ಊರಿನ ಸ್ವಚ್ಛತೆಯಲ್ಲಿ ಹರಿಹರ ನಗರಸಭೆ ವಿಫಲ

ಊರಿನ ಸ್ವಚ್ಛತೆಯಲ್ಲಿ ಹರಿಹರ ನಗರಸಭೆ ವಿಫಲ

ಐತಿಹಾಸಿಕ ಊರಿಗೆ ಸ್ವಚ್ಛತೆಯ ಸಂಕಟ, ಎಲ್ಲೆಂದರಲ್ಲಿ ಕಸದ ರಾಶಿ, ಸೊಳ್ಳೆ ಕಾಟ

800 ವರ್ಷಗಳ ಇತಿಹಾಸ ಹೊಂದಿದ ಊರೇ ಹರಿಹರ. ಇಂತಹ ಐತಿಹಾಸಿಕ ನಗರ ಸ್ವಚ್ಛತೆಯಲ್ಲಿ ಎಡವಿದೆ. ಎಲ್ಲೆಂದರಲ್ಲಿ ಕಸದ ರಾಶಿ ಮತ್ತು ಹೂಳು ತುಂಬಿದ ಚರಂಡಿಗಳು, ಊರಿನ ಎಲ್ಲ ಬಡಾವಣೆಯಲ್ಲೂ ಕಾಣುತ್ತಿವೆ.

ಹೌದು, ನಗರ ಸಭೆಯ ನಿರ್ಲಕ್ಷ್ಯದಿಂದ  ಅನೇಕ ಬಡಾವಣೆಯಲ್ಲಿ ಸ್ವಚ್ಛತೆ ಕ್ಷೀಣಿಸಿದ  ಪರಿಣಾಮ ಸೊಳ್ಳೆಗಳ ಕಾಟಕ್ಕೆ ನಾಗರಿಕರು ಬೇಸತ್ತಿದ್ದಾರೆ ಮತ್ತು ಡೆಂಗ್ಯೂ ರೋಗಕ್ಕೆ ತುತ್ತಾಗುವ ಆತಂಕದಲ್ಲಿದ್ದಾರೆ.

ಹಳೆ ಪಿಬಿ. ರಸ್ತೆ, ಗಾಂಧಿ ನಗರ, ಹೊಸ ಭರಂಪುರ, ತಗ್ಗಿನಕೇರಿ, ಕೋಟೆ ಬಡಾವಣೆ, ಪೌರ ಕಾರ್ಮಿಕರ ಬಡಾವಣೆ, ಹಳ್ಳದಕೇರಿ, ನಡವಲ ಪೇಟೆ, ವಿಜಯನಗರ ಬಡಾವಣೆ, ಎ.ಕೆ. ಕಾಲೊನಿ, ವಾಗೀಶ್ ಬಡಾವಣೆ, ಹೈಸ್ಕೂಲ್ ಬಡಾವಣೆ, ಇಂದ್ರಾನಗರ, ವಿದ್ಯಾನಗರ, ಬೆಂಕಿನಗರ, ಹರ್ಲಾಪುರ, ಕೆ.ಹೆಚ್.ಬಿ. ಕಾಲೋನಿ, ಗುತ್ತೂರು, ಅಮರಾವತಿ ಮುಖ್ಯ ರಸ್ತೆ, ದೇವಸ್ಥಾನ ರಸ್ತೆ, ರಾಣಿ ಚೆನ್ನಮ್ಮ ವೃತ್ತ, ಕೈಲಾಸ ನಗರ  ಸೇರಿದಂತೆ ಅನೇಕ ಬಡಾವಣೆಗಳು ಸ್ವಚ್ಛತೆಯಿಂದ ದೂರ ಉಳಿದಿವೆ.

ಹೆಚ್ಚು ಜನಸಂದಣಿ ಇರುವ ತರಕಾರಿ ಮಾರುಕಟ್ಟೆ, ದೇವಸ್ಥಾನ ರಸ್ತೆ, ಪೊಲೀಸ್ ಠಾಣೆ ಸರ್ಕಲ್, ತಹಶೀಲ್ದಾರ್ ಕಚೇರಿ ಆವರಣ ಮತ್ತು ಶಿವಮೊಗ್ಗ ರಸ್ತೆಯಲ್ಲಿ ಇರುವ ಕಸದ ರಾಶಿಯನ್ನು ನಗರಸಭೆಯ ಆರೋಗ್ಯಾ ಧಿಕಾರಿಗಳು ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದ್ದಾರೆ.

ಮಳೆಗಾಲದ ಪೂರ್ವ ಚರಂಡಿ ಹೂಳು ತೆಗೆದು, ಮಳೆಗಾಲ ಎದುರಿಸಲು ಸಜ್ಜಾಗಬೇಕಾದ ನಗರ ಸಭೆ ಹಿನ್ನೆಡೆ ಸಾಧಿಸಿದೆ. ಕಳೆದ ಒಂದು ವಾರದಿಂದ ನಗರದಲ್ಲಿ ತುಂತುರು ಮಳೆ ಆಗುತ್ತಿದ್ದು, ಮಳೆಯ ನೀರು ಹರಿದು ಮುಂದೆ ಸಾಗದೇ ನಿಲ್ಲುತ್ತಿರುವ ಕಾರಣ ನಗರದಲ್ಲಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾದ ಹಿನ್ನೆಲೆ ಡೆಂಗ್ಯೂ ತರಹದ ಸಾಂಕ್ರಾಮಿಕ ಸೊಂಕು ಹರಡುವುದಕ್ಕೆ ಎಡೆಮಾಡಿಕೊಟ್ಟಿದೆ.

ಕೆ.ಹೆಚ್.ಬಿ. ಕಾಲೊನಿಯ ವಾಸಿಗಳು ನಗರದ ಸ್ವಚ್ಛತೆಗೆ ಆದ್ಯತೆ ನೀಡುವಂತೆ ನಗರ ಸಭೆಗೆ ಮನವಿ ಸಲ್ಲಿಸಿ, ಪತ್ರಿಕಾಗೋಷ್ಠಿಯ ಮೂಲಕ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಅಧಿಕಾರಿಗಳು ಮತ್ತು ಸಿಬ್ಬಂದಿ ಮೊಂಡುತನದ ವರ್ತನೆ ಪ್ರದರ್ಶಿಸುತ್ತಿದ್ದಾರೆ.

ಆರೋಗ್ಯ ಇಲಾಖೆಯ ಅಧಿಕಾರಿ ಗಳು ಕೇವಲ ಫೋಟೋ ಮತ್ತು ಪ್ರಚಾರ ಕ್ಕಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆಯೇ ಹೊರತು, ಸಾರ್ವಜನಿಕರಿಗೆ ಉಪಯುಕ್ತ ಆಗುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿಲ್ಲ.

ನಗರಸಭೆಯ ವಾರ್ಷಿಕ ಬಜೆಟ್‌ನಲ್ಲಿ ಸ್ವಚ್ಛತೆಗೆ ಹೆಚ್ಚು ಹಣ ಮೀಸಲಿರಿಸಿದ್ದರೂ ನಗರದ ಸ್ವಚ್ಛತಾ ಅಭಿವೃದ್ಧಿ, ಪ್ರಗತಿ ಕಾಣುತ್ತಿಲ್ಲ.

ಸಂಬಂಧಿಸಿದ ಅಧಿಕಾರಿಗಳು ಸಾರ್ವಜನಿಕ ಹಿತದೃಷ್ಟಿಯಿಂದ ನ್ಯಾಯ ಬದ್ಧವಾಗಿ ಕರ್ತವ್ಯ ನಿರ್ವಹಿಸಿ ಸಾರ್ವಜನಿಕರ ಆರೋಗ್ಯಕ್ಕೆ ತೊಂದರೆ ಆಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕೆಂಬುದು ಸ್ಥಳೀಯರ ಕೂಗು.

ಎಂ. ಚಿದಾನಂದ ಕಂಚಿಕೇರಿ

error: Content is protected !!