ರಾಣೇಬೆನ್ನೂರಿನ ಕಾಂಗ್ರೆಸ್ ಆತ್ಮಾವಲೋಕನ ಸಭೆಯಲ್ಲಿ ಶಾಸಕ ಪ್ರಕಾಶ್ ಕೋಳಿವಾಡ
ರಾಣೇಬೆನ್ನೂರು, ಜೂ.19- ಕಳೆದ ನಾಲ್ಕು ಲೋಕಸಭೆ ಚುನಾವಣೆಗಳಲ್ಲಿ ಒಂದೂವರೆ ಲಕ್ಷದಿಂದ, ಎರಡೂವರೆ ಲಕ್ಷ ಮತಗಳ ಅಂತರದಿಂದ ನಾವು ಸೋಲುತ್ತಾ ಬಂದಿದ್ದೇವೆ. ಈ ಬಾರಿ ಕೇವಲ ನಲವತ್ತು ಸಾವಿರ ಅಂತರದಲ್ಲಿ ಸೋತಿದ್ದೇವೆ. ಅಂದರೆ, ಜನತೆ ಬಿಜೆಪಿ ತೊರೆದು ನಮ್ಮನ್ನು ಬೆಂಬಲಿಸಿದ್ದಾರೆ. ಹಾಗಾಗಿ `ಬಿಜೆಪಿಗೆ ಗೆಲುವಿನ ಹುಮ್ಮಸ್ಸಿಲ್ಲ, ನಮಗೆ ಸೋಲಿನ ನೋವಿಲ್ಲ’ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ವಿನಾಯಕ ನಗರದ ಕಾಂಗ್ರೆಸ್ ಕಛೇರಿಯಲ್ಲಿ ನಿನ್ನೆ ನಡೆದ ಲೋಕಸಭಾ ಚುನಾವಣೆಯ ಫಲಿತಾಂಶ ಕುರಿತು ನಡೆದ ಆತ್ಮಾವಲೋಕನ ಸಭೆಯಲ್ಲಿ ಅವರು ಮಾತನಾಡಿದರು.
ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿದ ಕಾಂಗ್ರೆಸ್ ನವರ ಮನವೊಲಿಸ ಬೇಕು. ಅವರು ಅನೇಕ ಕಾರಣಗಳಿಂದ ಬಿಜೆಪಿಗೆ ಮತ ನೀಡಿರುತ್ತಾರೆ. ಅವರ ತೊಂದರೆಗಳನ್ನು ಅರಿತು ಮತ್ತೆ ಕಾಂಗ್ರೆಸ್ಸಿಗೆ ಮರಳಿ ಕರೆತರಬೇಕಾಗಿದೆ. ಬರಲಿರುವ ಜಿಪಂ, ತಾಪಂ, ಎಪಿಎಂಸಿ, ಪಿಎಲ್‌ಡಿ ಬ್ಯಾಂಕ್ ಎಲ್ಲ ಚುನಾವಣೆಗಳಲ್ಲಿ ನಮ್ಮ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸುವಂತೆ ಪಕ್ಷವನ್ನು ಸಂಘಟಿಸಬೇಕು ಎಂದು ಕಾರ್ಯ ಕರ್ತರಲ್ಲಿ ಶಾಸಕರು ಮನವಿ ಮಾಡಿದರು.
ಅಭಿವೃದ್ಧಿ ಕೆಲಸಗಳನ್ನು ಯಾವುದೇ ಭೇದಗಳನ್ನು ಎಣಿಸದೇ ಮಾಡುತ್ತೇನೆ ನಿಮ್ಮ ವೈಯಕ್ತಿಕ ಕೆಲಸಗಳಿದ್ದಲ್ಲಿ ಅವು ಕಾಂಗ್ರೆಸ್ ಕಾರ್ಯಕರ್ತರಿಗೆ ಮೀಸಲಿರಿ ಸುತ್ತೇನೆ. ತಾವು ನೀಡಿದ ಸಲಹೆಗಳೆಲ್ಲವನ್ನು ಗಣನೆಗೆ ತೆಗೆದುಕೊಂಡು ಅದರಂತೆ ನಡೆಯುತ್ತೇನೆ. ನಿಮ್ಮ ಪ್ರತಿ ಹಂತದಲ್ಲೂ ನಾನು ನಿಮ್ಮ ಜೊತೆ ಇರುತ್ತೇನೆ ಎಂದು ಅವರು ಕಾರ್ಯಕರ್ತರ ಅಭಿಪ್ರಾಯಗಳಿಗೆ ಉತ್ತರಿಸಿದರು.
ನಗರ, ಪಟ್ಟಣಗಳಲ್ಲಿ ಕಾಂಗ್ರೆಸ್ ಮತ ಗಳಿಕೆ ಪ್ರಮಾಣ ಕಡಿಮೆ ಇದೆ. ಹಳ್ಳಿಗಳಲ್ಲಿ ಹೆಚ್ಚಿದೆ. ಶಹರ, ಪಟ್ಟಣಗಳಲ್ಲಿ ನಾವು ಪಕ್ಷದ ಸಂಘಟನೆಗೆ ಹೆಚ್ಚು ಆದ್ಯತೆ ಕೊಡಬೇಕು ಎಂದು ಹೇಳಿದ ಅವರು ಲೋಕಸಭೆ ಪರಾಜಿತ ಅಭ್ಯರ್ಥಿ ಆನಂದ ಗಡ್ಡದೇವರಮಠ ಅವರು, ನಾವು ಸೋತಿದ್ದರೂ ಸಹ ಆತ್ಮಾವಲೋಕನ ಸಭೆಗೆ ಆಗಮಿಸಿದ ಅಪಾರ ಸಂಖ್ಯೆಯ ಕಾರ್ಯಕರ್ತರ ಬಗ್ಗೆ ಸಂತಸ ವ್ಯಕ್ತಪಡಿಸಿ, ನಿಮ್ಮೆಲ್ಲ ಸಂದರ್ಭಗಳಲ್ಲೂ ಜೊತೆಯಾಗಿರುವುದಾಗಿ ತಿಳಿಸಿದರು.
ಕಾಂಗ್ರೆಸ್ ಅಧ್ಯಕ್ಷ ಮಂಜನಗೌಡ ಪಾಟೀಲ, ಕೆಸಿಸಿ ಬ್ಯಾಂಕ್ ನಿರ್ದೇಶಕ ಮಳ್ಳಪ್ಪ ನಿಂಗಜ್ಜನವರ, ಶೇರು ಕಾಬೂಲಿ, ಏಕನಾಥ ಭಾನುವಳ್ಳಿ, ಪುಟ್ಟಪ್ಪ ಮರಿಯಮ್ಮ ನವರ, ಬಿ.ಎಸ್.ಮರದ, ರುಕ್ಮಿಣಿ ಸಾವುಕಾರ, ಕೃಷ್ಣಪ್ಪ ಕಂಬಳಿ, ಸಣ್ಣತಮ್ಮಪ್ಪ ಬಾರ್ಕಿ, ಚಂದ್ರಪ್ಪ ಬೇಡರ, ರವಿ ಪಾಟೀಲ, ರಾಜು ಮೋಟಗಿ, ರಾಜು ಅಡಿವೆಪ್ಪನವರ ಮತ್ತಿತರರಿದ್ದರು.