ಹರಪನಹಳ್ಳಿ, ಜೂ.17- ಮುಸಲ್ಮಾನ ಸಮುದಾಯದ ಪವಿತ್ರ ಹಬ್ಬಗಳಲ್ಲೊಂದಾದ ದಾನ ಧರ್ಮ ಹಾಗೂ ಭ್ರಾತೃತ್ವದ ಸಂಕೇತವಾದ ಬಕ್ರೀದ್ ಹಬ್ಬವನ್ನು ಪಟ್ಟಣದಲ್ಲಿ ಇಸ್ಲಾಂ ಸಮಾಜವು ಸಡಗರ-ಸಂಭ್ರಮದಿಂದ ಆಚರಿಸಿತು.
ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಪಟ್ಟಣದ ಮೂರು ಕಡೆ ಸಾಮೂಹಿಕ ಪ್ರಾರ್ಥನೆ ನೆರವೇರಿಸುವ ಮೂಲಕ ಬಕ್ರೀದ್ ಹಬ್ಬಕ್ಕೆ ಮೆರಗು ನೀಡಿದರು.
ಹೊಸಪೇಟೆ ರಸ್ತೆಯ ತರಳಬಾಳು ಕಲ್ಯಾಣ ಮಂಟಪ ಹಿಂಭಾಗದ ದರ್ಗಾದಲ್ಲಿ ಆಲಿ ಆದೀಸ್ ಪಂಗಡದವರು, ಹಡಗಲಿ ರಸ್ತೆಯ ದರ್ಗಾದಲ್ಲಿ ಅಲಿ ಸುನ್ನಿ ಪಂಗಡದವರು ಹಾಗೂ ಎಚ್.ಪಿ.ಎಸ್ ಕಾಲೇಜು ಹಿಂಭಾಗ ಹಕ್ ಸಮಿತಿಯವರು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು. ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಸಾವಿರಾರು ಮುಸ್ಲಿಂ ಮಹಿಳೆಯರು ಸಹ ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು. ಇದಕ್ಕಾಗಿ ಹೊಸಪೇಟೆ ರಸ್ತೆಯ ಈದ್ಗಾ ಮೈದಾನದಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿತ್ತು.
ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಸ್ಥಳಕ್ಕೆ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಭೇಟಿ ನೀಡಿ ಎಲ್ಲರಿಗೂ ಹಬ್ಬದ ಶುಭಾಶಯ ತಿಳಿಸಿದರು. ಈ ವೇಳೆ ಅಂಜುಮನ್ ಸಂಸ್ಥೆ ಶಾಸಕರಿಗೆ ಸನ್ಮಾನಿಸಿತು.
ಬೆಳಗ್ಗೆಯಿಂದಲೇ ಮಕ್ಕಳು, ಮೊಮ್ಮಕ್ಕಳು, ಸ್ನೇಹಿತರು, ಸಂಬಂಧಿಗಳೊಂದಿಗೆ ಮಸೀದಿಗಳಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಶುಭಾಶಯ ವಿನಿಮಯ ಮಾಡಿದರು. ಬಡವರಿಗೆ ಬಟ್ಟೆ, ಆಹಾರ ಸಾಮಾಗ್ರಿ ಹಾಗೂ ಹಣ ದಾನ ಮಾಡುವ ದೃಶ್ಯ ಕಂಡು ಬಂದಿತು.
ಈ ವೇಳೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪರಾಜಿತ ಅಭ್ಯರ್ಥಿ ನೂರ್ ಅಹಮದ್, ಮೌಲಾನಾ ಫೀರ್ ಸಾಬ್, ಅಂಜುಮನ್ ಅಧ್ಯಕ್ಷ ಮುಜುಬರ್ ರೆಹಮಾನ್, ಅಂಜುಮನ್ ಮಾಜಿ ಅಧ್ಯಕ್ಷ ಸಿ. ಜಾಹೀದ್, ಪುರಸಭೆ ಮಾಜಿ ಉಪಾಧ್ಯಕ್ಷ ಬಿ. ನಜೀರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ಪುರಸಭೆ ಸದಸ್ಯರಾದ ಲಾಟಿ ದಾದಾಪೀರ್, ಜಾಕೀರ್ ಸರಖಾವಸ್, ಗೊಂಗಡಿ ನಾಗರಾಜ, ಉದ್ದಾರ ಗಣೇಶ್, ಪುರಸಭೆ ಮಾಜಿ ಸದಸ್ಯ ಎಂ. ಜಾಫರ್‌ಸಾಬ್, ಮುಖಂಡರಾದ ಎಸ್.ಕೆ. ಶಮಿವುಲ್ಲಾ, ಎ. ಜಾವೀದ್, ಅಬ್ದುಲ್ ಸಲಾಮ್, ಸಿ. ಜಾವೇದ್, ಬೇಲ್ದಾರ್ ಬಾಷಾಸಾಬ್, ಎ. ಮೂಸಾಸಾಬ್,
ಮಾಬೂಷಾ, ರಾಜಾಸಾಬ್, ಶಾಸ್ತ್ರಿ ಪೀರ್‌ದೋಶ್, ಉಮರಸಾಬ್, ಸೋಗಿ ಇಬ್ರಾಹಿಂ, ರಿಯಾಜ್, ಎನ್. ಮಜೀದ್, ಗುಂಡಿನಕೇರಿ ಸತ್ತಾರ್‌ಸಾಬ್ ಎಸ್.ಕೆ. ಸಲಾಮ್, ಜಿ. ಅಲ್ಲಾಭಕ್ಷಿ, ರಿಜ್ವಾನ್, ಬಿ. ಮಾಬುಸಾಬ್, ಸೇರಿದಂತೆ ಪಟ್ಟಣದ ಮುಸ್ಲಿಂ ಬಾಂಧವರು ಇದ್ದರು.