ಸಂಭ್ರಮದ ಅಜ್ಜಿ ಹಬ್ಬ ಆಚರಣೆ

ಸಂಭ್ರಮದ ಅಜ್ಜಿ ಹಬ್ಬ ಆಚರಣೆ

ಹರಪನಹಳ್ಳಿ, ಜೂ.28- ಗ್ರಾಮದಲ್ಲಿ ಮಕ್ಕಳಿಗೆ, ಜನ, ಜಾನುವಾರುಗಳಿಗೆ ರೋಗರುಜಿ ನಗಳು ಬಾರದಿರಲಿ ಹಾಗೂ ಉತ್ತಮ ಮಳೆ, ಬೆಳೆಯಾಗಲಿ ಎಂದು ಪ್ರಾರ್ಥಿಸಿ, ಪಟ್ಟಣದ ವಾಲ್ಮೀಕಿ ನಗರದಲ್ಲಿ  ಶುಕ್ರವಾರ ಅಜ್ಜಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ಅಜ್ಜಿ ಹಬ್ಬದ ಮತ್ತೊಂದು ವಿಶೇಷ ಎಡೆ ಇಡುವು ದು. ಒಂದು ಮೊರದಲ್ಲಿ ಕುಡಿಕೆ, ಬೇವಿನ ಸೊಪ್ಪು, ದೇವಿಗೆ ಇಷ್ಟವಾದ ಹೋಳಿಗೆ, ಹಣ್ಣು, ಕಾಯಿ ಇಟ್ಟು ಪೂಜೆ ಮಾಡಲಾಗುತ್ತದೆ. ನಂತರ ಕುಟುಂಬಕ್ಕೆ ಯಾವುದೇ ರೋಗ ರುಜಿನಗಳು ತಗುಲದೇ ಇರಲಿ ಎಂದು ಅಜ್ಜಿ ಯನ್ನು (ಅಮ್ಮನನ್ನು) ಬೇಡಿಕೊಂಡು  ಪೂಜಿಸಲಾಗುತ್ತದೆ.

ಅಜ್ಜಿ ಹಬ್ಬ ಅಂದರೆ ಸಣ್ಣ ಮಕ್ಕಳ ಮೈಮೇಲೆ ಗುಳ್ಳೆಗಳು ಆಗುವುದು, ಜ್ವರ ಬರುವುದು ಅಥವಾ ಅಮ್ಮ ಬಂದಿದ್ದರೆ ಅವುಗಳನ್ನು ದೂರ ಮಾಡಲು ಮಾಡುವ ಆಚರಣೆಯಾಗಿದೆ.

ಮೈಮೇಲೆ ಗುಳ್ಳೆಗಳಾದರೆ ಆಸ್ಪತ್ರೆಗೂ ತೋರಿಸುತ್ತಾರೆ. ಆದರೆ ಇದಕ್ಕೆ ಅದರದ್ದೇ ಆದ ಕೆಲ ಧಾರ್ಮಿಕ ಆಚರಣೆಗಳು ಸಹ ಇವೆ. ಅವುಗಳನ್ನು ಕೂಡ ಮಾಡಬೇಕು. ಇಂತಹ ಕಾಯಿಲೆಗಳು ಸಣ್ಣ ಮಕ್ಕಳಿಗೆ ಬಾರದೇ ಇರಲಿ, ದೇವಿ ಇದನ್ನು ತಪ್ಪಿಸಲಿ ಎಂದು ಈ ಅಜ್ಜಿ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಗ್ರಾಮಸ್ಥ ಮಂಡಕ್ಕಿ ಸುರೇಶ್ ಹೇಳುತ್ತಾರೆ.

ಸಂಜೆ ಊರಿನ ಗ್ರಾಮಸ್ಥರು ವಿವಿಧ ವಾದ್ಯಗಳೊಂದಿಗೆ ಅಜ್ಜಿ ಅಮ್ಮನ ಮೂರ್ತಿಯನ್ನು ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಾ  ಪಟ್ಟಣದಿಂದ ಐದು ಕಿ.ಮೀ. ದೂರ ಹೋಗಿ ಅಜ್ಜಿ ಅಮ್ಮನ ಮೊರಗಳನ್ನು ಊರಿನಾಚೆ ಇಟ್ಟು ಪೂಜೆ ಸಲ್ಲಿಸಿ ಬರುತ್ತಾರೆ.

ಅಜ್ಜಿ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ವಾರದ ಹಿಂದೆಯೇ ಗ್ರಾಮದಲ್ಲಿ ಡಂಗುರ ಸಾರಿಸಿ ಹಬ್ಬ ಆಚರಿಸುವಂತೆ ತಿಳಿಸಲಾಗುತ್ತದೆ.  ಎಲ್ಲ ಮನೆಗಳಲ್ಲೂ ಹೋಳಿಗೆ ತಯಾರಿಸಿ, ಅಮ್ಮನವರ ಪ್ರತೀಕವಾಗಿ ಕೇಲನ್ನು ಸಿಂಗರಿಸುತ್ತಾರೆ.

ಹಾಲಸ್ವಾಮಿ ಮಠದ ವೃತ್ತದಲ್ಲಿ ಅಮ್ಮನ ಕಟ್ಟೆಗೆ ಸಂಜೆ ಗ್ರಾಮದ ಮಹಿಳೆಯರು, ಪುರುಷರು, ಮಕ್ಕಳೊಂದಿಗೆ ಬಂದು ಪೂಜೆ ಸಲ್ಲಿಸಿ, ಅಮ್ಮನವರನ್ನು ಬೀಳ್ಕೊಟ್ಟು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಮುಖಂಡರುಗಳಾದ ಆಲೂರು ಚೌಡಪ್ಪ, ರಾಯದುರ್ಗದ ದುರುಗಪ್ಪ, ಕೆ. ಅಂಜಿನಪ್ಪ, ಹೊರಕೇರಿ ರಮೇಶ್, ಗಾಟಿನ ಪರಸಪ್ಪ, ಚಿನ್ನುಗಿ ನಾಗಪ್ಪ, ಎಲ್ಲಜ್ಜಿ ಅಂಜಿನಪ್ಪ, ನಿಟ್ಟೂರು ದೊಡ್ಡ ಹಾಲಪ್ಪ, ದ್ಯಾಮಜ್ಜಿ ಹನುಮಂತ, ತಳವಾರ ವೆಂಕಟೇಶ, ಹೊರಕೇರಿ ರಮೇಶ್, ಬಿ. ವಿರೂಪಾಕ್ಷಪ್ಪ, ಪಟ್ನಾಮದ ದುರುಗಪ್ಪ,  ಪಟ್ನಾಮದ ಪರಶುರಾಮ, ತಿಮ್ಮಣ್ಣ, ಕಮ್ಮಾರ ದೊಡ್ಡ ಹಾಲಪ್ಪ, ನಿಟ್ಟೂರು ತಿಮ್ಮಣ್ಣ, ಗಿಡ್ಡಳ್ಳಿ ನಿಂಗಪ್ಪ ಸೇರಿದಂತೆ ಇತರರು ಇದ್ದರು.

error: Content is protected !!