ಮಾನವನಲ್ಲಿ ಅರಿವಿನ ಜ್ಞಾನ ಹೆಚ್ಚಲಿ : ಮು.ಬಸವಲಿಂಗ ಶ್ರೀಗಳು

ಮಾನವನಲ್ಲಿ ಅರಿವಿನ ಜ್ಞಾನ ಹೆಚ್ಚಲಿ : ಮು.ಬಸವಲಿಂಗ ಶ್ರೀಗಳು

ದಾವಣಗೆರೆ, ಜು.1- ಮಾನವನ ಜೀವನದಲ್ಲಿ ದುಃಖದ ತಾಪಮಾನ ಕಡಿಮೆಯಾಗಬೇಕೆಂದರೆ, ಅರಿವಿನ ಜ್ಞಾನ ಹೆಚ್ಚಾಗಬೇಕು ಎಂದು ಹಾಲಕೆರೆ ಸಂಸ್ಥಾನದ ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.

ಇಲ್ಲಿನ ಹಾಲಕೆರೆ ಶ್ರೀ ಅನ್ನದಾನೇಶ್ವರ ಶಾಖಾ ಮಠದಲ್ಲಿ ಮೊನ್ನೆ ಆಯೋಜಿಸಿದ್ದ 270ನೇ ಶಿವಾನುಭವ ಸಂಪದ ಹಾಗೂ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ನಮ್ಮ ಸುತ್ತಲಿನ ಪರಿಸರದಲ್ಲಿ ಎಷ್ಟು ಅಂಧಕಾರವಿದೆ ಎನ್ನುವುದಕ್ಕಿಂತ ಅದರ ಬಗ್ಗೆ ನನ್ನ ಬಳಿ ಅರಿವು ಎಷ್ಟಿದೆ ಎಂಬುದನ್ನು ಚಿಂತಿಸಬೇಕು ಎಂದು ಹೇಳಿದರು.

ದಾವಣಗೆರೆ ವಿವಿಯ ಸಸ್ಯಶಾಸ್ತ್ರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸಿದ್ದಪ್ಪ ಬಿ. ಕಕ್ಕಳಮೇಲಿ ಮಾತನಾಡಿ, ಸಸ್ಯದಲ್ಲಿ ಆಯುರ್ವೇದದ ಔಷಧ ಗುಣ ಹೇರಳ ವಾಗಿರುವುದರಿಂದ ಪ್ರಸಕ್ತ ದಿನದಲ್ಲಿ ಸಸ್ಯ ಸಂರಕ್ಷಣೆ ಮುಖ್ಯ ಎಂದು ಹೇಳಿದರು.

ವಿವಿಧ ರೀತಿಯ ಪ್ರಾಣಿ ಸಂಕುಲದ ಜೊತೆ ಬದುಕ ಬೇಕೆಂದರೆ ಅದು ಈ ಭೂಮಂಡಲದಲ್ಲಿ ಮಾತ್ರ ಸಾಧ್ಯ. ಆದ್ದರಿಂದ ಇಂತಹ ಸ್ಥಿತಿಯಲ್ಲಿ ಗುಡ್ಡ-ಗಾಡು ಪ್ರದೇಶವನ್ನು ಹಾಳು ಮಾಡದೆ, ಸಸಿ ನೆಡುವ ಕಾರ್ಯಕ್ರಮದಲ್ಲಿ ತೊಡಗುವ ಮೂಲಕ ಮನುಷ್ಯ ಮತ್ತು ಜೀವಸಂಕುಲ ಉಳಿಸಲು ಎಲ್ಲರೂ ಶ್ರಮಿಸಬೇಕಿದೆ ಎಂದರು.

ಹರಿಹರ ಪುರಸಭೆ ಮಾಜಿ ಅಧ್ಯಕ್ಷ ಲಿಂ. ಯಜಮಾನ್ ಟಿ. ಜಯದೇವಪ್ಪ, ಲಿಂ. ತಿಪ್ಪಮ್ಮ ಇವರ ಸ್ಮರಣಾರ್ಥ ಅವರ ಪುತ್ರರಾದ ಬಕ್ಕಪ್ಪ, ರುದ್ರೇಶ್ ಮತ್ತು ಟಿ. ಸುರೇಶ್ ಅವರು ಭಕ್ತಿ ಸೇವೆ ವಹಿಸಿಕೊಂಡಿದ್ದರು.

ಗುರು ಪಂಚಾಕ್ಷರಿ ಸಂಗೀತ ಶಾಲೆಯ ಟಿ.ಹೆಚ್.ಎಂ. ಶಿವಕುಮಾರ್ ಸ್ವಾಮಿ ಮತ್ತು ಸಂಗಡಿಗರಿಂದ ವಚನ ಗಾಯನ ನಡೆಯಿತು.

ಡಾ. ಸಿದ್ದಪ್ಪ, ಅಮರಯ್ಯ ಗುರುವಿನ ಮಠ, ಕಾರ್ಯದರ್ಶಿ ಎನ್. ಅಡಿವೆಪ್ಪ, ಹಿರಿಯ ಪತ್ರಕರ್ತ ವೀರಪ್ಪ ಎಂ. ಬಾವಿ, ನಾಗರಾಜ ಯರಗಲ್, ನಿವೃತ್ತ ಶಿಕ್ಷಕ ಮಹಾರುದ್ರಪ್ಪ ಮೆಣಸಿನಕಾಯಿ, ಶಿಕ್ಷಕಿ ಸುಜಾತಾ, ವಿ.ಬಿ. ತನುಜ ಮತ್ತಿತರರಿದ್ದರು.

error: Content is protected !!