಾಯ ತೆರಿಗೆ ಮತ್ತು ಸರಕು ಸೇವಾ ತೆರಿಗೆ ಕುರಿತು ಕೇಂದ್ರ ಸರ್ಕಾರ ಹೊರಡಿಸುವ ಆದೇಶ ಮತ್ತು ಬದಲಾವಣೆಗೆ ತಕ್ಕಂತೆ ಸಹಕಾರ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕೆಂದು ಕಿವಿಮಾತು ಹೇಳಿದರು.

ಕೇಂದ್ರ ಸರ್ಕಾರದ ನೂತನ ಸಹಕಾರ ಕಾಯ್ದೆಯ ಅನ್ವಯ ಎಲ್ಲಾ ಸಹಕಾರಿ ಸಂಘಗಳು ಶೇ. 100 ರಷ್ಟು ಗಣಕೀಕೃತ ಲೆಕ್ಕ ಪರಿಶೋಧನೆ ಮಾಡಬೇಕಿದೆ. 

ಈ ವಿಚಾರಕ್ಕೆ ಸಂಬಂಧಿಸಿದಂತೆ ದಾವಣಗೆರೆ ಜಿಲ್ಲೆ ಕಳೆದ ವರ್ಷ ಶೇ. 100 ರಷ್ಟು ಸಾಧನೆ ಮಾಡಿ ಪ್ರಶಂಸೆಗೆ ಪಾತ್ರವಾಗಿದೆ. ಜಿಲ್ಲೆಯ 186 ಸಹಕಾರ ಸಂಘಗಳ ಪೈಕಿ ಈಗಾಗಲೇ 68 ಸಂಘಗಳು ಶೇ. 100 ರ ಗುರಿ ತಲುಪಿವೆ ಎಂದು ಮೆಚ್ಚುಗೆ ಮಾತುಗಳನ್ನಾಡಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಸಿರಿಗೆರೆ ರಾಜಣ್ಣ ಮಾತನಾಡಿದರು. ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಎಸ್.ಬಿ.ಶಿವಕುಮಾರ್, ಸಹಕಾರ ಅಭಿವೃದ್ಧಿ ಅಧಿಕಾರಿ ಜಿ.ಎಸ್. ಸುರೇಂದ್ರ ಮತ್ತಿತರರು ಉಪಸ್ಥಿತರಿದ್ದರು.

ಇದೇ ವೇಳೆ ಸನ್ನದು ಲೆಕ್ಕಪರಿಶೋಧಕ ಉಮೇಶ್ ಶೆಟ್ಟಿ ಅವರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಅನ್ವಯವಾಗುವ
ಆದಾಯ ತೆರಿಗೆ, ಸರಕು ಮತ್ತು ಸೇವಾ ತೆರಿಗೆ ಬಗ್ಗೆ ಉಪನ್ಯಾಸ ನೀಡಿದರು.

error: Content is protected !!