ದಾವಣಗೆರೆ, ಜೂ. 30- ಇಲ್ಲಿನ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಎಸ್ಪಿ ಉಮಾ ಪ್ರಶಾಂತ್ ಅಧ್ಯಕ್ಷತೆಯಲ್ಲಿ ಮಂಗಳವಾರ ಜನ ಸಂಪರ್ಕ ಸಭೆ ನಡೆಯಿತು. ಈ ವೇಳೆ ಮೊಬೈಲ್ ಕಳೆದುಕೊಂಡ ವಾರಸುದಾರರಿಗೆ ಮೊಬೈಲ್ ಹಿಂದಿರುಗಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಳೆದುಹೋದ ಮೊಬೈಲ್ಗಳ ಪೈಕಿ 260 ಮೊಬೈಲ್ಗಳನ್ನು ಸಿಇ ಐಆರ್ ಪೋರ್ಟಲ್ ಮೂಲಕ ಪತ್ತೆ ಮಾಡಿದ್ದು, 144 ಮೊಬೈಲ್ ಗಳನ್ನು ವಾರಸುದಾರರಿಗೆ ಹಿಂದಿರುಗಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್ಪಿ ಉಮಾ ಪ್ರಶಾಂತ್, ಜಿಲ್ಲೆಯಲ್ಲಿ ಸಿಇಐಆರ್ ಪೋರ್ಟಲ್ ಆರಂಭವಾದಾಗಿನಿಂದ ಇಲ್ಲಿವರೆಗೆ 2968 ಮೊಬೈಲ್ ಗಳನ್ನು ಪತ್ತೆ ಹಚ್ಚಲಾಗಿದೆ. 1410 ಮೊಬೈಲ್ ಗಳನ್ನು ವಾರಸುದಾರರಿಗೆ ಹಿಂದಿರುಗಿಸಲಾಗಿದೆ ಎಂದರು.
ಚಿಕ್ಕಮಕ್ಕಳು ಗಾಡಿ ಓಡಿಸುವ ವಿಚಾರವಾಗಿ ಸ್ಪೇಷಲ್ ಡ್ರೈವ್ ಮಾಡಲಾಗುತ್ತಿದೆ. ಗಾಂಜಾ ಸೇವನೆ ಹಾಗೂ ಮಾರಾಟ ಮಾಡುವವರ ವಿರುದ್ದ ಜಿಲ್ಲೆಯಾದ್ಯಂತ ವಿಶೇಷ ಕಾರ್ಯಚರಣೆ ಕೈಗೊಂಡಿದ್ದು, ಈ ವರ್ಷ 70 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದರು.
ಮನೆಗೆ ಬೀಗ ಹಾಕಿಕೊಂಡು ಬೇರೆ ಊರಿಗೆ ಹೋದ ಸಮಯದಲ್ಲಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡುವ ಬಗ್ಗೆ ಸಾರ್ವಜನಿರಿಗೆ ಮಾಹಿತಿ ನೀಡಿದರು. ಪ್ರತಿ ಮನೆಯಲ್ಲಿ ಸಿಸಿ ಟಿವಿ ಅಳವಡಿಸಿಕೊಳ್ಳುವುದರಿಂದ ಅಪರಾಧಗಳನ್ನು ತಡೆಗಟ್ಟಲು ಹಾಗು ಆರೋಪಿಗಳನ್ನು ಪತ್ತೆ ಹಚ್ಚಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಎಂ ಸಂತೋಷ್, ಕೆಟಿಜೆ ನಗರ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್, ಪಿಎಸ್ಐ ಸಾಗರ್ ಅತ್ತರವಾಲ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.