ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಂಚಾರ ನಿಯಮಗಳ ಜಾಗೃತಿ

ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಂಚಾರ ನಿಯಮಗಳ ಜಾಗೃತಿ

ದಾವಣಗೆರೆ, ಜೂ.19- ಜಿಲ್ಲಾ ಪೊಲೀಸ್‌ ಇಲಾಖೆಯಿಂದ ಮಂಗಳವಾರ ನಗರದ ವಿವಿಧ ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರು, ಪಾಲಕರು ಮತ್ತು ವಿದ್ಯಾರ್ಥಿಗಳಿಗೆ ಸಂಚಾರ ನಿಯಮದ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಎಸ್ಪಿ ಉಮಾ ಪ್ರಶಾಂತ್‌, ಎಎಸ್ಪಿ ವಿಜಯಕುಮಾರ ಎಂ ಸಂತೋಷ್ ಮತ್ತು ಜಿ. ಮಂಜುನಾಥ್‌, ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಅವರ ಮಾರ್ಗ ದರ್ಶನದಲ್ಲಿ ಸಂಚಾರ ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ ನಲವಾಗಲು ಹಾಗೂ ಸಂಚಾರಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ತಂಡ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಿತು.

ಜಿಲ್ಲೆಯಲ್ಲಿ ಇನ್ನು ಮುಂದೆ ಚುರುಕು ಸಂಚಾರಿ ನಿಯಮದ ಕಾರ್ಯಾಚರಣೆ ನಡೆಯಲಿದ್ದು, ಶಾಲಾ-ಕಾಲೇಜಿಗೆ ವಾಹನದಲ್ಲಿ ಬರುವ ಬೋಧಕರು, ಪಾಲಕರು ಮತ್ತು ವಿದ್ಯಾರ್ಥಿಗಳು ಕಡ್ಡಾಯವಾಗಿ ಚಾಲನಾ ಪರವಾನಿಗೆ ಹೊಂದಿರಬೇಕು. ದ್ವಿಚಕ್ರ ಚಾಲಕರು ಹೆಲ್ಮೆಟ್ ಧರಿಸುವುದು ಕಡ್ಡಾಯ ಮತ್ತು ಟ್ರಿಪಲ್ ರೈಡಿಂಗ್ ಮಾಡದಂತೆ ಸೂಚನೆ ನೀಡಿದರು.

ಏಕಮುಖ ಸಂಚಾರದ ವಿರುದ್ಧವಾಗಿ ಮತ್ತು ಅಪ್ರಾಪ್ತ ಮಕ್ಕಳಿಗೆ ವಾಹನ ಚಲಿಸಲು ಅನುಮತಿಸದಂತೆ ಪಾಲಕರಿಗೆ ಎಚ್ಚರಿಕೆ ನೀಡಿದರು. 9 ತಿಂಗಳಿಗಿಂತ ಹೆಚ್ಚಿನ ವಯಸ್ಸಿನ ಮಕ್ಕಳಿಗೂ ಕಡ್ಡಾಯವಾಗಿ safety harness / ಹೆಲ್ಮೆಟ್ ಧರಿಸಿಕೊಂಡು ಬರಬೇಕು ಎಂದಿದ್ದಾರೆ.

ಮಕ್ಕಳನ್ನು ಶಾಲೆಗೆ ಕರೆ ತರುವ ಆಟೋಗಳಲ್ಲಿ ಅನುಮತಿಗಿಂತ ಹೆಚ್ಚಿನ ಮಕ್ಕಳನ್ನು ಕರೆ ತರಬಾರದು. ಸರಿಯಾಗಿ ಟ್ರಾಫಿಕ್ ಸಿಗ್ನಲ್ ಅನುಸರಿಸಿ ರಸ್ತೆ ದಾಟುವ ಜತೆಗೆ ಶಾಲಾ ವಾಹನಗಳು ಸುರಕ್ಷತಾ ಕ್ರಮ ಅನುಸರಿಸುವಂತೆ ಹೇಳಿದರು.

ಇದೇ ವೇಳೆ ಸಂಚಾರ ನಿಯಮ ಉಲ್ಲಂಘಿಸಿದ ಪಾಲಕರು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ದಂಡ ವಿಧಿಸಲಾಗಿದ್ದು, ಹೆಲ್ಮೆಟ್ ಧರಿಸದ ಒಟ್ಟು 28 ಪ್ರಕರಣಗಳಲ್ಲಿ 14 ಸಾವಿರ ರೂ. ದಂಡ,  ಟ್ರಿಪಲ್‌ ರೈಡಿಂಗ್‌ ಸಂಬಂಧಿಸಿದಂತೆ 5 ಪ್ರಕರಣಗಳಿಗೆ
2500 ರೂ.ಗಳ ದಂಡ, ಹಾಗೂ
 ಏಕಮುಖ ಸಂಚಾರದ ವಿರುದ್ಧ ಚಾಲನೆ ಮತ್ತು ನಿರ್ಲಕ್ಷ ಚಾಲನೆಯ 1 ಪ್ರಕರಣಕ್ಕೆ 500 ರೂ.ಗಳ ದಂಡ ವಿಧಿಸಿದ್ದಾರೆ.

error: Content is protected !!