ಪುರಾತನ ಚಿಕಿತ್ಸಾ ಪದ್ಧತಿ ಯೋಗ : ಪುತ್ತೂರು ಶಲ್ಯ

ಪುರಾತನ ಚಿಕಿತ್ಸಾ ಪದ್ಧತಿ ಯೋಗ : ಪುತ್ತೂರು ಶಲ್ಯ

ದಾವಣಗೆರೆ, ಜೂ.24- ಪ್ರಾಚೀನ ಭಾರತದ ಯೋಗ ನಮ್ಮ ಪುರಾತನ ಚಿಕಿತ್ಸಾ ಪದ್ಧತಿಯಾಗಿದೆ ಎಂದು ವೈದ್ಯ ಪುತ್ತೂರು ಶಲ್ಯ ತಿಳಿಸಿದರು.

ತುಳಸಿ ರಾಮರಾಜು ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯಿಂದ  10ನೇ ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಆಸ್ಪತ್ರೆಯಲ್ಲಿ 3 ದಿನಗಳ ಕಾಲ ನಡೆದ ಉಚಿತ ಆರೋಗ್ಯ ತಪಾಸಣೆ ಮತ್ತು ಸಲಹಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಗೆ ಬರುತ್ತಿರುವ ರೋಗಿಗಳನ್ನು ಗಮನಿಸಿದರೆ ಯೋಗಕ್ಕೆ ಇಲ್ಲಿನ ಸ್ಥಳೀಯರು ಹೆಚ್ಚಿನ ಸಹಕಾರ ನೀಡಿರುವುದು ಕಾಣಿಸುತ್ತಿದೆ ಎಂದು ಹೇಳಿದರು.

ಆಸ್ಪತ್ರೆಯ ಮೆಡಿಕಲ್‌ ನಿರ್ದೇಶಕರಾದ ವಿಂದ್ಯಾ ಗಂಗಾಧರ ವರ್ಮಾ ಮಾತನಾಡಿ, ಯೋಗವು ನಮ್ಮ ಪುರಾತನ ತತ್ವಶಾಸ್ತ್ರವಾಗಿದ್ದು, ಮನುಷ್ಯನ ಸರ್ವತೋಮುಖ ಏಳಿಗೆಗೆ ಇದು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಯೋಗವು ಇಂದು ವಿಶ್ವಮಾನ್ಯವಾಗಿ ಜಾತಿ, ಮತ, ಧರ್ಮವನ್ನೂ ಮೀರಿ ಬೆಳೆಯುತ್ತಿದೆ.
ಎಲ್ಲಾ ಪಂಥದವರೂ ಯೋಗದ ಮೊರೆ ಹೋಗುತ್ತಿದ್ದಾರೆ ಎಂದರು.

ಪ್ರಕೃತಿ ಚಿಕಿತ್ಸಾ ತಜ್ಞ ಡಾ.ಬಿ. ಗಂಗಾಧರ ವರ್ಮಾ ಮಾತನಾಡಿ, ಮಾನಸಿಕ ಉದ್ವೇಗ ತೀವ್ರವಾದ ಬೇಕು-ಬೇಡಗಳು, ರಾಗ-ದ್ವೇಷಗಳು ಮತ್ತು ಇಚ್ಛೆ-ನಿಚ್ಛೆಗಳಿಂದ ಕಾಣಿಸಿಕೊಳ್ಳುತ್ತವೆ. ಈ ಮನೋಮಯ ಕೋಶದ ಅಸಮತೋಲನ ಪ್ರಾಣಮಯ ಕೋಶದ ಮೇಲೆ ಪ್ರಭಾವ ಬೀರಿ ಅಲ್ಲಿನ ಪ್ರಾಣದ ಹರಿಯುವಿಕೆಯಲ್ಲಿ ಅಡ್ಡಿ-ಅಡಚಣೆಯನ್ನುಂಟು ಮಾಡುತ್ತದೆ. ಆದ್ದರಿಂದ ಪ್ರತಿನಿತ್ಯ ಯೋಗಾಭ್ಯಾಸ ಮಾಡಬೇಕೆಂದು ಹೇಳಿದರು.

ಯೋಗವೆಂಬುದು ಕೇವಲ ವ್ಯಾಯಾಮವಲ್ಲ, ಇದು ಜೀವನ ಶೈಲಿ. ಪತಂಜಲಿ ಮುನಿ ಯೋಗವನ್ನು ಅಷ್ಟಾಂಗ ಯೋಗದ ಮೂಲಕ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿಗಳು ಎಂದು ವಿಭಾಗಿಸಿದ್ದಾರೆ ಎಂದರು.

ಆಸ್ಪತ್ರೆಯ ಮ್ಯಾನೇಜರ್ ಪ್ರಹ್ಲಾದ್ ಕೊಪ್ಪದ್, ಪವಿತ್ರಾ, ಸುಧಾ ಜಾಧವ್, ತುಳಸಿ, ನಾಗಣ್ಣ, ಬಿಜ್ಜು ಮತ್ತು ಆಸ್ಪತ್ರೆಯ ಸಿಬ್ಬಂದಿ ಇದ್ದರು.

error: Content is protected !!