ಯಥಾಸ್ಥಿತಿ ಕಾಪಾಡಿದ ಅಧಿಕಾರಿಗಳ ತಂಡ
ಹೊನ್ನಾಳಿ, ಜೂ. 18 – ತಾಲ್ಲೂಕಿನ ಅರಬಗಟ್ಟೆಯ ಸರ್ಕಾರಿ ಜಾಗದಲ್ಲಿ ಸೋಲಾರ್ ವಿದ್ಯುತ್ ಘಟಕದ ಸ್ಥಾಪನೆಗೆ 49.14 ಎಕರೆ ಜಮೀನು ಮಂಜೂರಾಗಿದ್ದು, ಮಂಗಳವಾರ ಬೆಳಿಗ್ಗೆ 6.30ಕ್ಕೆ ಉಪವಿಭಾಗಾಧಿಕಾರಿ ವಿ.ಅಭಿಷೇಕ್ ನೇತೃತ್ವದ ಅಧಿಕಾರಿಗಳ ತಂಡವು ಮಿಂಚಿನ ಕಾರ್ಯಾಚರಣೆ ನಡೆಸಿ ಜಮೀನು ಹದ್ದು ಬಸ್ತು ಮಾಡಲು ಅರಬಗಟ್ಟೆಗೆ ಹೋಗಿದ್ದು ಸ್ಥಳೀಯ ರೈತರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಜಮೀನು ಹದ್ದು ಬಸ್ತು ಕಾರ್ಯಾಚರಣೆಯನ್ನು ಮುಂದೂಡಿ ರುವ ಘಟನೆ ಜರುಗಿದೆ.
ಉಪವಿಭಾಗಾಧಿಕಾರಿ ವಿ. ಅಭಿಷೇಕ್ ಮಾತನಾಡಿ, ಕೇಂದ್ರ ಸರ್ಕಾರದ ಪಿಎಂ ಕುಸುಮ್ ಯೋಜನೆಯಡಿ ಸೋಲಾರ್ ವಿದ್ಯುತ್ ಘಟಕ ಸ್ಥಾಪನೆಗೆ ಅರಬಗಟ್ಟೆ ಗ್ರಾಮದ ಸರ್ವೇ ನಂ. 102, 103, 110, 111ರ ಒಟ್ಟು ವಿಸ್ತೀರ್ಣ 49.14ಎಕರೆ ಜಾಗವನ್ನು ಸರ್ಕಾರವು 2024ರ ಮಾರ್ಚ್ 6 ಕ್ಕೆ ದಾವಣಗೆರೆಯ ಬೆಸ್ಕಾಂನ ಅಧೀಕ್ಷಕ ಎಂಜಿನಿಯರ್ ಇವರ ಹೆಸರಿಗೆ 30 ವರ್ಷದ ಅವಧಿಗೆ ಮಂಜೂರು ಮಾಡಿದ್ದು, ಈ ಜಮೀನು ಅವರ ಹೆಸರಿಗೆ ಪಹಣಿಯಾಗಿ ಆರ್‌ಟಿಸಿ ಪ್ರಕ್ರಿಯೆಯೂ ಪೂರ್ಣಗೊಂಡಿದ್ದು, ಬೆಳಿಗ್ಗೆ ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಬೆಸ್ಕಾಂ, ಕಂದಾಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳ ತಂಡದೊಂದಿಗೆ ನಿಗದಿಗೊಳಿಸಿದ ಜಾಗಕ್ಕೆ ಭೇಟಿ ನೀಡಿ ಜಾಗವನ್ನು ಹದ್ದು ಬಸ್ತು ಮಾಡಲು ಮುಂದಾದಾಗ, ಸ್ಥಳೀಯ ರೈತರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಕಾನೂನು ಸುವ್ಯವಸ್ಥೆ ಹದಗೆಡದಂತೆ 144ನೇ ಸೆಕ್ಷನ್ ಜಾರಿ ಮಾಡಿ ಮಧ್ಯಾಹ್ನ 3 ಗಂಟೆಗೆ ಕಾರ್ಯಾ ಚರಣೆಯನ್ನು ಸ್ಥಗಿತಗೊಳಿಸಲಾಯಿತು ಎಂದು ತಿಳಿಸಿದರು.
ಸೋಲಾರ್ ವಿದ್ಯುತ್ ಘಟಕದ ಸ್ಥಾಪನೆಗೆ ದಾವಣಗೆರೆಯ ರಾಜೇಶ್ವರಿ ಎಲೆಕ್ಟ್ರಿಕಲ್ಸ್ ಪ್ರೈವೇಟ್ ಲಿಮಿಟೆಡ್ ಇವರಿಗೆ ಟೆಂಡರ್ ಆಗಿದ್ದು, ಸೋಲಾರ್ ವಿದ್ಯುತ್‍ನಿಂದ ಸ್ಥಳೀಯ ಭಾಗದ ರೈತರಿಗೇ ಅನುಕೂಲವಾಗಲಿದೆ ಎಂದು ತಿಳಿಸಿದರು.
ಈ ಭಾಗದ ರೈತರು ಫಾರಂ ನಂ. 50ಮತ್ತು53 ರಡಿ ಬಗರ್‍ಹುಕ್ಕುಂ ಜಮೀನಿಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಅರ್ಜಿಗಳು ವಜಾ ಆಗಿವೆ ಎಂದು ಪತ್ರಿಕೆಗೆ ಮಾಹಿತಿ ನೀಡಿದರು.
ಈಗಾಗಲೇ ಹರಳಹಳ್ಳಿ ಗ್ರಾಮದ ಸರ್ವೇ ನಂ.101 ಮತ್ತು 102 ರ 22 ಎಕರೆ ಜಾಗವನ್ನು ಸೋಲಾರ್ ಘಟಕ ಸ್ಥಾಪನೆಗೆ ಕಾಯ್ದಿರಿಸಲಾಗಿದ್ದು ಈ ಗ್ರಾಮದಲ್ಲಿ ಯಾವುದೇ ಅಡೆ-ತಡೆಗಳಿ ರುವುದಿಲ್ಲವೆಂದು ಸ್ಪಷ್ಟಪಡಿಸಿದರು.
ರೈತರ ಬೇಡಿಕೆಗೆ ಪರಿಹಾರ : ರೈತ ಸಮುದಾಯ ಪಂಪ್‍ಸೆಟ್‍ಗಳಿಗೆ ಹಗಲು ಹೊತ್ತಿನಲ್ಲೇ ವಿದ್ಯುತ್ ಪೂರೈಕೆ ಮಾಡುವಂತೆ ಎಲ್ಲಾ ಸರ್ಕಾರಗಳಿಗೆ ಒತ್ತಾಯ ಮಾಡುತ್ತಲೇ ಇದ್ದು, ಈ ಸೋಲಾರ್ ಘಟಕಗಳ ವಿದ್ಯುತ್ ಉತ್ಪಾದನೆಯಿಂದ 15ಕ್ಕೂ ಹೆಚ್ಚು ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದ್ದು, ಈ ವಿದ್ಯುತ್‍ನ್ನು ಹಗಲು ಹೊತ್ತಿನಲ್ಲೇ ಸ್ಥಳೀಯ ರೈತರ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಒದಗಿಸಲಾಗುವುದು ಎಂದು ಬೆಸ್ಕಾಂ ಎಇಇ ಜಯಪ್ಪ ಮಾಹಿತಿ ನೀಡಿದರು.
ರೇಣುಕಾಚಾರ್ಯ ಪ್ರತಿಭಟನೆ : ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಬಿಜೆಪಿ ತಾಲ್ಲೂಕು ಅಧ್ಯಕ್ಷ ಜೆ.ಕೆ.ಸುರೇಶ್, ಬಿಜೆಪಿ ಮುಖಂಡರಾದ ಕೆ.ಪಿ.ಕುಬೇರಪ್ಪ, ಬಾಬು ಹೋಬಳಿದಾರ್, ನೆಲಹೊನ್ನೆ ಮಂಜುನಾಥ್, ಟಿ.ಜಿ.ರಮೇಶ್ ಗೌಡ, ಇಂಚರ ಮಂಜುನಾಥ್, ಅರಕೆರೆ ನಾಗರಾಜ್, ಎಸ್.ಎಸ್.ಬೀರಪ್ಪ, ಶಾಂತರಾಜ್ ಪಾಟೀಲ್, ಕೋಡಿಕೊಪ್ಪ ರವಿ, ಸುರೇಂದ್ರನಾಯ್ಕ್, ಮಾರುತಿ ನಾಯ್ಕ್, ಶಿವು ಹುಡೇದ್, ಗುಂಡ ಚಂದ್ರು ಮತ್ತಿತರರೊಂದಿಗೆ ಸ್ಥಳಕ್ಕೆ ಧಾವಿಸಿ, ಅಧಿಕಾರಿಗಳಿಗೆ ರೈತರನ್ನು ಒಕ್ಕಲೆಬ್ಬಿಸುವುದಕ್ಕೆ ತಾವು ಅವಕಾಶ ಕೊಡುವುದಿಲ್ಲ. ಈ ಯೋಜನೆಯಿಂದ ಈ ಭಾಗದ ರೈತ ಸಮುದಾಯಕ್ಕೆ ಅನಾನುಕೂಲವಾಗಲಿದ್ದು, ಕೂಡಲೇ ಈ ಯೋಜನೆಯನ್ನು ಕೈಬಿಡಬೇಕೆಂದು ಪ್ರತಿಭಟನೆ ನಡೆಸಿದರು.
ಹೊನ್ನಾಳಿ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಸುನಿಲ್ ಕುಮಾರ್ ಅವರು ಉಪವಿಭಾಗಾಧಿಕಾರಿ ವಿ.ಅಭಿಷೇಕ್ ಅವರ ಆದೇಶದ ಮೇರೆಗೆ ತಾವು ಡಿವೈಎಸ್ಪಿ ರುದ್ರಪ್ಪ ಉಜ್ಜಿನಕೊಪ್ಪ ಅವರ ಮಾರ್ಗದರ್ಶನದಲ್ಲಿ ಒಂದು ಕೆಎಸ್‍ಆರ್‍ಪಿ, ಒಂದು ಡಿಆರ್ ತುಕಡಿ ಸೇರಿದಂತೆ 25ಕ್ಕೂ ಹೆಚ್ಚು ಸಿಬ್ಬಂದಿಯೊಂದಿಗೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಬಂದೋಬಸ್ತ್ ನೀಡಿದ್ದಾಗಿ ಮಾಹಿತಿ ನೀಡಿದರು.
ಕಾರ್ಯಾಚರಣೆಯಲ್ಲಿ ಹರಿಹರದ ಕಾರ್ಯ ನಿರ್ವಾಹಕ ಎಂಜಿನಿಯರ್ ರವಿಕಿರಣ್, ಪ್ರಭಾರಿ ತಹಶೀಲ್ದಾರ್ ಸುರೇಶ್, ಡಿವೈಎಸ್ಪಿ ರುದ್ರಪ್ಪ ಉಜ್ಜಿನಕೊಪ್ಪ, ನ್ಯಾಮತಿ ಪೊಲೀಸ್ ಇನ್ಸಪೆಕ್ಟರ್ ರವಿ, ಹೊನ್ನಾಳಿ ಪೊಲೀಸ್ ಇನ್ಸ್‌ಪೆಕ್ಟರ್ ಸುನಿಲ್ ಕುಮಾರ್, ಸಿಬ್ಬಂದಿ ಜಗದೀಶ್, ಬಸವರಾಜ್, ಸುನಿಲ್, ರಾಘವೇಂದ್ರ, ಮಲ್ಲೇಶ್, ಶಾಂತರಾಜ್, ಶ್ರೀನಿವಾಸ್, ಹರೀಶ್, ಗಣೇಶ್, ಕಿರಣ್, ರವಿ, ಶೀಲಾ ಮತ್ತು ಕಂದಾಯ ಹಾಗೂ ಬೆಸ್ಕಾಂ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.