ದಾವಣಗೆರೆ, ಜು.22- ಕೇವಲ ಅಂಕಗಳಿಕೆಗಷ್ಟೇ ಒತ್ತು ನೀಡದೆ ಮಕ್ಕಳಿಗೆ ನೈತಿಕ ಶಿಕ್ಷಣ ನೀಡುವುದು ಮುಖ್ಯವಾಗಿದೆ ಎಂದು ಶ್ರೀ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆಯ ನಿವೃತ್ತ ಕಾರ್ಯದರ್ಶಿ ಎಂ.ಕೆ. ಬಕ್ಕಪ್ಪ ಹೇಳಿದರು.
ನಗರದ ಸದ್ಯೋಜಾತ ಶಿವಾಚಾರ್ಯ ಹಿರೇಮಠದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಡಾ.ಪಂಡಿತ ಪುಟ್ಟರಾಜ ಸೇವಾ ಸಮಿತಿ ಜಿಲ್ಲಾ ಮಹಿಳಾ ಘಟಕದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲೆಗಳಲ್ಲಿ ನೈತಿಕ ಶಿಕ್ಷಣ ದೊರೆಯದ ಕಾರಣ ಇಂದು ಸಮಾಜ ಅಧೋಗತಿಗೆ ತಲುಪಿರುವುದು ಆತಂಕಕಾರಿ ವಿಷಯ ಎಂದರು.
ವಚನಕಾರರು, ದಾಸ ಪರಂಪರೆ, ದಾರ್ಶನಿಕರ ಕಥೆಗಳು ಇಂದಿನ ಪಠ್ಯದಲ್ಲಿ ಮರೆಯಾಗುವುದು ದುರಂತ. ಈ ಹಿಂದೆ ದಾರಿ ತಪ್ಪಿದ ಮಕ್ಕಳಿಗೆ ಶಿಕ್ಷಕರು ಬೆತ್ತದ ಏಟು ನೀಡುತ್ತಿದ್ದರು. ಆದರೆ ಇಂದು ನೈತಿಕ ಶಿಕ್ಷಣ, ಸಂಸ್ಕಾರದಿಂದ ವಂಚಿತರಾದವರು ಪೊಲೀಸರಿಂದ ಲಾಟಿ ಏಟು ತಿನ್ನುವಂತಾಗಿದೆ ಎಂದರು.
ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು ಎಂಬಂತೆ ಮಕ್ಕಳಲ್ಲಿ ಮನೆಯಲ್ಲಿಯೇ ಸಂಸ್ಕಾರ ಕಲಿಸಬೇಕು. ತಮ್ಮ ಮನೆತನದ ಆಚಾರ-ವಿಚಾರಗಳನ್ನು ತಿಳಿಸಿಕೊಡಬೇಕು ಎಂದು ಸಲಹೆ ನೀಡಿದರು.
ಹಣದ ಶ್ರೀಮಂತಿಕೆಗಿಂತ ಹೃದಯ ಶ್ರೀಮಂತಿಕೆ, ಧಾರ್ಮಿಕ ಹಾಗೂ ಸಾಮಾಜಿಕ ಶ್ರೀಮಂತಿಕೆಯೂ ಮುಖ್ಯ ಎಂಬುದನ್ನು ಮಕ್ಕಳಿಗೆ ಮನವರಿಕೆ ಮಾಡಬೇಕು. ನಾಲ್ಕು ಗೋಡೆಗಳ ನಡುವಿನ ಶಿಕ್ಷಣಕ್ಕಿಂದ ಧಾರ್ಮಿಕ, ಸಾಂಸ್ಕೃತಿಕ ಸಾಮಾಜಿಕ ಶಿಕ್ಷಣ ನೀಡಬೇಕು ಎಂದು ಹೇಳಿದರು.
ಡಾ.ಪಂಡಿತ ಪುಟ್ಟರಾಜ ಸೇವಾ ಸಮಿತಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ಸತೀಶ್ ಧಾರವಾಡ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಸಮಿತಿ ಆರಂಭವಾಗಿ ವರ್ಷ ಕಳೆದಿದ್ದು, ವರ್ಷಪೂರ್ತಿ ಪೂಜ್ಯರ ಹಾಗೂ ಪ್ರಚಾರದ ಕಾರ್ಯಕ್ರಮಗಳು, ವಚನ ಶಿಬಿರ, ಆರೋಗ್ಯ ತಪಾಸಣೆ, ಪರಿಸರ ದಿನಾಚರಣೆ, ರಾಷ್ಟ್ರೀಯ ಕಾರ್ಯಕ್ರಮಗಳನ್ನು ವಿಶೇಷವಾಗಿ ಆಚರಿಸಲಾಗಿತ್ತು ಎಂದರು.
ಇದೇ ಸಂದರ್ಭದಲ್ಲಿ ಹಿಮೋಫಿಲಿಯಾ ಸೊಸೈಟಿಯ ಸಹಾಯಕ ರಾದ ಚಿನ್ನಪ್ಪ ಅವರಿಗೆ `ಸೇವಾಶ್ರೀ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರಾದ ಕಿರುವಾಡಿ ಗಿರಜಮ್ಮ, ಡಾ.ಪಂ.ಪು. ಸೇವಾ ಸಮಿತಿ ರಾಜ್ಯ ಸಂಘಟನಾ ಕಾರ್ಯದರ್ಶಿ, ಸಂಗೀತ ಶಿಕ್ಷಕ ಶಿವಬಸಯ್ಯ ಉಪಸ್ಥಿತರಿದ್ದರು.
ಮಮತಾ ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ದುಗ್ಗಮ್ಮನ ಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ಪ್ರಾರ್ಥಿಸಿ ದರು. ಶಾಂತಾ ಶಿವಶಂಕರ್ ನಿರೂಪಿಸಿ ದರು. ಸುಮ ಬೇತೂರು ಸ್ವಾಗತಿಸಿದರು. ರೇಖಾ ಬೇತೂರು ವಂದಿಸಿದರು.