ಪರಿಸರ ಬದಲಾವಣೆಯಿಂದ ಮನುಕುಲಕ್ಕೆ ಅಸ್ತಿತ್ವದ ಅಪಾಯ

ಪರಿಸರ ಬದಲಾವಣೆಯಿಂದ ಮನುಕುಲಕ್ಕೆ ಅಸ್ತಿತ್ವದ ಅಪಾಯ

ದಾವಣಗೆರೆ, ಜು. 4 – ಕಲಬುರಗಿಯಲ್ಲಿ ಕಂಡು ಬರುತ್ತಿದ್ದ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ಈಗ ದಾವಣಗೆರೆಯಲ್ಲಿ ಕಂಡು ಬರುತ್ತಿದೆ. ಪರಿಸರ ಬದಲಾವಣೆ ಹೀಗೆಯೇ ಮುಂದುವರೆದರೆ ಮನುಕುಲ ಭೂಮಿಯಲ್ಲಿ ಬದುಕಲು ಕಷ್ಟವಾಗುವ ವಾತಾವರಣ ಸೃಷ್ಟಿಯಾಗಲಿದೆ ಎಂದು ದಾವಣಗೆರೆ ವಿ.ವಿ. ಗಣಿತಶಾಸ್ತ್ರ ವಿಭಾಗದ ಅಧ್ಯಕ್ಷ ಪ್ರೊ. ಡಿ.ಜಿ. ಪ್ರಕಾಶ್ ಎಚ್ಚರಿಸಿದ್ದಾರೆ.

ನಗರದ ಎ.ಆರ್.ಜಿ. ಕಲಾ ಮತ್ತು ವಾಣಿಜ್ಯ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರ, ಸಾಂಸ್ಕೃತಿಕ ವೇದಿಕೆ, ರಾಷ್ಟ್ರೀಯ ಸೇವಾ ಯೋಜನೆ, ಎನ್.ಸಿ.ಸಿ., ಯುವ ರೆಡ್‌ಕ್ರಾಸ್ ಘಟಕ ಹಾಗೂ ಕ್ರೀಡಾ ವಿಭಾಗಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ `ಹಸಿರು ಉತ್ಸವ’ವನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಐವತ್ತು ವರ್ಷಗಳ ಹಿಂದೆಯೇ ಪರಿಸರ ಬದಲಾವಣೆಯ ಅಪಾಯವನ್ನು ಅರಿತು ಜಾಗತಿಕವಾಗಿ ಪರಿಸರ ದಿನಾಚರಣೆ ಆಚರಿಸಲು ನಿರ್ಧರಿಸಲಾಗಿತ್ತು. ಆದರೆ, ಇನ್ನೂ ಪರಿಸರ ಕಾಳಜಿಯಲ್ಲಿ ಸಾಕಷ್ಟು ಕೊರತೆ ಇದೆ. ಯುವ ಪೀಳಿಗೆ ಪರಿಸರದ ಅರಿವು ಹಾಗೂ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕಿದೆ ಎಂದು ಹೇಳಿದರು.

ಮನುಷ್ಯರಿಗೆ ಇರುವುದೊಂದೇ ಭೂಮಿ. ಈ ಭೂಮಿಯೇ ಇಲ್ಲದಿದ್ದರೆ ನಮಗಾರಿಗೂ ಉಳಿಗಾಲವಿಲ್ಲ. ನಮ್ಮ ಪೂರ್ವಿಕರು ಭೂಮಿಯನ್ನು ಪೂಜನೀಯವಾಗಿ ಕಾಣುತ್ತಿದ್ದರು. ಆದರೆ, ಈಗ ಭೂಮಿಯನ್ನು ನೋಡುವ ಉದ್ದೇಶವೇ ಬದಲಾಗಿದೆ ಎಂದವರು ವಿಷಾದಿಸಿದರು.

ವೇದಿಕೆಯ ಮೇಲೆ ಎ.ಆರ್.ಜಿ. ಪಿ.ಯು. ಕಾಲೇಜಿನ ಪ್ರಾಂಶುಪಾಲ ಕೆ.ಬಿ. ಬೊಮ್ಮಣ್ಣ, ಉಪನ್ಯಾಸಕ ಮಲ್ಲಿಕಾರ್ಜುನ್, ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ಜಂಟಿ ಕಾರ್ಯದರ್ಶಿ ಹೆಚ್.ಎಂ. ಚಿರಂಜೀವಿ, ಹಿರಿಯ ವಿದ್ಯಾರ್ಥಿಗಳ ಸಂಘದ ಗೌರವ ಅಧ್ಯಕ್ಷ ಕೆ. ರಘು ಉಪಸ್ಥಿತರಿದ್ದರು.

ಎ.ಆರ್.ಜಿ. ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಜಿ.ಬಿ. ಬೋರಯ್ಯ ಅಧ್ಯಕ್ಷತೆ ವಹಿಸಿದ್ದರು. ಕಾಂತರಾಜ್ ಪ್ರಾರ್ಥಿಸಿದರೆ, ಲಕ್ಷ್ಮಿ ಸ್ವಾಗತಿಸಿದರು. ದರ್ಶನ್ ನಿರೂಪಿಸಿದರು.

error: Content is protected !!