ಮುಂಬರುವ ಚುನಾವಣೆಗಳಲ್ಲೂ ಎನ್.ಡಿ.ಎ. ಅಭ್ಯರ್ಥಿಗಳು ಗೆಲ್ಲುವಂತೆ ನೋಡಿಕೊಳ್ಳಿ : ಡಾ.ಸರ್ಜಿ
ಹೊನ್ನಾಳಿ, ಜೂ. 19 – ಬಿಜೆಪಿ ಪಕ್ಷದಲ್ಲಿ ನನ್ನನ್ನೊಳಗೊಂಡಂತೆ ನಾಯಕರು ಯಾರೂ ಇಲ್ಲ. ಎಲ್ಲಾ ಕಾರ್ಯಕರ್ತರೇ ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ಪಕ್ಷವು ಇಂದು ಹೆಮ್ಮರವಾಗಿ ಬೆಳೆಯಲು ಕಾರಣವಾಗಿದೆ ಎಂದು ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹರ್ಷ ವ್ಯಕ್ತಪಡಿಸಿದರು.
ಪಟ್ಟಣದ ಗುರುಭವನದಲ್ಲಿ ಹೊನ್ನಾಳಿ-ನ್ಯಾಮತಿ ಬಿಜೆಪಿ ವತಿಯಿಂದ ಇತ್ತೀಚೆಗೆ ಜಯ ಗಳಿಸಿದ ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರದ ಭೋಜೇಗೌಡ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಅಭ್ಯರ್ಥಿಗಳಿಗೆ ಕೊಟ್ಟ ಮಾತಿನಂತೆ ಹೊನ್ನಾಳಿ-ನ್ಯಾಮತಿ-ಚನ್ನಗಿರಿ ತಾಲ್ಲೂಕುಗಳನ್ನು ಸವಾಲಾಗಿ ಸ್ವೀಕರಿಸಿ, ಪಕ್ಷದ ಕಾರ್ಯಕರ್ತರುಗಳು, ಮುಖಂಡರುಗಳು ಒಗ್ಗಟ್ಟಾಗಿ ಕೆಲಸ ಮಾಡಿ ಶಿಕ್ಷಕರ, ಪದವೀಧರರ ಮನವೊಲಿಸಿ ಚುನಾವಣೆಯಲ್ಲಿ ಮತ ಹಾಕಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದಕ್ಕೆ ಇಂದು ನಾವು ಬೆಂಬಲಿಸಿದ ಅಭ್ಯರ್ಥಿಗಳು ನಿರೀಕ್ಷೆಯಂತೆ ಜಯಭೇರಿ ಬಾರಿಸಿ ತಮ್ಮ ಸೇವೆಯನ್ನು ಮಾಡಲಿದ್ದು ತಮ್ಮ ಅತ್ಯಮೂಲ್ಯ ಮತ ಹಾಕಿ ಬೆಂಬಲಿಸಿದ ಮತದಾರರಿಗೆ, ಕಾರ್ಯಕರ್ತರಿಗೆ ಮತ್ತು ಮುಖಂಡರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುವುದಾಗಿ ತಿಳಿಸಿದರು.
ದೇವೇಗೌಡರು ತಮ್ಮ ಇಳಿ ವಯಸ್ಸಿನಲ್ಲಿಯೂ ಅನೇಕ ಕ್ಷೇತ್ರಗಳಲ್ಲಿನ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದು ಪಕ್ಷದ ವರ್ಚಸ್ಸು ಹೆಚ್ಚಿಸಿ ಎನ್.ಡಿ.ಎ. ಅಭ್ಯರ್ಥಿ ಗಳ ಗೆಲುವಿಗೆ ಸಹಕಾರಿಯಾಯಿತು ಎಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರವು ಎಲ್ಲಾ ರೀತಿಯಿಂದಲೂ ವಿಫಲವಾಗಿದ್ದು ಪೆಟ್ರೋಲ್, ಡಿಸೇಲ್ ಬೆಲೆಯೇರಿಕೆ ಮಾಡುವುದರ ಮೂಲಕ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಲು ಕಾರಣವಾಗಿದ್ದು ಜನವಿರೋಧಿ ಸರ್ಕಾರವಾಗಿ ಪರಿಣಮಿಸಿದೆ ಕೂಡಲೇ ಬೆಲೆ ಕಡಿಮೆ ಮಾಡದೇ ಇದ್ದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾಯಿತ ಅಭ್ಯರ್ಥಿ ಎಸ್.ಎಲ್.ಭೋಜೇಗೌಡ ಮಾತನಾಡಿ, ನಾಯಕರುಗಳು ಒಗ್ಗಟ್ಟಾದಂತೆ ತಳಮಟ್ಟದ ಕಾರ್ಯಕರ್ತರುಗಳು ಕೂಡ ಒಗ್ಗಟ್ಟಾಗಿ ಕೆಲಸ ಮಾಡಿದ್ದಕ್ಕೆ ಎನ್.ಡಿ.ಎ. ಮೈತ್ರಿ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಯಿತೆಂದು ಸಂತಸ ವ್ಯಕ್ತಪಡಿಸಿದರು.
ಈ ಹಿಂದೆ ಎಚ್.ಡಿ.ಕುಮಾರಸ್ವಾಮಿ ಮತ್ತು ಬಿ.ಎಸ್.ಯಡಿಯೂರಪ್ಪ ಅವರ 20-20 ಸರ್ಕಾರದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳನ್ನು ರಾಜ್ಯದ ಜನತೆ ಕೊಂಡಾಡಿದ್ದರು. ಮೈತ್ರಿ ಅಬಾಧಿತವಾಗಿರಲಿದ್ದು ಮೈತ್ರಿಯು ಬಹಳ ಪವಿತ್ರತೆಯಿಂದಿಂದಿರುವಂತೆ ಎರಡೂ ಪಕ್ಷ ಮುಖಂಡರುಗಳು, ಕಾರ್ಯಕರ್ತರುಗಳು ನೋಡಿಕೊಳ್ಳಬೇಕಾಗುತ್ತದೆ ಎಂದು ಸಲಹೆ ನೀಡಿದರು.
ಸರ್ಕಾರದ ಲೋಪ ದೋಷಗಳನ್ನು ಎತ್ತಿ ತೋರಿಸಿ ಶಿಕ್ಷಕರ, ಅನುದಾನಿತ, ಅನುದಾನ ರಹಿತ, ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ನಿರ್ವಹಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆಂದು ಭರವಸೆ ನೀಡಿದರು.
ಮುಖ್ಯಮಂತ್ರಿಯವರು ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಮಾಡಲು ಹೊರಟಿದ್ದು ಕನ್ನಡವೇ ಸರಿಯಾಗಿ ಬರುವುದಿಲ್ಲವೆಂದು ಹೇಳುವ ವ್ಯಕ್ತಿಯನ್ನು ಶಿಕ್ಷಣ ಸಚಿವರನ್ನಾಗಿ ಮಾಡಿದ್ದು ವಿಪರ್ಯಾಸವೇ ಸರಿ ಎಂದು ಮಾರ್ಮಿಕವಾಗಿ ನುಡಿದರು.
ನೈರುತ್ಯ ಪದವೀಧರ ಕ್ಷೇತ್ರದ ಚುನಾಯಿತ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಮಾತನಾಡಿ, ಮತ ಎಣಿಕೆಯ ಸಮಯವನ್ನು ಪ್ರತಿಯೊಬ್ಬ ಕಾರ್ಯಕರ್ತರು, ಮುಖಂಡರುಗಳು ಹಬ್ಬದೋಪಾದಿಯಲ್ಲಿ ಸಂಭ್ರಮಿಸಿದ್ದು ಎಸ್.ಎಲ್.ಭೋಜೇಗೌಡ ಮತ್ತು ತಮ್ಮ ಗೆಲುವು ಕಾರ್ಯಕರ್ತರಿಗೆ ಮತ್ತು ಮುಖಂಡರಿಗೆ ಸಲ್ಲಲಿದ್ದು, ತಮ್ಮ ಋಣವನ್ನು ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ತೀರಿಸುವುದಾಗಿ ವಾಗ್ದಾನ ಮಾಡಿದರು.
ಚುನಾವಣಾ ಪೂರ್ವದಲ್ಲಿ ತಮ್ಮ ಬಗ್ಗೆ ಇಲ್ಲ-ಸಲ್ಲದ ಆರೋಪಗಳನ್ನು ಪ್ರತಿಪಕ್ಷದವರು ಮತ್ತು ಅಭ್ಯರ್ಥಿಯು ಮಾಡಿದರೂ ತಾವು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಚುನಾವಣಾ ಪ್ರಚಾರದಲ್ಲಿ ಮಗ್ನನಾಗಿ ಕಾರ್ಯನಿರ್ವಹಿಸಿದ್ದು ಗೆಲುವಿಗೆ ಕಾರಣವಾಯಿತು ಎಂದು ಸಂತಸ ಹಂಚಿಕೊಂಡರು.
ಮುಂಬರುವ ಜಿ.ಪಂ. ಮತ್ತು ತಾ.ಪಂ. ಚುನಾವಣೆ ಗಳಲ್ಲೂ ಎನ್.ಡಿ.ಎ. ಅಭ್ಯರ್ಥಿಗಳು ಜಯಗಳಿಸುವತ್ತ ಎಲ್ಲರೂ ಗಮನಹರಿಸಬೇಕೆಂದು ಮನವಿ ಮಾಡಿದರು.
ಅಭಿನಂದನಾ ಸಮಾರಂಭದಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ.ಸುರೇಶ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳ್, ಪುರಸಭಾ ಸದಸ್ಯ ರಂಗನಾಥ್, ಬಾಬು ಹೋಬಳಿದಾರ್, ಬಿಜೆಪಿ ಮುಖಂಡ ರಾದ ಕೆ.ಪಿ.ಕುಬೇರಪ್ಪ, ನೆಲಹೊನ್ನೆ ಮಂಜುನಾಥ್, ಅರಕೆರೆ ನಾಗರಾಜ್, ಶಾಂತರಾಜ್ ಪಾಟೀಲ್, ದೊಡ್ಡೇರಿ ರಾಜಣ್ಣ, ದಿಡಗೂರು ಪಾಲಾಕ್ಷಪ್ಪ, ಸುರೇಂದ್ರ ನಾಯ್ಕ್, ಕೆ.ಎಲ್.ರಂಗನಾಥ್, ಅಜಯ್ ಚೀಲೂರು, ಇಂಚರ ಮಂಜುನಾಥ್, ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.