2025 ರೊಳಗೆ ಮಲೇರಿಯಾಮುಕ್ತ ಭಾರತಕ್ಕೆ ಸಮುದಾಯದ ಪಾತ್ರ ಮುಖ್ಯ

2025 ರೊಳಗೆ ಮಲೇರಿಯಾಮುಕ್ತ ಭಾರತಕ್ಕೆ ಸಮುದಾಯದ ಪಾತ್ರ ಮುಖ್ಯ

ಕೊಕ್ಕನೂರಿನ ಕಾರ್ಯಕ್ರಮದಲ್ಲಿ ಟಿ.ಹೆಚ್. ಓ ಡಾ. ಖಾದರ್

ಮಲೇಬೆನ್ನೂರು, ಜೂ.19- ಕೊಕ್ಕನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮವನ್ನು ಟಿಹೆಚ್‌ಓ ಡಾ. ಅಬ್ದುಲ್ ಖಾದರ್ ಉದ್ಘಾಟಿಸಿದರು.

ನಂತರ ಮಾತನಾಡಿದ ಖಾದರ್ ಅವರು, ಮಲೇರಿಯಾ ರೋಗವನ್ನು ನಿಯಂತ್ರಣ ಮಾಡಲು ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನಮ್ಮ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಂಡಲ್ಲಿ ಮಲೇರಿಯಾ ನಿಯಂತ್ರಣ ಸಾಧ್ಯ. ಇದಕ್ಕೆ ಸಮುದಾಯದ ಪಾತ್ರ ಬಹಳ ಮುಖ್ಯವಾಗಿದೆ. ಲಾರ್ವಾಗಳ ಉತ್ಪತ್ತಿ  ಯಾವ ರೀತಿ ಆಗುತ್ತದೆ ಮತ್ತು ಅವುಗಳನ್ನು ಗಪ್ಪಿ ಹಾಗೂ ಗ್ಯಾಂಬೂಸಿಯಾ ಮೀನುಗಳನ್ನು ಬಿಡುವುದರ ಮೂಲಕ ನಾಶ ಮಾಡಬಹುದೆಂದು ವಿವರಿಸಿದರು.

ಈ ರೋಗವು ಚಳಿ ಜ್ವರ, ಅಸ್ವಸ್ಥತೆಯ ತಲೆನೋವು, ವಾಕರಿಕೆ ಮತ್ತು ವಾಂತಿ, ಅತಿಸಾರ ಹೊಟ್ಟೆ ನೋವು, ಕೆಮ್ಮು ಇತ್ಯಾದಿ ಲಕ್ಷಣಗಳನ್ನು ಹೊಂದಿರುತ್ತದೆ. ಆದ್ದರಿಂದ ಯಾವುದೇ ಜ್ವರ ಬರಲಿ ರಕ್ತ ಪರೀಕ್ಷೆ ಮಾಡಿಸಿ ಎಂದು ಡಾ.ಖಾದರ್ ಹೇಳಿದರು.

ತಾ. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಉಮ್ಮಣ್ಣ ಮಾತನಾಡಿ, ಹಿಂದೆ ಗ್ರಾಮದಲ್ಲಿ ಹೆಚ್ಚು ಹೆಚ್ಚು ಮಲೇರಿಯಾ ಪ್ರಕರಣಗಳು ಕಂಡು ಬರುತ್ತಿದ್ದವು. ಆದರೀಗ ಆರೋಗ್ಯ ಇಲಾಖೆಯವರ ಪರಿಶ್ರಮದಿಂದ ಗ್ರಾಮಗಳು ಮಲೇರಿಯಾ ಮುಕ್ತವಾಗುತ್ತಿವೆ. ನಿಮ್ಮ ಸುತ್ತಮುತ್ತಲಿನ ಪ್ರದೇಶದವನ್ನು ಸ್ವಚ್ಛವಾಗಿಟ್ಟುಕೊಳ್ಳಿ ಎಂದ ಅವರು ಮಲೇರಿಯಾ ಕುರಿತು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ತಿಳಿಸಿದರು.

ತಾ. ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ಮಾತನಾಡಿ, ಮಳೆಗಾಲ ಪ್ರಾರಂಭವಾಗಿರುವುದರಿಂದ ಮನೆಯ ಹಿಂದೆ, ಮುಂದೆ ಮತ್ತು ಘನ ತ್ಯಾಜ್ಯ ವಸ್ತುಗಳಲ್ಲಿ ನೀರು ಸಂಗ್ರಹವಾಗದಂತೆ ನಿಗಾ ವಹಿಸಿ, ಸಂಗ್ರಹಿಸಿದ ನೀರನ್ನು ಮುಚ್ಚಿ ಬಳಸಿ, ಇದರಿಂದ ಮಲೇರಿಯಾ ಹಾಗೂ ಡೆಂಗ್ಯೂ ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ನಿಯಂತ್ರಣ ಮಾಡಬಹುದು ಎಂದರು.

ಶ್ರೀ ಬೀರಲಿಂಗೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಹಾಗೂ ವರದಿಗಾರ ನಾಗೇಂದ್ರಪ್ಪ ಮಾತನಾಡಿ, ಸಾಂಕ್ರಾಮಿಕ ರೋಗಗಳ ನಿರ್ಮೂಲನೆ ಯಿಂದ ಈ ದೇಶದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

ತಾ. ಹಿರಿಯ ಸುರಕ್ಷಾಧಿಕಾರಿ ಶ್ರೀಮತಿ ಸುಧಾ ಮಾತನಾಡಿ, ವೈಯಕ್ತಿಕ ಸ್ವಚ್ಛತೆಯಿಂದ ರೋಗಗಳನ್ನು ನಿಯಂತ್ರಣ ಮಾಡಬಹುದು. `ಹೆಚ್ಚು ಸಮಾನತೆಯ ಜಗತ್ತಿಗೆ ಮಲೇರಿಯಾ ವಿರುದ್ಧದ ಹೋರಾಟವನ್ನು ತೀವ್ರಗೊಳಿಸೋಣ’   ಎಂಬುದು ಈ ವರ್ಷದ ಘೋಷ ವಾಕ್ಯವಾಗಿದೆ ಎಂದರು. 

ಶಾಲಾ ಮುಖ್ಯೋಪಾಧ್ಯಾಯ ರವಿಕುಮಾರ್ ಮಾತನಾಡಿ, ಸಾಂಕ್ರಾಮಿಕ ರೋಗದ ತಡೆಯನ್ನು ಶಾಲಾ ಹಂತದಲ್ಲಿಯೇ ಪಠ್ಯಗಳಲ್ಲಿ ಅಳವಡಿಸಿದ್ದು, ಅದರ ಬಗ್ಗೆ ಸರಿಯಾಗಿ ತಿಳಿದುಕೊಂಡು ನಡೆಯಬೇಕೆಂದು ಮಕ್ಕಳಿಗೆ ಕರೆ ನೀಡಿದರು.

ಆರೋಗ್ಯ ನಿರೀಕ್ಷಣಾಧಿಕಾರಿ ಚಂದ್ರಶೇಖರ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಪ್ರೀತಿ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಶಾಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!