ಜಗಳೂರಿನಲ್ಲಿ ರಸ್ತೆ ಅಗಲೀಕರಣ

ಜಗಳೂರಿನಲ್ಲಿ ರಸ್ತೆ ಅಗಲೀಕರಣ

20 ಕೋಟಿ‌ ರೂ. ಅನುದಾನ ಮಂಜೂರು

ಜಗಳೂರು, ಜೂ.27-  ಹೆಚ್ಚುತ್ತಿರುವ ವಾಹನ ದಟ್ಟಣೆ, ಟ್ರಾಫಿಕ್ ಸಮಸ್ಯೆ  ನಿವಾರಣೆಗೆ ಪಟ್ಟಣದ ಮುಖ್ಯ ರಸ್ತೆ ಅಗಲೀಕರಣಕ್ಕೆ 20 ಕೋಟಿ ಅನುದಾನ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿದೆ. ಶೀಘ್ರದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ದಾವಣಗೆರೆ ಗ್ರಾಮಾಂತರ ಉಪವಿಭಾಗ ಹಾಗೂ ಪೊಲೀಸ್ ಠಾಣೆ ವತಿಯಿಂದ ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಇಂದು ಹಮ್ಮಿಕೊಂಡಿದ್ದ  `ಜನಸಂಪರ್ಕ’  ಸಭೆಯಲ್ಲಿ ಸಿಬ್ಬಂದಿಗಳಿಗೆ ಹೆಲ್ಮೆಟ್ ವಿತರಿಸಿ ಅವರು ಮಾತನಾಡಿದರು.

ಪಟ್ಟಣದ ಅಭಿವೃದ್ದಿಗೆ ಸಾರ್ವಜನಿಕರ ಅನುಕೂಲ ಕ್ಕಾಗಿ ರಸ್ತೆ ಅಗಲೀಕರಣದ ಅವಶ್ಯಕತೆ ಇದೆ. ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದೆ.ವ್ಯಾಪಾರಸ್ಥರು ಸಹಕರಿಸಬೇಕು. ವ್ಯಾಪಾರಿಗಳ ನ್ನಾಗಲೀ ಅಥವಾ ಅಂಗಡಿ ಮಾಲೀಕರನ್ನಾಗಲೀ ಒಕ್ಕಲೆಬ್ಬಿಸುವ ಉದ್ದೇಶವಲ್ಲ. ಕಾನೂನು ಚೌಕಟ್ಟಿನಲ್ಲಿ ಸಾರ್ವಜನಿಕರ ಹಿತ ಕಾಯು ತ್ತೇನೆ. ಕೊಟ್ಟ ಭರವಸೆ ಹುಸಿಯಾಗದಂತೆ ನಡೆದುಕೊಳ್ಳುತ್ತೇನೆ ಎಂದರು.

ಸಾರ್ವಜನಿಕ ಸ್ಥಳಗಳಲ್ಲಿ ಕರ್ಕಶ ಶಬ್ದದಿಂದ ಶಬ್ದ ಮಾಲಿನ್ಯ ಉಂಟು ಮಾಡುತ್ತಿರುವ ಬೈಕ್ ಗಳನ್ನು ಸೀಜ್ ಮಾಡಬೇಕು. ಸಾರ್ವಜನಿಕರು ಹೆಲ್ಮೆಟ್ ಧರಿಸಿ ಪೊಲೀಸ್ ಇಲಾಖೆಯ ಸುರಕ್ಷಿತ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಿದರು. ನನ್ನ ಅಧಿಕಾರವಧಿ ಯಲ್ಲಿ ವಿಂಡ್ ಫ್ಯಾನ್ ಅಳವಡಿಕೆಗೆ ಅವಕಾಶ ನೀಡಿಲ್ಲ. ಉದ್ಗಟ್ಟ ವಸತಿ ಶಾಲೆ ಪಕ್ಕದಲ್ಲಿ ಶಾಲಾ ಮಕ್ಕಳಿಗೆ ದುಷ್ಪರಿಣಾಮ ಬೀರುತ್ತಿರುವ ವಿಂಡ್ ಫ್ಯಾನ್ ತೆರವುಗೊಳಿಸಲು ಸೂಚಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಉಮಾ ಪ್ರಶಾಂತ್ ಮಾತನಾಡಿ, ದೇಶದಲ್ಲಿ ಪ್ರತಿ ಗಂಟೆಗೆ‌  ಸಂಭವಿಸುವ ಅಪಘಾತಗಳಲ್ಲಿ 52 ಜನರಲ್ಲಿ 19 ಜನ ಹೆಲ್ಮೆಟ್ ಧರಿಸದೇ ಸಾವನ್ನಪ್ಪುತ್ತಿದ್ದಾರೆ. ಪ್ರತಿ ವರ್ಷಕ್ಕೆ 52000 ಜನರು ಹೆಲ್ಮೆಟ್ ಧರಿಸದೆ ಸಾವನ್ನಪ್ಪುವ ಮಾಹಿತಿ ಲಭ್ಯವಾಗಿದೆ. ದೇಹದ ಸೂಕ್ಷ್ಮ ಹಾಗೂ ಮುಖ್ಯ ಅಂಗ ತಲೆ ಭಾಗವಾಗಿದ್ದು, ಪ್ರತಿಯೊಬ್ಬ ದ್ವಿಚಕ್ರ ವಾಹನ ಸವಾರನು ಜೀವರಕ್ಷಣೆಗಾಗಿ ಗುಣಾತ್ಮಕ ಹೆಲ್ಮೆಟ್ ಧರಿಸಬೇಕು ಎಂದರು.

ಸಾರ್ವಜನಿಕರಿಗೆ ದಂಡ ವಿಧಿಸುವ ಪೊಲೀಸ್ ಸಿಬ್ಬಂದಿಗಳು ಮೊದಲು ಹೆಲ್ಮೆಟ್ ಧರಿಸಿ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.

ದಾವಣಗೆರೆ ಗ್ರಾಮಾಂತರ ವಿಭಾಗದ ಡಿವೈಎಸ್ ಪಿ ಬಸವರಾಜ್ ಮಾತನಾಡಿ,   ಯುವಕರು ಡ್ರಗ್ಸ್ ತೆಗೆದುಕೊಳ್ಳುವ ಮಾಹಿತಿಯನ್ನು 112 ರ ಮೂಲಕ ಮಾಹಿತಿ ಕೊಡಿ, ಮಾಹಿತಿ ನೀಡಿದವರ ಬಗ್ಗೆ ಗೌಪ್ಯತೆ ಕಾಪಾಡಲಾಗುವುದು. ಪರೀಕ್ಷೆಗೊಳಪಡಿಸಿ ಸಾಬೀತಾದರೆ ನಿರ್ದಾಕ್ಷಿಣ್ಯವಾಗಿ ಪ್ರಕರಣ ದಾಖಲಿಸಲಾಗುವುದು ಎಂದರು.

 ಪೊಲೀಸ್ ಸಿಬ್ಬಂದಿಗಳೊಂದಿಗೆ ಪಟ್ಟಣದಲ್ಲಿ ಬೈಕ್ ನಲ್ಲಿ ಎಸ್ ಪಿ, ಪಿಐ, ಡಿವೈಎಸ್ ಪಿ ಸಂಚರಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.

ಪಿಐ ಶ್ರೀನಿವಾಸ್ ರಾವ್, ಪಿಎಸ್ ಐ ಸಾಗರ್, ಎಎಸ್ಐ ಗಳಾದ ವೆಂಕಟೇಶ್, ಚಂದ್ರಶೇಖರ್, ಶಿವಪ್ರಸಾದ್, ಸಿಬ್ಬಂದಿಗಳಾದ ನಾಗಭೂಷಣ್, ಬಸವರಾಜ್, ಮಾರುತಿ, ಪಾಲಾಕ್ಷಿ, ಉಮಾಪತಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

error: Content is protected !!