ಮೆಕ್ಕೆಜೋಳಕ್ಕೆ ಸೈನಿಕ ಹುಳುವಿನ ಬಾಧೆ; ಹತೋಟಿ ಕ್ರಮಗಳು

ಮೆಕ್ಕೆಜೋಳಕ್ಕೆ ಸೈನಿಕ ಹುಳುವಿನ ಬಾಧೆ; ಹತೋಟಿ ಕ್ರಮಗಳು

ದಾವಣಗೆರೆ,ಜು.2-  ತಾಲ್ಲೂಕಿನಲ್ಲಿ   ಉತ್ತಮ ಮಳೆಯಾಗಿದ್ದರಿಂದ ತಾಲ್ಲೂಕಿನಾದ್ಯಂತ ರೈತರು ಮೆಕ್ಕೆಜೋಳ ಬಿತ್ತನೆ ಮಾಡಿದ್ದು, ಬಿತ್ತನೆಯಿಂದ ಹಿಡಿದು 15 ರಿಂದ 20 ದಿನದ ಮೆಕ್ಕೆಜೋಳ ಬೆಳೆಯನ್ನು ಕಾಣಬಹುದಾಗಿದೆ. ರೈತರ ತಾಕುಗಳಿಗೆ ಕೃಷಿ ಇಲಾಖಾ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿದಾಗ ಸೈನಿಕ ಹುಳುವಿನ ಬಾಧೆ ಅಲ್ಲಲ್ಲಿ ಕಂಡುಬಂದಿದೆ.  ಸೈನಿಕ ಹುಳುವಿನ ಗುರುತಿಸುವಿಕೆ ಹಾಗೂ ಹತೋಟಿ ಕ್ರಮಗಳನ್ನು ಕೈಗೊಳ್ಳುವಂತೆ ಕೃಷಿ ಇಲಾಖೆ ತಿಳಿಸಿದೆ.  

ಲದ್ದಿ ಹುಳು ಗುರುತಿಸುವಿಕೆ

ಬೆಳೆದ ಹುಳುವಿನ ಕಪ್ಪು ತಲೆಯ ಮುಂಭಾಗದಲ್ಲಿ ತಲೆ ಕೆಳಗಾದ ಙ ಆಕೃತಿಯ ಗುರುತು ಹಾಗೂ ಹುಳದ ಹಿಂಭಾಗದಲ್ಲಿ ನಾಲ್ಕು ದಟ್ಟವಾದ ಕಂದುಬಣ್ಣದ ಚುಕ್ಕೆಗಳು ಚೌಕಾಕಾರದಲ್ಲಿ ಕಂಡುಬರುತ್ತವೆ. ಹುಳುಗಳು ಎಲೆಗಳನ್ನು ಕೆರೆದು ತಿನ್ನುವುದರಿಂದ ನೀಳವಾದ, ಚಿಂದಿಯಂತಾದ ರಂಧ್ರಗಳು ಕಾಣಿಸಿಕೊಳ್ಳುತ್ತವೆ.  ಎಲೆ ಸುಳಿಯನ್ನು ತಿಂದು ಹಾಳು ಮಾಡುತ್ತವೆ.  ಆ ಸುಳಿಯಲ್ಲಿ ತೇವದಿಂದ ಕೂಡಿದ ಕಂದು ಬಣ್ಣದ ಹಿಕ್ಕೆಗಳನ್ನು ಕಾಣಬಹುದು.

ಲದ್ದಿ ಹುಳುವಿನ ಹತೋಟಿ ಕ್ರಮಗಳು

* ಮುಸುಕಿನ ಜೋಳದ ಜೊತೆ ಮಿಶ್ರ ಬೆಳೆ (ಮುಸುಕಿನ ಜೋಳ+ತೊಗರಿ) ಬಿತ್ತುವುದು.

* ಸಮತೋಲನ ರಾಸಾಯನಿಕ ಗೊಬ್ಬರ ಬಳಸುವುದು.

* ಮೊಟ್ಟೆಗಳ ಗುಂಪು ಹಾಗೂ ಮೊದಲ ಹಂತದ ಮರಿಗಳಿರುವ ಎಲೆಗಳನ್ನು ಕಿತ್ತು ನಾಶ ಮಾಡುವುದು

* ಪ್ರತಿ ಎಕರೆಗೆ 30 ಪಕ್ಷಿ ಸೂಚಿಗಳನ್ನು ನೆಡುವುದು.

* 30 ದಿನಗಳ ಬೆಳೆಯಲ್ಲಿ ಪ್ರತಿ ಎಕರೆಗೆ 15 ರಂತೆ ಮೋಹಕ ಬಲೆಗಳನ್ನು ಅಳವಡಿಸುವುದು.

* ತತ್ತಿಗಳ ಪರತಂತ್ರ ಜೀವಿಯಾದ ಟ್ರೈಕೊ ಗ್ರಾಮ ಪ್ರೀಟಿಯೋಸಮ್ ಅನ್ನು ಪ್ರತಿ ಎಕರೆಗೆ 50,000ದಂತೆ (3 ಟ್ರೈಕೋಕಾರ್ಡ್‍ಗಳನ್ನು) ನಿರ್ಧರಿತ ಅಂತರದಲ್ಲಿ ಬೆಳೆಗಳಲ್ಲಿ ಬಿಡುವುದು.

* ಮೆಟರೈಜೀಂ ಅನಿಸೋಪ್ಲಿಯೆ (1×108 ಸಿಎಫ್‍ಯು/ಗ್ರಾಂ) 5 ಗ್ರಾಂ. ಪ್ರತಿ ಲೀಟರ್ ನೀರಿಗೆ ಅಥವಾ ನ್ಯೂಮೋರಿಯಾ ರಿಲೈ (1×108 ಸಿಎಫ್‍ಯು/ಗ್ರಾಂ) ಅನ್ನು 3 ಗ್ರಾಂ. ನಂತೆ ಪ್ರತಿ ಲೀಟರ್ ನೀರಿಗೆ ಬೆರೆಸಿ ಸುಳಿಗೆ ಸಿಂಪರಣೆ ಮಾಡುವುದು.

* ಲದ್ದಿ ಹುಳುವಿನಿಂದ ಶೇ.10ರಷ್ಟು (ಪ್ರತಿ 100 ಗಿಡಗಳಿಗೆ 10 ಗಿಡಗಳು) ಹಾನಿಯಾಗಿದ್ದಲ್ಲಿ ಶೇ.5ರ ಬೇವಿನ ಕಷಾಯ (ಅಜಾಡಿರೆಕ್ಟಿನ್ 1500 ಪಿಪಿಎಂ) 5 ಮಿ. ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. 

* ಲದ್ದಿ ಹುಳುವಿನಿಂದ ಶೇ.20 ರಷ್ಟು ಹಾನಿಯಾಗಿದ್ದಲ್ಲಿ ಎಮಾಮೆಕ್ಟಿನ್ ಬೆಂಜೋ ಯೇಟ್ 5 % ಎಸ್. ಜಿ ಅನ್ನು 0.4ಗ್ರಾಂ. ನಂತೆ ಅಥವಾ ಸ್ಪೈನೋಸಾಡ್ 45 ಎಸ್. ಸಿ. ಅನ್ನು 0.3 ಮಿ.ಲೀ. ಅಥವಾ ಥೈಯೋಡಿಕಾರ್ಬ್‌ಅನ್ನು 2 ಗ್ರಾಂ ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪರಣೆ ಮಾಡುವುದು ಹಾಗೂ ಪ್ರತಿ ಸಿಂಪರಣೆಯನ್ನು ಮುಂಜಾನೆ / ಸಾಯಂಕಾಲದಲ್ಲಿ ಕೈಗೊಳ್ಳುವುದು.

* ವಿಷ ಪ್ರಾಶನದ ಬಳಕೆ: 10 ಕೆ.ಜಿ. ಗೋಧಿ ತೌಡು ಅಥವಾ ಅಕ್ಕಿ ತೌಡಿಗೆ 1 ಕೆ.ಜಿ. ಬೆಲ್ಲ ಹಾಗೂ ಸ್ವಲ್ಪ ನೀರನ್ನು ಬೆರೆಸಿಟ್ಟು, ಮಾರನೇ ದಿನ 100 ಗ್ರಾಂ ಥೈಯೋಡಿಕಾರ್ಬ್ (ಪ್ರತಿ ಕೆ.ಜಿ. ಗೋಧಿ ತೌಡು ಅಥವಾ ಅಕ್ಕಿ ತೌಡಿಗೆ 10 ಗ್ರಾಂ. ನಂತೆ) ಕೀಟನಾಶಕ ಮಿಶ್ರಣ ಮಾಡಿ ಬೆಳೆಯ ಸುಳಿಯಲ್ಲಿ ಉದುರಿಸುವುದು.

ವಿಶೇಷ ಸೂಚನೆ : * ಕೀಟನಾಶಕವನ್ನು ಸುಳಿಯಲ್ಲಿ ಬೀಳುವಂತೆ ಸಿಂಪರಣೆ ಮಾಡಬೇಕು

* ಕೀಟನಾಶಕ ಸಿಂಪರಣೆ ಮಾಡುವಾಗ ಕಡ್ಡಾ ಯವಾಗಿ ಸುರಕ್ಷತಾ ಕವಚಗಳನ್ನು ಬಳಸಿ ಸಿಂಪರಣಾ ದ್ರಾವಣ ದೇಹದ ಮೇಲೆ ಬೀಳದಂತೆ ಹಾಗೂ ಉಸಿರಾಟದ ಮೂಲಕ ದೇಹ ಸೇರದಂತೆ ಮುನ್ನೆಚ್ಚರಿಕೆ ವಹಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಮತ್ತು ರಿಯಾಯಿತಿ ದರದಲ್ಲಿ ಕೀಟ ನಾಶಕಗಳಿಗಾಗಿ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸುವಂತೆ  ಸಹಾಯಕ ಕೃಷಿ ನಿರ್ದೇಶಕರು  ತಿಳಿಸಿದ್ದಾರೆ.

error: Content is protected !!