ದಾವಣಗೆರೆ, ಜು.1- ಸಮಾಜ ಸೇವೆಗೆ ದಾನಿಗಳ ಸಹಕಾರ ಹೆಚ್ಚಿನ ಸಂಖ್ಯೆಯಲ್ಲಿ ಆಗಬೇಕೆಂದು ಉದ್ಯಮಿ ಪ್ರಭಾಕರ್ ಶೆಟ್ಟಿ ಹೇಳಿದರು.
ಬಹುಜನ ಸಮಾಜ ಸೇವಾ ಸಂಘದ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್, ಜಗಜೀವನ್ ರಾಮ್ ಅವರ ಜಯಂತ್ಯುತ್ಸವ ಹಾಗೂ ಸಂಘದ 16ನೇ ವಾರ್ಷಿಕೋತ್ಸವದ ಪ್ರಯುಕ್ತ ನಗರದ ರೋಟರಿ ಬಾಲ ಭವನದ ಕೇಶವಮೂರ್ತಿ ಸಭಾಂಗಣದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಂಘಟನೆ ಇನ್ನೂ ಹೆಚ್ಚಿನ ಸಮಾಜ ಸೇವೆಯಲ್ಲಿ ತೊಡಗಲಿ ಎಂದ ಅವರು, ನೂತನ ದಂಪತಿಗಳಿಗೆ ಶುಭ ಹಾರೈಸಿ, ಆದರ್ಶ ಜೀವನ ನಡೆಸುವಂತೆ ಕಿವಿಮಾತು ಹೇಳಿದರು.
ಆನೆಕೊಂಡ ನಾಗರಾಜ್ ಮಾತನಾಡಿ, ದಲಿತ ಜನರ ಉದ್ದಾರಕ್ಕಾಗಿ ಬಹುಜನ ಸಮಾಜ ಸೇವಾ ಸಂಘ ಶ್ರಮ ಪಡುತ್ತಿದೆ. ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಸಮಾಜ ಪರ ಕಾರ್ಯಕ್ರಮ ಸಂಘದಿಂದ ನಡೆಯಲಿ ಎಂದು ಆಶಿಸಿದರು.
ಮಕ್ಕಳಿಗೆ ತಪ್ಪದೇ ಶಿಕ್ಷಣ ಕೊಡಿಸುವ ಮೂಲಕ ದಲಿತರ ಮಕ್ಕಳೂ ಸಮಾಜದ ಮೇಲ್ದರ್ಜೆಯಲ್ಲಿ ಬದುಕುವ ಜತೆಗೆ ಸಮಾಜಕ್ಕೆ ಉತ್ತಮ ಪ್ರಜೆಯಾಗಬೇಕು ಎಂದು ಹೇಳಿದರು.
ಸಂಘದ ಗೌರವಾಧ್ಯಕ್ಷ ಹೆಗ್ಗೆರೆ ರಂಗಪ್ಪ ಪ್ರಾಸ್ತಾವಿಕ ಮಾತನಾಡಿ, ಅಂತರ್ಜಾತಿ ವಿವಾಹದಿಂದ ಜಾತಿಯತೆ ಹೋಗಲಿದೆ. ಜಾತಿಪದ್ಧತಿ ಹೋಗುವವರೆಗೂ ದೇಶದ ಅಭಿವೃದ್ಧಿ ಆಗುವುದಿಲ್ಲ ಎಂಬ ಅಂಬೇಡ್ಕರ್ ಅವರ ಮಾತನ್ನು ಸ್ಮರಿಸಿದರು.
ಜಿಲ್ಲಾಧ್ಯಕ್ಷ ಎಂ. ಆಂಜನೇಯ, ಉಪಾಧ್ಯಕ್ಷ ಟಿ. ಶೇಖರ್ ಕಾಟೀಹಳ್ಳಿ, ಜಗಳೂರಿನ ಕುಬೇರಪ್ಪ, ಜಗಳೂರಿನ ಲೋಕಪ್ಪ, ಶಾಂತರಾಜ್, ಹುಲಿಕಟ್ಟೆ ಮಂಜಪ್ಪ, ಪುರೋಹಿತ ಸುರೇಶ್ ಭಟ್, ಸಂಘದ ಪದಾಧಿಕಾರಿಗಳು ಹಾಗೂ ಇತರರು ಇದ್ದರು.