ಟಿ20 ವಿಜೇತರಿಗೆ ಪ್ರಧಾನಿಯಿಂದ ಜನಸಾಮಾನ್ಯರವರೆಗೆ ಬಹುಪರಾಕ್

ಟಿ20 ವಿಜೇತರಿಗೆ ಪ್ರಧಾನಿಯಿಂದ ಜನಸಾಮಾನ್ಯರವರೆಗೆ ಬಹುಪರಾಕ್

ಮುಂಬೈನಲ್ಲಿ ಜನಸಾಗರದ ನಡುವೆ ಸಂಭ್ರಮದಲ್ಲಿ ಮಿಂದೆದ್ದ ಕ್ರಿಕೆಟಿಗರು

ನವದೆಹಲಿ, ಜು. 4 – ಟಿ20 ವಿಶ್ವಕಪ್ ವಿಜೇತರಾಗಿ ಮರಳಿರುವ ಭಾರತೀಯ ಕ್ರಿಕೆಟ್ ತಂಡಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಹಿಡಿದು ಜನಸಾಮಾನ್ಯರವರೆಗೆ ಭವ್ಯ ಸ್ವಾಗತ ಕೋರಿದ್ದಾರೆ. 

16 ಗಂಟೆಗಳ ಸುದೀರ್ಘ ವೈಮಾನಿಕ ಪ್ರಯಾಣದ ನಂತರ ಆಗಮಿಸಿದ ಭಾರತೀಯ ಕ್ರಿಕೆಟಿಗರು ಬೆಳಗ್ಗೆ ಪ್ರಧಾನಮಂತ್ರಿ ನಿವಾಸದಲ್ಲಿ ಉಪಹಾರ ಸೇವಿಸಿದರು. ನಂತರ ಮುಂಬೈನಲ್ಲಿ ಬೃಹತ್ ಮೆರವಣಿಗೆ ಹಾಗೂ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಬೃಹತ್ ಸಮಾರಂಭದಲ್ಲಿ ಪಾಲ್ಗೊಂಡರು. 

ನಾಯಕ ರೋಹಿತ್ ಶರ್ಮ ಅವರ ನೇತೃತ್ವದ ಭಾರತೀಯ ಕ್ರಿಕೆಟ್ ತಂಡ ಗುರುವಾರ ಬೆಳಗ್ಗೆ ರಾಜಧಾನಿ ದೆಹಲಿಗೆ ಆಗಮಿಸಿತು. ಮಳೆಯ ನಡುವೆಯೂ ನೂರಾರು ಅಭಿಮಾನಿಗಳು ಕ್ರಿಕೆಟಿಗರನ್ನು ಸ್ವಾಗತಿಸಿದರು. 

ಜನರ ಅಭೂತಪೂರ್ವ ಸ್ವಾಗತಕ್ಕೆ ಸ್ಪಂದಿಸಿದ ಕ್ರಿಕೆಟಿಗರು, ಪ್ರಯಾಣದ ಬಳಲಿಕೆಯ ನಡುವೆಯೂ ದೆಹಲಿ ಹಾಗೂ ಮುಂಬೈನಲ್ಲಿ ಉತ್ಸಾಹದಿಂದ ಅಭಿಮಾನಿಗಳೊಂದಿಗೆ ಬೆರೆತರು. ತೆರೆದ ಬಸ್‌ಗಳಲ್ಲಿ ನಡೆದ ಮೆರವಣಿಗೆಯಲ್ಲಿ ಪಾಲ್ಗೊಂಡು ಜನರತ್ತ ಹರ್ಷದಿಂದ ಕೈಬೀಸಿದರು. 

ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದವರೆಗೆ ಸಾಗಿ ಬಂದ ವಿಜಯ ಯಾತ್ರೆಯ ಅಂತ್ಯದಲ್ಲಿ ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿದ ರೋಹಿತ್ ಶರ್ಮ, ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿರುವುದು ಟಿ20 ವಿಶ್ವಕಪ್‌ಗೆ ಎಷ್ಟು ಕಾತುರದಿಂದ ಕಾಯುತ್ತಿದ್ದೀರಿ ಎಂಬುದನ್ನು ತೋರಿಸುತ್ತದೆ ಎಂದರು. 

ಟಿ20 ವಿಜೇತರಿಗೆ ಪ್ರಧಾನಿಯಿಂದ ಜನಸಾಮಾನ್ಯರವರೆಗೆ ಬಹುಪರಾಕ್ - Janathavani

ರೋಹಿತ್ ಶರ್ಮ ಪಡೆ ಟಿ20 ವಿಶ್ವಕಪ್ ನಲ್ಲಿ ಗೆದ್ದ ನಂತರ ಬಾರ್ಬಡೋಸ್‌ನಲ್ಲಿ ಚಂಡಮಾರುತ ಬೀಸಿತ್ತು. ಇದರಿಂದಾಗಿ ಕ್ರಿಕೆಟಿಗರು ದೇಶಕ್ಕೆ ಆಗಮಿಸುವುದು ತಡವಾಗಿತ್ತು. 

ಸುದೀರ್ಘ ಪ್ರಯಾಣ ಹಾಗೂ ದೆಹಲಿ ಮತ್ತು ಮುಂಬೈಗಳಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಕಾರಣದಿಂದಾಗಿ ಆಟಗಾರರು ಬಸವಳಿದಿದ್ದು ಸ್ಪಷ್ಟವಾಗಿ ಕಾಣುತ್ತಿತ್ತು. ಇಷ್ಟಾದರೂ ಅಭಿಮಾನಿಗಳ ಉತ್ಸಾಹಕ್ಕೆ ಆಟಗಾರರು ಸ್ಪಂದಿಸಿದರು. 

ಏರ್ ಇಂಡಿಯಾ ಕ್ರಿಕೆಟಿಗರನ್ನು ಕರೆತರಲು ವಿಶೇಷ ವಿಮಾನದ ಆಯೋಜನೆ ಮಾಡಿತ್ತು. ಕ್ರಿಕೆಟ್ ತಂಡ ದೆಹಲಿಗೆ ಬೆಳಿಗ್ಗೆ ಆರು ಗಂಟೆಗೆ ನಿರಂತರ ಪ್ರಯಾಣದ ನಂತರ ಆಗಮಿಸಿತ್ತು. ರೋಹಿತ್ ಶರ್ಮಾ ಅವರು ಟಿ20 ವಿಶ್ವಕಪ್ ಅನ್ನು ಅಭಿಮಾನಿಗಳತ್ತ ಪ್ರದರ್ಶಿಸಿ ಕೈಬೀಸಿದರು. ನಂತರ ಭಾರತೀಯ ಕ್ರಿಕೆಟ್ ತಂಡ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧಿಕೃತ ನಿವಾಸಕ್ಕೆ ತೆರಳಿ ತೆರಳಿತು. ನಂತರ ಹೋಟೆಲ್‌ಗೆ ತೆರಳಿದ ತಂಡ ಅಲ್ಲಿಂದ ಮುಂಬೈಗೆ ಹೊರಟಿತು. 

ಸಂಜೆ 5 ಗಂಟೆಗೆ ನಾರಿಮನ್ ಪಾಯಿಂಟ್‌ನಿಂದ ವಾಂಖೆಡೆ ಕ್ರೀಡಾಂಗಣದವರೆಗೆ ಬೃಹತ್ ವಿಜಯ ಯಾತ್ರೆ ನಡೆಸಲಾಯಿತು. ನಾರಿಮನ್ ಪಾಯಿಂಟ್‌ನಿಂದ ವಾಂಖೆಡೆ ಕ್ರೀಡಾಂಗಣ ಕೇವಲ 2 ಕಿ.ಮೀ. ದೂರದಲ್ಲಿದೆ. 

ಮಧ್ಯಾಹ್ನದಿಂದಲೇ ಜನರು ದೊಡ್ಡ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದರು. ರಸ್ತೆಯ ಇಕ್ಕೆಲ ಹಾಗೂ ಸುತ್ತಲಿನ ಜಾಗದಲ್ಲಿ ಬೃಹತ್ ಜನಸಾಗರ ನೆರೆಯಿತು. ಇದರಿಂದಾಗಿ ಮುಂಬೈ ಪೊಲೀಸರು ಸಂಚಾರ ವ್ಯವಸ್ಥೆ ನಿಯಂತ್ರಣಕ್ಕೆ ಸಾಕಷ್ಟು ಬೆವರು ಹರಿಸಬೇಕಾಗಿತ್ತು. 

ಆಟಗಾರರು ತೆರೆದ ಬಸ್ ಮೇಲೇರಿ ನೆರೆದಿದ್ದ ಕ್ರೀಡಾಭಿಮಾನಿಗಳಿಗೆ ಕೈಬೀಸಿದರು. ಆಟಗಾರರು ವಾಂಖೆಡೆ ಕ್ರೀಡಾಂಗಣಕ್ಕೆ ತಲುಪಲು 2 ಗಂಟೆಗಳು ಬೇಕಾದವು. ಅಲ್ಲಿ ಮತ್ತೊಂದು ಸುತ್ತಿನ ನಾಸಿಕ್ ಡೋಲ್‌ನೊಂದಿಗೆ ನೃತ್ಯ ನಡೆಯಿತು. ಕಿಕ್ಕಿರಿದ ಕ್ರೀಡಾಂಗಣದಲ್ಲಿ ಆಟಗಾರರು ತಮ್ಮ ಗೆಲುವಿನ ಕ್ಷಣಗಳ ಅನುಭವ ಹಂಚಿಕೊಂಡರು.

error: Content is protected !!