ಅಧಿಕಾರಿಗಳಿಗೆ ಜಿಲ್ಲಾ ಪಂಚಾಯ್ತಿ ಲೆಕ್ಕಾಧಿಕಾರಿ ಸೌಮ್ಯಶ್ರೀ ನಿರ್ದೇಶನ
ಹರಿಹರ, ಜೂ.28- ತಾಲ್ಲೂಕಿನಲ್ಲಿ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚು ಆಗುತ್ತಿರುವ ಕಾರಣ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಸೇರಿದಂತೆ ಯಾವುದೇ ರೀತಿಯ ತೊಂದರೆಗಳು ಆಗದಂತೆ ಎಚ್ಚರಿಕೆ ವಹಿಸುವಂತೆ ಜಿಲ್ಲಾ ಪಂಚಾಯ್ತಿ ಇಲಾಖೆಯ ಲೆಕ್ಕಾಧಿಕಾರಿ ಸೌಮ್ಯಶ್ರೀ ತಿಳಿಸಿದರು. ನಗರದ ತಾ.ಪಂ ಕಚೇರಿಯ ಸಭಾಂಗಣದಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ಪಶುಪಾಲನೆ ಇಲಾಖೆಯ ಅಧಿಕಾರಿಗಳು ಜಾನುವಾರುಗಳಿಗೆ ಚರ್ಮಗಂಟು ರೋಗ, ಕರಳು ಬೇನೆ ರೋಗ, ಕಾಲುಬಾಯಿರೋಗ ಲಕ್ಷಣಗಳು ಹಸುಗಳಿಗೆ ಹರಡದಂತೆ ತಡೆಯಲು ಎಚ್ಚರಿಕೆ ವಹಿ ಸಬೇಕು. ಸಮಯಕ್ಕೆ ತಕ್ಕಂತೆ ಲಸಿಕೆಯನ್ನು ಹಾಕಿ ಹಸುಗಳನ್ನು ಸಂರಕ್ಷಣೆ ಮಾಡವ ನಿಟ್ಟಿನಲ್ಲಿ ಅಧಿಕಾ ರಿಗಳು ಮುತುವರ್ಜಿ ವಹಿಸಬೇಕು ಎಂದರು.
ಮಳೆಯಿಂದಾಗಿ ಡ್ಯೆಂಗೋ, ಚಿಕನ್ ಗುನ್ಯಾ, ಮಲೇರಿಯಾ ಸೇರಿದಂತೆ ಹಲವು ಬಗೆಯ ರೋಗ ಲಕ್ಷಣಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಆದ್ದರಿಂದ ಆರೋಗ್ಯ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರಿಗೆ ಆರೋಗ್ಯದ ಬಗ್ಗೆ ಹೆಚ್ಚು ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡು ಜಾಗೃತಿಯನ್ನು ಮೂಡಿಸಲು ಮುಂದಾಗಬೇಕಿದೆ. ಜೊತೆಗೆ ಔಷಧೀಯ ದಾಸ್ತಾನು ಕೊರತೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಮಳೆಯಾಗುತ್ತಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಗಳು ಹಾಳಾಗುವ ಸಾಧ್ಯತೆಯಿಂದ, ಅಪಘಾತ ಸಂಭವಿಸಿ, ಸಾವು – ನೋವುಗಳು ಹೆಚ್ಚು ಸಂಭವಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಲೋಕೋಪಯೋಗಿ ಇಲಾಖೆ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚಿ ವಾಹನ ಸವಾರರು ಮತ್ತು ಶಾಲಾ, ಕಾಲೇಜು ಬಸ್ ಗಳಿಗೆ ಯಾವುದೇ ರೀತಿಯ ತೊಂದರೆಗಳು ಬರದಂತೆ ಸರಾಗವಾಗಿ ಓಡಾಡುವುದಕ್ಕೆ ಗುಂಡಿಗಳನ್ನು ಆದಷ್ಟು ಬೇಗ ದುರಸ್ತಿ ಮಾಡಲು ಹೇಳಿದರು.
ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಆಗುವಂತ ಆಹಾರ ಪದಾರ್ಥಗಳನ್ನು ಶಿಕ್ಷಕರು ಅದರ ಗುಣಮಟ್ಟ ಮತ್ತು ಪರಿಶುದ್ಧತೆಯ ಪರೀಕ್ಷೆಯನ್ನು ಮಾಡದೇ ಮಕ್ಕಳಿಗೆ ವಿತರಣೆ ಮಾಡಬಾರದು. ಮಕ್ಕಳ ಬಗ್ಗೆ ಉದಾಸೀನತೆ ತೋರಬೇಡಿ, ಪೌಷ್ಟಿಕ ಆಹಾರ ಪದಾರ್ಥಗಳನ್ನು ಬಾಣಂತಿ ಹಾಗೂ ಗರ್ಭಿಣಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ವಿತರಣೆ ಮಾಡುಬೇಕು. ಮಳೆಗಾಲ ಇರುವುದರಿಂದ ಶಿಥಿಲವಾದ ಕೊಠಡಿಯಲ್ಲಿ ಮಕ್ಕಳಿಗೆ ಪಾಠ ಮಾಡಬಾರದು ಎಂದು ಹೇಳಿದರು.
ಜಿಡ್ಡುಗಟ್ಟಿದ ವಾತಾವರಣದಿಂದ ಅಧೋಗತಿಯಲ್ಲಿ ಆರ್ಥಿಕ ವ್ಯವಸ್ಥೆ
ಹರಿಹರ ತಾ.ಪಂ. ಸಭೆಯಲ್ಲಿ ಶಾಸಕ ಬಿ.ಪಿ. ಹರೀಶ್ ವ್ಯಾಕುಲತೆ
ತಾಲ್ಲೂಕಿನ ಅನೇಕ ಇಲಾಖೆಗಳಲ್ಲಿ, ಜಿಡ್ಡುಕಟ್ಟಿದಂತಹ ವಾತಾವರಣ ಸೃಷ್ಟಿಯಾಗಿ, ಯಾವುದೇ ರೀತಿಯಲ್ಲಿ ಕೆಲಸಗಳು ಸರಿಯಾಗಿ ಅರ್ಥ ಆಗದೇ ಇರುವುದರಿಂದ, ಅರ್ಥಿಕ ವ್ಯವಸ್ಥೆ ಸಂಪೂರ್ಣ ಅದೋಗತಿಯತ್ತ ಸಾಗಿದೆ ಎಂದು ಶಾಸಕ ಬಿ.ಪಿ ಹರೀಶ್ ಹೇಳಿದರು.
ನಗರದ ತಾ.ಪಂ ಕಚೇರಿಯ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕ್ಷಣ ಕಾಲ ಭಾಗವಹಿಸಿ ಅವರು ಮಾತನಾಡಿದರು. ತಾಲ್ಲೂಕಿನಲ್ಲಿ ಅನೇಕ ಇಲಾಖೆಯ ಅಧಿಕಾರಿಗಳು ಬಹಳಷ್ಟು ನಿರ್ಲಕ್ಷ್ಯ ತೋರಿದ್ದಾರೆ. ಜನರು ಕಷ್ಟಗಳನ್ನು ಹೇಳಿಕೊಂಡು ಇಲಾಖೆಗೆ ಬಂದಾಗ ಸರಿಯಾದ ರೀತಿಯಲ್ಲಿ ಸ್ಪಂದಿಸುವ ಕೆಲಸ ಮಾಡದೇ, ಬೇಜವಾಬ್ದಾರಿಯಿಂದ ವರ್ತನೆ ಮಾಡುತ್ತಾ ಜನರನ್ನು ಕಚೇರಿಗೆ ಅಲೆದಾಡುವಂತೆ ಮಾಡುತ್ತಿದ್ದು, ಈ ಬೆಳವಣಿಗೆಯನ್ನು ಕೈ ಬಿಡದಿ ದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ಹಾಕಿ, ನಿರ್ಲಕ್ಷ್ಯ ತೋರಿರುವ ಅಧಿಕಾರಿ ಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲು ತಿಳಿಸಬೇಕಾಗುತ್ತದೆ ಎಂದು ಶಾಸಕರು ಎಚ್ಚರಿಸಿದರು.
ಕೃಷಿ ಸಹಾಯಕ ನಿರ್ದೇಶಕ ನಾರನಗೌಡ ಮಾತನಾಡಿ, ತಾಲ್ಲೂಕಿನಲ್ಲಿ ಮುಂಗಾರು ಮಳೆ ವಾಡಿಕೆ 183 ಇದ್ದು, 195 ರಷ್ಟು ಮಳೆಯಾಗಿ ಶೇ.7 ರಷ್ಟು ಹೆಚ್ಚು ಆಗಿದೆ. ಆದರೆ, ಇತ್ತೀಚೆಗೆ ಬಿತ್ತನೆ ಮಾಡಿರುವ ಮೆಕ್ಕೆಜೋಳ, ಜೋಳ, ಸೋಯಬಿನ್ ಸೇರಿದಂತೆ ಇತರೆ ಬೆಳೆಗಳು ಮಳೆಯ ಕೊರತೆಯಿಂದ ರೈತರು ಬಳಲುತ್ತಿದ್ದು, ಸದ್ಯದಲ್ಲಿ ಮಳ ಬಹಳ ಅವಶ್ಯಕತೆ ಇರುತ್ತದೆ. ಕಳೆದ ಬಾರಿ ಬೆಳೆಗಳು ಹಾನಿಯಾದ ರೈತರಿಗೆ 2 ಕೋಟಿ 55 ಲಕ್ಷ ರೂಪಾಯಿ ಬೆಳೆ ಪರಿಹಾರ ನೀಡಲಾಗಿದೆ. ಈ ಬಾರಿ ತಾಲ್ಲೂಕಿನಲ್ಲಿ 6127 ಹೆಕ್ಟೇರ್ ಮೆಕ್ಕೆಜೋಳ, 180 ಹೆಕ್ಟೇರ್ ತೊಗರಿ, 28 ಹೆಕ್ಟೇರ್ ಜೋಳ, 105 ಹೆಕ್ಟೇರ್ ಸೋಯಬಿನ್ ಬಿತ್ತನೆ ಮಾಡಲಾಗಿದೆ ಎಂದು ಹೇಳಿದರು.
ಬಿಇಓ ಎ.ಹನುಮಂತಪ್ಪ ಮಾತನಾಡಿ, ಕಳೆದ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳೆ ವೆಬ್ ಕಾಸ್ಟಿಂಗ್, ಸಿ.ಸಿ. ಕ್ಯಾಮರಾ ಅಳವಡಿಕೆಯಿಂದ ತಾಲ್ಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಕಡಿಮೆ ಪ್ರಮಾಣದಲ್ಲಿ ಬರುವಂತೆ ಆಯಿತು. ತಾಲ್ಲೂಕಿನಲ್ಲಿ 52 ಶಿಥಿಲವಾದ ಶಾಲಾ ಕೊಠಡಿಯ ದುರಸ್ತಿ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.
ಸಿಡಿಪಿಓ ಇಲಾಖೆಯ ಪೂರ್ಣಿಮಾ ಮಾತನಾಡಿ, ತಾಲ್ಲೂಕಿನಲ್ಲಿ 259 ಅಂಗನವಾಡಿ ಕೇಂದ್ರಗಳಿದ್ದು, ಗರ್ಭಿಣಿ ಮಹಿಳೆಯರು 1895 ಹಾಗೂ ಬಾಣಂತಿಯರು 1807 ಇವರಿಗೆ ಪೌಷ್ಟಿಕ ಆಹಾರ, ಜೊತೆಗೆ ಶಾಲಾ ಮಕ್ಕಳಿಗೆ ಪ್ರತಿನಿತ್ಯ ಗುಣಮಟ್ಟದ ಆಹಾರ ಜೊತೆಗೆ ಮೊಟ್ಟೆ, ಹಾಲು, ಶೇಂಗಾ ಚಿಕ್ಕಿ ವಿತರಣೆ ಮಾಡಲಾಗುತ್ತದೆ. ಇದುವರೆಗೂ ಯಾವುದೇ ರೀತಿಯ ಆಹಾರ ಧಾನ್ಯಗಳ ಕೊರತೆ ಇರುವುದಿಲ್ಲ ಎಂದು ಹೇಳಿದರು.
ಆರೋಗ್ಯ ಇಲಾಖೆಯ ಅಬ್ದುಲ್ ಖಾದರ್ ಮತ್ತು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಹನುಮನಾಯ್ಕ್ ಮಾತನಾಡಿ, ತಾಲ್ಲೂಕಿನಲ್ಲಿ 1 ಡ್ಯೆಂಗ್ಯೂ ಹಾಗೂ 1 ಚಿಕನ್ ಗುನ್ಯಾ ಪ್ರಕರಣ ದಾಖಲಾಗಿದೆ. ಜನವರಿಯಿಂದ ಇಲ್ಲಿಯವರೆಗೆ 23 ಡ್ಯೆಂಗ್ಯೂ ರೋಗ ಲಕ್ಷಣಗಳು ಕಾಣಿಸಿಕೊಂಡಿವೆ. ಗ್ರಾಮೀಣ ಪ್ರದೇಶಗಳಲ್ಲಿ ರೋಗ ಹರಡದಂತೆ ಎಚ್ಚರ ವಹಿಸಲು ಪಿಡಿಓ ರವರಿಗೆ, ಶಾಲಾ ಮುಖ್ಯಸ್ಥರಿಗೆ ತಿಳಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾ.ಪಂ ಇಓ ರಾಮಕೃಷ್ಣಪ್ಪ, ಪಶುಪಾಲನೆ ಇಲಾಖೆ ಡಾ. ಸಿದ್ದೇಶ್, ಆಹಾರ ಇಲಾಖೆ ನವೀನ್, ಲೋಕೋಪಯೋಗಿ ಇಲಾಖೆ ಶಿವಮೂರ್ತಿ, ಪಂಚಾಯತ್ ರಾಜ್ ಇಲಾಖೆ ಗಿರೀಶ್, ತಾ.ಪಂ ಲೆಕ್ಕಾಧಿಕಾರಿ ಲಿಂಗರಾಜ್, ಪೂಜಾ, ಶಿವಶಂಕರ್ ಚಿಕ್ಕ ಬಿದರಿ ಹಾಗೂ ಇತರರು ಹಾಜರಿದ್ದರು.