ವೈದ್ಯ ಸಮೂಹಕ್ಕೆ ನಾಗರಿಕ ಸಮಾಜ ಋಣಿ

ವೈದ್ಯ ಸಮೂಹಕ್ಕೆ ನಾಗರಿಕ ಸಮಾಜ ಋಣಿ

ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ನ್ಯಾ|| ರಾಜೇಶ್ವರಿ ಎನ್. ಹೆಗಡೆ

ದಾವಣಗೆರೆ, ಜು. 3 – ಗುಣಪಡಿಸುವ ಕೈಗಳ, ಕಾಳಜಿಯುಳ್ಳ ಹೃದಯಗಳ ಅವಿಶ್ರಾಂತವಾಗಿ ಕಾರ್ಯನಿರ್ವಹಿಸುವ ವೈದ್ಯ ಸಮೂಹಕ್ಕೆ ಸಮಾಜ ಎಂದೆಂದಿಗೂ ಋಣಿಯಾಗಿರುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ರಾಜೇಶ್ವರಿ ಎನ್. ಹೆಗಡೆ ನುಡಿದರು. 

ಜಿಲ್ಲಾ ನ್ಯಾಯಾಂಗದಿಂದ ನಿನ್ನೆ ಆಯೋಜಿಸ ಲಾಗಿದ್ದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಒತ್ತಡಮಯ ಜೀವನ ಶೈಲಿಗೆ ಮನುಷ್ಯರು ಹಲವಾರು ರೋಗ ರುಜಿನಗಳಿಗೆ ತುತ್ತಾಗುತ್ತಿದ್ದಾರೆ. ವೈದ್ಯ ಸಮೂಹದ ಮುಂದೆಯೂ ಸವಾಲುಗಳಿವೆ. ಕಾಲ ಕಾಲಕ್ಕೆ ವೈದ್ಯಕೀಯ ಲೋಕ ಸಂಬಂಧಿತ ವಿಷಯಗಳಿಗೆ ಸಂಬಂಧಪಟ್ಟಂತೆ ಚರ್ಚೆ, ಉಪನ್ಯಾಸಗಳ ಮೂಲಕ  ಜನರನ್ನು ತಲುಪಬೇಕಿದೆ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಷಣ್ಮುಖಪ್ಪ  ಮಾತನಾಡಿ, ನ್ಯಾಯಾಂಗದಿಂದ ವೈದ್ಯರನ್ನು ಕರೆಸಿ ಸನ್ಮಾನಿಸಿ ರುವುದು ನಮ್ಮಲ್ಲಿ ಮತ್ತಷ್ಟು ಜವಾಬ್ದಾರಿ ಹಾಗೂ ನೈತಿಕ ಪ್ರಜ್ಞೆ ಮೂಡಲು ಕಾರಣವಾಗಿದೆ ಎಂದರು.

ಇಂದಿನ ನಾಗರಿಕ ಸಮಾಜ ನಾಗಾಲೋಟ ದಿಂದ ಓಡುತ್ತಿದೆ. ಇಂತಹ ಸಂದರ್ಭದಲ್ಲಿ ಆಧುನಿಕ ಸಂಪರ್ಕ ಸಾಧನಗಳು ಜನರಲ್ಲಿ ವೈದ್ಯ ವಿಜ್ಞಾನಕ್ಕೆ ಸಂಬಂಧಿಸಿದಂತೆ ತಪ್ಪು ಸಂದೇಶವನ್ನು ರವಾನಿಸುತ್ತಿ ರವುದು ದುರದೃಷ್ಟಕರ ಎಂದು ಸಮಾಜಮುಖಿ ಕಾರ್ಯಗಳಿಗೆ ಹೆಸರಾದ ಮತ್ತೋರ್ವ ವೈದ್ಯೆ ಡಾ.ಶಾಂತಾಭಟ್ ವಿಷಾದ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಂದ ಪ್ರಶಂಸೆಗೆ ಪಾತ್ರರಾಗಿ ಅನುಪಮ ಸೇವೆಗಾಗಿ ಪ್ರಶಸ್ತಿ ಪುರಸ್ಕೃತ ಡಾ.ರಾಘವನ್ ಮತ್ತು ಡಾ.ನಾಗೇಂದ್ರಪ್ಪನವರನ್ನು ಅಭಿನಂದಿಸಲಾಯಿತು. 

ಸಮಾಜದಲ್ಲಿ ಸಾಂಕ್ರಾಮಿಕ, ಅಸಾಂಕ್ರಾಮಿಕ ರೋಗಗಳಿಗಿಂತಲೂ ಹೆಚ್ಚಾಗಿ ಇಂದಿನ ಬದಲಾದ ಜೀವನ ಶೈಲಿ, ಮಾನಸಿಕ ಒತ್ತಡಗಳಿಂದಾಗಿ ಮರಣ ಹೊಂದುವವರ ಸಂಖ್ಯೆ ಗಣನೀಯವಾಗಿದೆ. ಇದು ಪ್ರಸ್ತುತ ಶೇ.ಅರವತ್ತೇಳರ ಪ್ರಮಾಣದಲ್ಲಿದೆ. ಈ ಕುರಿತಂತೆ ಯುವ ಜನತೆಯಲ್ಲಿ ಅರಿವನ್ನು ಮೂಡಿಸುವ ಕಾರ್ಯವಾಗಬೇಕಿದೆ ಎಂದು ಡಾ.ರಾಘವನ್ ಹೇಳಿದರು.

ವೈದ್ಯರ ಮಾನವೀಯ ದೃಷ್ಟಿಯಿಂದಾಗಿಯೇ ಅರ್ಧದಷ್ಟು ಬಡವರ ಕಾಯಿಲೆಗಳು ವಾಸಿಯಾಗಬಲ್ಲವು. ಶ್ರೀಮಂತ ರೋಗಿಗೆ ಡಾಕ್ಟರ್ ಆಗಿ ಕಂಡ ಅದೇ ವೈದ್ಯ, ಬಡವನಿಗೆ ದೇವರಾಗಿ ಕಾಣಿಸುತ್ತಾನೆ ಇಂತಹ ಸ್ತುತ್ಯ ಕಾರ್ಯಕ್ಕೆ ವೈದ್ಯರನ್ನು ಅಭಿನಂದಿಸುತ್ತೇನೆ ಎಂದು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಮಂಜಪ್ಪ ಅಣ್ಣಯ್ಯನವರ್ ನುಡಿದರು.

ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಕರೆಣ್ಣನವರ ಸ್ವಾಗತಿಸಿದರು. 

ವೈದ್ಯರಾದ ರೇಣುಕಾರಾಧ್ಯ, ಸುಭಾಶ್ಚಂದ್ರ,   ನ್ಯಾಯಾಧೀಶರಾದ ಪ್ರವೀಣ್‌ಕುಮಾರ್, ಶ್ರೀರಾಮ ಹೆಗಡೆ, ಶಿವಪ್ಪ ಸಲಗರೆ, ನಿವೇದಿತಾ ಹಾಗೂ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ ಬಿ.ಶ್ರೀನಿವಾಸ, ಕೋರ್ಟ್ ಮ್ಯಾನೇಜರ್ ಅಶ್ವಿನಿ ಕುಮಾರ್ ಹಾಗೂ  ಇತರರು ಹಾಜರಿದ್ದರು.

error: Content is protected !!