ವಿವೇಕ್ ಪೋಷಕರ ಕಾರ್ಯಾಗಾರದಲ್ಲಿ ನೇತ್ರ ತಜ್ಞ ಡಾ.ಶಿವಯೋಗಿ ಕುಸಗೂರ್ ಸಲಹೆ
ದಾವಣಗೆರೆ, ಜು.1- 40 ವರ್ಷ ಮೇಲ್ಪಟ್ಟವರು ವರ್ಷಕ್ಕೊಮ್ಮೆ ಕಡ್ಡಾಯವಾಗಿ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಜೆಜೆಎಂಎಂಸಿ ಪ್ರಾಧ್ಯಾಪಕ ಹಾಗೂ ನೇತ್ರ ತಜ್ಞ ಡಾ.ಶಿವಯೋಗಿ ಆರ್.ಕುಸಗೂರ್ ಸಲಹೆ ನೀಡಿದರು.
ನಗರದ ಬಾಪೂಜಿ ಮಕ್ಕಳ ಆಸ್ಪತ್ರೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರದಲ್ಲಿ `ಕಣ್ಣಿನ ಆರೋಗ್ಯಕ್ಕೆ ಕೆಲವು ಸುಲಭ ಸೂತ್ರಗಳು’ ಎಂಬ ವಿಷಯ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.
ಅನುವಂಶಿಕವಾಗಿ ಕಾಯಿಲೆ ಇದ್ದಲ್ಲಿ ಅವರ ಕುಟುಂಬದವರು, ಮೈನಸ್ ನಂಬರ್ನ ಕನ್ನಡಕ ಧರಿಸುತ್ತಿರುವವರು ಸಹ ವಾರ್ಷಿಕ ತಪಾಸಣೆಗೆ ಒಳಗಾಗಬೇಕು. ದೇಶದಲ್ಲಿ ಶೇ.80ರಷ್ಟು ಜನ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವರ್ಷಕ್ಕೆ 55 ಲಕ್ಷ ಜನರಿಗೆ ಕಣ್ಣಿನ ಪೊರೆ ಚಿಕಿತ್ಸೆ ಆಗಬೇಕಿದ್ದರೂ ಕೇವಲ 37 ಲಕ್ಷ ಜನರು ಮಾತ್ರ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿ ಪ್ರತಿ ವರ್ಷ 2 ಲಕ್ಷ ಜನರಿಗೆ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಆಗುತ್ತಿದೆ. ಸ್ವಯಂ ಸೇವಾ ಸಂಸ್ಥೆಗಳು ನೇತ್ರ ತಪಾಸಣಾ ಶಿಬಿರ ನಡೆಸುತ್ತಾ ಸಹಕಾರ ನೀಡುತ್ತಿವೆ ಎಂದು ವಿವರಿಸಿದರು.
ಗ್ಲಾಕೋಮಾ ತೊಂದರೆಯಿಂದ ಬಳಲುವ ರೋಗಿಗಳು ಕಾಲಕಾಲಕ್ಕೆ ಕಣ್ಣಿನ ಒತ್ತಡ ಪರೀಕ್ಷೆ ಮತ್ತು ಒತ್ತಡ ಕಡಿಮೆಗೊಳಿಸುವ ಹನಿಗಳ ನಿರಂತರ ಬಳಕೆಯಿಂದಲೂ ಗ್ಲಾಕೋಮ ತಡೆಗಟ್ಟಬಹುದು. ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳು, ಪ್ರತಿ ಆರು ತಿಂಗಳಿಗೊಮ್ಮೆಯಾದರೂ ರೆಟಿನಾ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ ಎಂದು ಅವರು ಸಲಹೆ ನೀಡಿದರು.
ಅಮೆರಿಕಾದಲ್ಲಿ ಸಂಶೋಧನೆ ನಡೆದಿರುವ ಪ್ರಕಾರ ಪೂರ್ಣ ಅಂಧರಿಗೆ ಜೈವಿಕ ಕಣ್ಣು (ಬಯೋನಿಕ್ ಐ) ಬರುತ್ತಿದೆ. ಅಂಧರಿಗೆ ಕನ್ನಡಕದಲ್ಲಿ ಕ್ಯಾಮರಾ ಮೂಲಕ ದೃಷ್ಟಿ ಅನುಭವ ಮೂಡಿಸುವ ಜೈವಿಕ ಕಣ್ಣು ಅಂಧರಿಗೆ ಆಶಾಕಿರಣ ಮೂಡಿಸಿದೆ. ಭಾರತಕ್ಕೆ ಆ ಸಂಶೋಧನೆಯ ಫಲ ದೊರೆಯಲು ಇನ್ನೂ 10 ವರ್ಷ ಕಾಯಬೇಕಾಗಬಹುದು ಎಂದರು.
ಮೆಳ್ಳೆಗಣ್ಣಿನ ಬಗ್ಗೆ ಕೆಲವು ಪಾಲಕರಲ್ಲಿ ತಪ್ಪು ಕಲ್ಪನೆ ಇದೆ.ಇದನ್ನು ಅವರು ಅದೃಷ್ಟ, ಶುಭ ಸೂಚಕ ಎಂದು ಭಾವಿಸುತ್ತಾರೆ. ಸೂಕ್ತ ಚಿಕಿತ್ಸೆ ನೀಡಿದರೆ ಈ ಕಾಯಿಲೆ ಗುಣಪಡಿಸಬಹುದು ಎಂದು ಹೇಳಿದರು. ಮರಣಾನಂತರ ದಾನ ಮಾಡುವ ಎರಡು ಕಣ್ಣುಗಳು ಇಬ್ಬರ ಬಾಳಿಗೆ ಬೆಳಕಾಗಲಿವೆ. ಆದ್ದರಿಂದ ನೇತ್ರದಾನ ಮಾಡುವಂತೆ ಅವರು ತಿಳಿಸಿದರು.
ಬಾಪೂಜಿ ಮಕ್ಕಳ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕರಾದ ಮಕ್ಕಳ ತಜ್ಞ ಡಾ. ಜಿ.ಗುರುಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಮೃತ್ಯುಂಜಯ, ಡಾ.ರೇವಪ್ಪ, ಸಿದ್ದೇಶ್ವರ ಗುಬ್ಬಿ, ಪೋಷಕರು, ನರ್ಸಿಂಗ್ ವಿದ್ಯಾರ್ಥಿಗಳು, ಆಸ್ಪತ್ರೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.