ಮೂಢನಂಬಿಕೆ ವಿರುದ್ಧ ಧ್ವನಿ ಎತ್ತಿದ ನಾಯಕ ಬಸವಣ್ಣ

ಮೂಢನಂಬಿಕೆ ವಿರುದ್ಧ ಧ್ವನಿ ಎತ್ತಿದ ನಾಯಕ ಬಸವಣ್ಣ

ದಾವಣಗೆರೆ, ಜು.2- ಅನ್ಯಾಯ, ಶೋಷಣೆ ಮತ್ತು ಮೂಢನಂಬಿಕೆ ವಿರುದ್ಧ ಧ್ವನಿ ಎತ್ತಿದ ಬಸವಣ್ಣ ಸಾವಿರಾರು ವೇಶ್ಯೆಯರನ್ನು ಶರಣೆಯರ ನ್ನಾಗಿಸಿ ಸಮಾಜವನ್ನು ಪರಿವರ್ತನೆ ಗೊಳಿಸಿದ್ದಾರೆ ಎಂದು ಕಸಾಪ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಬಿ.ಎ. ವಿಶ್ವೇಶ್ವರಯ್ಯ ತಿಳಿಸಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ಆವರಗೆರೆಯ ಮಂಜುನಾಥೇಶ್ವರ ಪ್ರೌಢ ಶಾಲೆ ಮತ್ತು ಹಿರಿಯ ನಾಗರಿಕರ ಸಹಾಯ ವಾಣಿ ಇವರ ಸಂಯುಕ್ತಾಶ್ರಯದಲ್ಲಿ ಆವರಗೆರೆಯ ಪ್ರೌಢಶಾಲಾ ಆವರಣದಲ್ಲಿ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಕಾಯಕವನ್ನು ಕೈಲಾಸವಾಗಿಸಿ, ದಯೆಯನ್ನು ಧರ್ಮವಾಗಿಸಿ, ನೀರನ್ನು ತೀರ್ಥವಾಗಿಸಿ, ಅನ್ನವನ್ನು ಪ್ರಸಾದವಾಗಿಸಿ, ಆಚಾರವನ್ನು ಸ್ವರ್ಗವಾಗಿಸಿ, ಅನಾಚಾರವನ್ನು ನರಕವಾಗಿಸಿ, ದೇಹವನ್ನು ದೇಗುಲವಾಗಿಸಿ ಅಂಗೈಯಲ್ಲಿ ಲಿಂಗ ಕೊಟ್ಟು ಅಕ್ಷರ ಇಲ್ಲದವರಿಗೆ ಅಕ್ಷರ ಕೊಟ್ಟು, ಧರ್ಮ ಇಲ್ಲದವರಿಗೆ ಧರ್ಮ ಕೊಟ್ಟು ಕೆಳಗೆ ಬಿದ್ದವರನ್ನು ಮೇಲೆತ್ತುವ ಕಾರ್ಯವನ್ನು ಶರಣರು ಮಾಡಿದ್ದರು ಎಂದು ಸ್ಮರಿಸಿದರು. 

ವರ್ಣ, ಲಿಂಗ, ಜಾತಿ ಹಾಗೂ ವರ್ಗದ ಭೇದವಿಲ್ಲದೆ ಸಮಸಮಾಜ ಕಟ್ಟುವ ನಿಟ್ಟಿನಲ್ಲಿ ಶೋಷಣೆಯಿಂದ ಸರ್ವರನ್ನೂ ಮುಕ್ತಗೊಳಿಸಲು ಬಸವಣ್ಣನವರು ತಮ್ಮ ಜೀವಮಾನವಿಡೀ ಶ್ರಮಿಸಿದರು ಎಂದರು.

ಜನಪದರು ಹೇಳುವಂತೆ ಬಸವಣ್ಣ ಕಾಯಕ ಕಲಿಸುದಕ ನಾಯಕ, ಉಣ ಕಲಿಸಿದ, ಉಡ ಕಲಿಸಿದ, ನಡೆ ಕಲಿಸಿದ, ನುಡಿ ಕಲಿಸಿದ, ನುಡಿದರೆ ಮುತ್ತಿನ ಹಾರದಂತಿರಬೇಕು ಎಂಬಂತಹ ಹಲವಾರು ವಚನಗಳ ಮೂಲಕ ಮಾತನಾಡುವುದನ್ನೂ ಕಲಿಸಿದರು ಎಂದು ಹೇಳಿದರು.

ತಾಲ್ಲೂಕು ಕಸಾಪ ಅಧ್ಯಕ್ಷರಾದ ಶ್ರೀಮತಿ ಸುಮತಿ ಜಯ್ಯಪ್ಪ ಮಾತನಾಡಿ, ವಿದ್ಯಾರ್ಥಿಗಳಿಗೆ ಅನ್ವಯವಾಗುವ ಬಸವಣ್ಣನವರ ಆದರ್ಶಗಳನ್ನು ವಚನಗಳ ಮೂಲಕ ಮನಮುಟ್ಟುವಂತೆ ಮಕ್ಕಳಿಗೆ ತಿಳಿಸಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ವೈಶಿಷ್ಟ್ಯದ ಅರಿವು ಮೂಡಿಸುವ ನಿಟ್ಟಿನಲ್ಲಿ `ಕನ್ನಡ ಕೇವಲ ಕೊರಳಿನ ಭಾಷೆಯಾಗದೇ ಕರುಳಿನ ಭಾಷೆಯಾಗಲಿ’ಎಂದು ಸಲಹೆ ನೀಡಿದರು.

ಈ ವೇಳೆ ತಾಲ್ಲೂಕು ಕಸಾಪ ನಿರ್ದೇಶಕರಾದ ಕೆ.ಜಿ. ಸೌಭಾಗ್ಯ, ಹಿರಿಯ ನಾಗರಿಕರ ಸಹಾಯವಾಣಿ ಸಂಯೋಜಕ ನವೀನ್‌ ಕುಮಾರ್‌, ಗ್ರಾಮದ ಮುಖಂಡ ಮರಿಯಪ್ಪ, ಶಿಕ್ಷಕ ದೊಡ್ಡಯ್ಯ, ಜಗದೀಶ್, ದಯಾನಂದ ಉಪಸ್ಥಿತರಿದ್ದರು. 

ತಾಲ್ಲೂಕು ಕಸಾಪ ನಿರ್ದೇಶಕ ಷಡಕ್ಷರಪ್ಪ ಎಂ. ಬೇತೂರು ಪ್ರಾಸ್ತಾವಿಕ ಮಾತನಾಡಿದರು. 9ನೇ ತರಗತಿ ವಿದ್ಯಾರ್ಥಿ ರಮೇಶ್ ಕವನ ವಾಚನ ಮಾಡಿದರು. ಜೆ. ಕಲ್ಲೇಶ್‌ ಸ್ವಾಗತಿಸಿದರು. ಬಿ. ವಿರೂಪಾಕ್ಷಪ್ಪ ವಂದಿಸಿದರು. ಎಲ್.ಸಿ. ಲೋಕೇಶ್ವರಾಚಾರಿ ನಿರೂಪಿಸಿದರು.

error: Content is protected !!