ಪ್ರತಿದಿನ ಯೋಗದಿಂದ ಉತ್ತಮ ಆರೋಗ್ಯ ಸಾಧ್ಯ

ಪ್ರತಿದಿನ ಯೋಗದಿಂದ ಉತ್ತಮ ಆರೋಗ್ಯ ಸಾಧ್ಯ

ಯೋಗ ತರಬೇತಿ ಶಿಬಿರದಲ್ಲಿ ಬಸವಪ್ರಭು ಶ್ರೀಗಳು

ದಾವಣಗೆರೆ, ಜೂ. 19-  ದೇಹ ಮತ್ತು ಮನಸ್ಸನ್ನು ಏಕಾಗ್ರತೆಯಿಂದ ಇಟ್ಟುಕೊಳ್ಳುವುದು ಯೋಗದಿಂದ ಸಾಧ್ಯ. ಕಾಯಿಲೆಗಳನ್ನು ತಡೆಯಲು ಪ್ರತಿ ದಿನ ಯೋಗ ಮಾಡಬೇಕು ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.

ಜಿಲ್ಲಾ ಆಯುಷ್ ಇಲಾಖೆ, ಜಿಲ್ಲಾ ಯೋಗ ಒಕ್ಕೂಟ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ದಾವಣಗೆರೆ ಇವರ ಸಹಯೋಗದಲ್ಲಿ  ನಗರದ ಶಿವಯೋಗಿ ಮಂದಿರದಲ್ಲಿ 10 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಯೋಗ ತರಬೇತಿ ಶಿಬಿರ, ಆಯುಷ್ ಪರಿಚಯ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು  ಮಾತನಾಡಿದರು.

ಯೋಗದಿಂದ ಸದೃಢ ಆರೋಗ್ಯ ಕಾಪಾಡಿಕೊಳ್ಳಬಹುದು. ಆರೋಗ್ಯ ಚನ್ನಾಗಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯವಿದೆ ಎಂದರು. ಯೋಗದಿಂದ  ವಿದ್ಯಾರ್ಥಿಗಳು ಪರೀಕ್ಷೆಯ ಭಯವನ್ನು ನೀಗಿಸಬಹುದು.  ಇಂತಹ ಯೋಗವನ್ನು ಕಂಡು ಹಿಡಿದಿದ್ದು ಪತಂಜಲಿ  ಮಹರ್ಷಿಗಳು. ಅರಿವು, ಆರೋಗ್ಯ  ಎಲ್ಲವೂ  ಯೋಗದಿಂದಲೇ ಸಾಧ್ಯ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆಯುಷ್ ಅಧಿಕಾರಿ ಡಾ. ಬಿ.ಯು.ಯೋಗೇಂದ್ರ ಕುಮಾರ್  ಅವರು, 10ನೇ ಅಂತರರಾಷ್ಟ್ರೀಯ ಯೋಗ ದಿನದ ಮಹತ್ವ ಮತ್ತು ಆಚರಣೆ ಬಗ್ಗೆ ತಿಳಿಸಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮುಖ್ಯ ಆಯುಕ್ತ ಮುರುಘರಾಜೇಂದ್ರ  ಜೆ.ಚಿಗಟೇರಿ ಮಾತನಾಡಿ,  ಪ್ರತಿನಿತ್ಯ ಯೋಗ ಮಾಡಿ, ಯೋಗ ದಿಂದ ನಿರೋಗಿಯಾಗಲು ಕರೆ ನೀಡಿದರು.

ದಾವಣಗೆರೆ ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ವಾಸುದೇವ ರಾಯ್ಕರ್   ಮಾತನಾಡಿ, ಯೋಗ  ಒಕ್ಕೂಟ ಇಂದಿಗೂ 10 ವರ್ಷಗಳ ಕಾಲ ನಿರಂತರವಾಗಿ ಆಯುಷ್ ಇಲಾಖೆಯ ಸಹಯೋಗದಲ್ಲಿ ಯೋಗಕ್ಕೆ ಸಹಕಾರ ನೀಡುತ್ತಾ ಬಂದಿದೆ  ಎಂದು ತಿಳಿಸಿದರು.

 ಆಯುಷ್‌ ವೈದ್ಯಾಧಿಕಾರಿ ಬಿಸನಳ್ಳಿ  ಡಾ.ಸಿದ್ದೇಶ್  ಯೋಗ ಮತ್ತು ಆಯುರ್ವೇದದ ಮಹತ್ವವನ್ನು ಮಕ್ಕಳಿಗೆ ತಿಳಿಸಿದರು.

  ಜಿಲ್ಲಾ ಸ್ಕೌಟ್ ಆಯುಕ್ತ ಎ.ಪಿ. ಷಡಕ್ಷರಪ್ಪ,  ಜಿಲ್ಲಾ ಉಪಾಧ್ಯಕ್ಷೆ ಶಾಂತ ಯಾವಗಲ್,   ಜಿಲ್ಲಾ ಗೈಡ್ ಆಯುಕ್ತರಾದ ಶಾರದ ಮಾಗಾನಹಳ್ಳಿ,  ಜಿಲ್ಲಾ ಸಹಾಯಕ ಆಯುಕ್ತ ಎನ್.ಕೆ ಕೊಟ್ರೇಶ್,  ಸಹ ಕಾರ್ಯದರ್ಶಿ ಸುಖವಾನಿ.    ಅಂತರರಾಷ್ಟ್ರೀಯ ಯೋಗ ಕ್ರೀಡಾಪಟುಗಳಾದ ಹೋಲೂರ್ ತೀರ್ಥರಾಜ್,  ಅನಿಲ್   ರಾಯ್ಕರ್, ಪರಶುರಾಮ್  ವಿದ್ಯಾರ್ಥಿಗಳಿಗೆ ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

520 ಸ್ಕೌಟ್ಸ್ ಮತ್ತು ಗೈಡ್ ವಿದ್ಯಾರ್ಥಿಗಳು ಹಾಗೂ ದಳ ನಾಯಕ ನಾಯಕಿಯರು ಮತ್ತು ಯೋಗ ಒಕ್ಕೂಟದ ಸಿಬ್ಬಂದಿಗಳು ಭಾಗವಹಿಸಿದ್ದರು.   ಅಶ್ವಿನಿ ಸ್ವಾಗತಿಸಿ,  ನಿರೂಪಿಸಿದರು, ಜಿಲ್ಲಾ ಕಾರ್ಯದರ್ಶಿ ಎಂ. ರತ್ನ   ವಂದಿಸಿದರು.

error: Content is protected !!