ರಾಣೇಬೆನ್ನೂರಿನಲ್ಲಿ ಬಿಜೆಪಿ ಕಾರ್ಯಕ್ರಮದಲ್ಲಿ ಸಂಸದ ಬೊಮ್ಮಾಯಿ
ರಾಣೇಬೆನ್ನೂರು, ಜೂ. 20- ಹಾಲು, ಆಲ್ಕೋಹಾಲು, ಕರೆಂಟ್, ಪೆಟ್ರೋಲಿಯಮ್ ಸಂಸ್ಕರಣೆ, ಡೀಸೆಲ್, ನೋಂದಣಿ ಶುಲ್ಕ, ಮುಂದೆ ಬಸ್ ಹೀಗೆ ದರಗಳನ್ನು ಕಾಂಗ್ರೆಸ್ ಸರ್ಕಾರ ಹೆಚ್ಚುಸುತ್ತಿದೆ. ಖಜಾನೆ ಖಾಲಿ ಆಗಿದ್ದರಿಂದ ಈ ಹೆಚ್ಚಳ ನಡೆದಿದೆ. 13 ಬಾರಿ ಬಜೆಟ್ ಮಂಡಿಸಿರುವ ಸಿದ್ರಾಮಯ್ಯ ಅವರ ಸರ್ಕಾರದಲ್ಲಿ ಹಣ ಇಲ್ಲಾ. ಅವರು ಬೊಗಳೆ ಬಿಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಯೂ ಆಗಿರುವ ಸಂಸದ ಬಸವರಾಜ ಬೊಮ್ಮಾಯಿ ಕಿಡಿಕಾರಿದರು.
ಇಲ್ಲಿನ ಶ್ರೀ ಸಿದ್ದೇಶ್ವರ ಸಭಾಭವನದಲ್ಲಿ ಬಿಜೆಪಿ ಇಂದು ಏರ್ಪಡಿಸಿದ್ದ ಕೃತಜ್ಞತೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ನರೇಂದ್ರ ಮೋದಿ ಅವರು ಮತ್ತೆ ಪ್ರದಾನಿ ಆಗಿದ್ದರಿಂದ ನಮ್ಮ ದೇಶದಲ್ಲಿ ಶಾಂತಿ ನೆಲೆಸಿದೆ. ವಿರೋಧ ಪಕ್ಷಗಳು ದೇಶ ಘಾತುಕ ಪಕ್ಷಗಳೊಂದಿಗೆ ಸೇರಿ ಅಪಪ್ರಚಾರ ಮಾಡಿ ಮೋದಿ ಅವರನ್ನ ಪ್ರಧಾನಿಯಾಗದಂತೆ ತಡೆಯುವ ಪ್ರಯತ್ನ ಮಾಡಿದರು. ಆದರೆ ದೇಶದ ಜನ ಅವರನ್ನು ನಂಬದೇ ಮೋದಿ ಅವರಿಗೆ ಆಶೀರ್ವದಿಸಿದರು. ಭಾರತ ಮಾತೆಯನ್ನು ಸಂಕಷ್ಟದಿಂದ ಪಾರು ಮಾಡಿದರು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಮುಖ್ಯಮಂತ್ರಿಗಳಿದ್ದಾಗ ನೀರಾವರಿ ಸೇರಿದಂತೆ, ಕೈಗೊಂಡ ಅನೇಕ ಯೋಜನೆಗಳನ್ನು ಕಾರ್ಯಗತಗೊಳಿಸಲು ಕಾಂಗ್ರೆಸ್ ಸರ್ಕಾರದ ಮೇಲೆ ಒತ್ತಡ ತರುತ್ತೇನೆ. ಅಂತಹ ಶಕ್ತಿ ನೀವು ನೀಡಿದ್ದೀರಿ. ಆ ಶಕ್ತಿಯನ್ನ ಸದುಪಯೋಗ ಪಡಿಸಿಕೊಳ್ಳುತ್ತೇನೆ. ನಾನು ಕೇಂದ್ರದಲ್ಲಿ ಸಚಿವನಾಗದಿದ್ದರೂ ಸಹ ಕ್ಷೇತ್ರದ ಅಭಿವೃದ್ಧಿಗೆ ಅವಶ್ಯವಿರುವ ಕಾರ್ಯ ಮಾಡುವ ಶಕ್ತಿ ನನ್ನಲ್ಲಿದೆ ಎಂದು ಬೊಮ್ಮಾಯಿ ಹೇಳಿದರು.
ಕುಂಟೆತ್ತಲ್ಲ….. : ಚುನಾವಣೆ ಸಮಯದಲ್ಲಿ ಬೊಮ್ಮಾಯಿ ಕುಂಟೆತ್ತು, ಅದು ದೆಹಲಿ ಮುಟ್ಟಲಾರದು ಎಂದು ನಮ್ಮ ಶಾಸಕ ಪ್ರಕಾಶ ಕೋಳಿವಾಡ ಹೇಳಿದ್ದರು.ನಮ್ಮದು ಕುಂಟೆತ್ತಲ್ಲಾ, ಹೋರಿ ದೆಹಲಿ ಮುಟ್ಟಿದೆ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಬಿಜೆಪಿ ಅಧ್ಯಕ್ಷ ಅರುಣಕುಮಾರ ಪೂಜಾರ ಹೇಳಿದರು.
ಪರಮೇಶ ಗೂಳಣ್ಣನವರ, ರಮೇಶ ಗುತ್ತಲ, ಡಾ: ಬಸವರಾಜ ಕೇಲಗಾರ, ಎಸ್.ಎಸ್. ರಾಮಲಿಂಗಣ್ಣನವರ, ಭಾರತಿ ಜಂಬಗಿ, ಸಂತೋಷ ಪಾಟೀಲ, ಚೋಳಪ್ಪ ಕಸವಾಳ, ಜಟ್ಟೆಪ್ಪ ಕರಿಗೌಡ್ರ, ಎ.ಬಿ.ಪಾಟೀಲ, ಪ್ರಕಾಶ ಪೂಜಾರ, ಮಲ್ಲಪ್ಪ ಅಂಗಡಿ, ಬಸವರಾಜ ಕೇಲಗಾರ ಮತ್ತಿತರರಿದ್ದರು. ಅಮೋಘ ಬದಾಮಿ ಕಾರ್ಯಕ್ರಮ ನಿರೂಪಿಸಿದರು.