ದಾವಣಗೆರೆ, ಜು.2- ಮೊಬೈಲ್ ಟ್ಯಾರಿಫ್ ದರ ಏರಿಕೆಯನ್ನು ಖಂಡಿಸಿ ಆಲ್ ಇಂಡಿಯಾ ಯೂತ್ ಆರ್ಗನೈಸೇಷನ್ ನಗರದ ಗಾಂಧಿ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿತು.
ಈ ವೇಳೆ ಎಐಡಿವೈಒ ಪದಾಧಿಕಾರಿ ಅನಿಲ್ ಬಳ್ಳಾರಿ ಮಾತನಾಡಿ, ದಿನ ನಿತ್ಯದ ಅವಶ್ಯಕತೆಯಲ್ಲಿ ಸೇರಿಕೊಂಡ ಮೊಬೈಲ್ ಹಲವಾರು ಕಾರ್ಯಗಳಿಗೆ ಅನುಕೂಲವಾಗಿದೆ. ಆದರೆ ಮೊಬೈಲ್ ಟ್ಯಾರಿಫ್ ದರ ಏರಿಕೆ ಜನರಿಗೆ ಗಾಯದ ಮೇಲೆ ಬರೆ ಹಾಕಿದಂತೆ ಆಗಿದೆ ಎಂದರು.
ಸರ್ಕಾರದ ಖಾಸಗೀಕರಣ ನೀತಿಯಿಂದಾಗಿ ಹಲವು ಖಾಸಗಿ ಕಂಪನಿಗಳು ದೇಶದ ದೂರಸಂಪರ್ಕ ಕ್ಷೇತ್ರದಲ್ಲಿ ಹಿಡಿತ ಸಾಧಿಸಿವೆ. ಆದ್ದರಿಂದ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ರೆಕ್ಕೆಯಿಲ್ಲದ ಹಕ್ಕಿಯಂತಾಗಿದ್ದು, ಖಾಸಗಿ ಕಂಪನಿಗಳ ಜೊತೆ ಸ್ಪರ್ಧಿಸಲಾಗದೇ ಸಾವಿನಂಚಿನಲ್ಲಿದೆ ಎಂದು ಆಕ್ರೋಶ ಹೊರಹಾಕಿದರು.
ಇದು ಸರ್ಕಾರದ ಉದ್ದೇಶ ಪೂರಿತ ನಿಲುವಾಗಿದ್ದು, ಖಾಸಗಿ ಕಂಪನಿಗಳು ಅತ್ಯಧಿಕ ಲಾಭ ಗಳಿಸುವ ಉದ್ದೇಶ ದೇಶದ ಜನರ ಮೇಲೆ ಪರಿಣಾಮ ಬೀರಲಿದೆ ಎಂದು ದೂರಿದರು.
ಟ್ರಾಯ್ ಖಾಸಗಿ ಕಂಪನಿ ಸಂಸ್ಥೆಯಂತೆ ಕೆಲಸ ಮಾಡುತ್ತಿದೆ. ಇಂತಹ ಜನವಿರೋಧಿ ನೀತಿಯನ್ನು ಎಐಡಿವೈಒ ಅತ್ಯುಗ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.
ಸಂಘಟನೆಯ ಪದಾಧಿಕಾರಿಗಳಾದ ಅಭಿಷೇಕ್, ಗುರು, ಶಶಿ, ವಿದ್ಯಾರ್ಥಿಗಳು ಮತ್ತು ಯುವಕರಿದ್ದರು.