ರಾಣೇಬೆನ್ನೂರು,ಜೂ.16- ಬ್ಯಾಡಗಿ ತಾಲ್ಲೂಕು ಆಣೂರು ಗ್ರಾಮದಲ್ಲಿ ಜೈವಿಕ ಇಂಧನ ಯೋಜನೆ ಕುರಿತು ಅರಿವು ಮೂಡಿಸುವ ಜಾಥಾ ಹಮ್ಮಿಕೊಳ್ಳುವ ಮೂಲಕ ‘ವಿಶ್ವ ಪರಿಸರ’ ದಿನಾಚರಣೆಯನ್ನು ಆಚರಿಸಲಾಯಿತು.
ಎಸ್.ಬಿ.ಎಚ್. ಪ್ರೌಢಶಾಲೆ, ಹಾವೇರಿ ಜಿಲ್ಲಾ ಮುಂದಾಳು ಸಂಸ್ಥೆ, ನವೋದಯ ಶಿಕ್ಷಣ ಮತ್ತು ಪರಿಸರ ಅಭಿವೃದ್ಧಿ ಸೇವಾ ಸಂಸ್ಥೆ (ನೀಡ್ಸ್ – ರಾಣೇಬೆನ್ನೂರು) ಹಾಗೂ ಜಿಲ್ಲಾ ಜೈವಿಕ ಇಂಧನ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರ (ಹನುಮನಮಟ್ಟಿ), ಸುಜಲಾನ್ ಫೌಂಡೇಶನ್ (ಪುಣೆ) ಹಾಗೂ ಸಾಮಾ ಜಿಕ ಅರಣ್ಯ ಇಲಾಖೆ (ಬ್ಯಾಡಗಿ) ಇವರ ಸಹಯೋಗ ದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮುಖ್ಯೋಪಾಧ್ಯಾಯ ಎಚ್. ಎನ್. ಕಳ್ಳಿಮನಿ ಪ್ರಾಸ್ತಾವಿಕವಾಗಿ ಮಾತನಾಡಿ, ನೀಡ್ಸ್ ಸಂಸ್ಥೆಯವರು ನಮ್ಮ ಶಾಲೆಯ ಮಕ್ಕಳಿಗೆ ವಿವಿಧ ಜೈವಿಕ ಇಂಧನ ಹಾಗೂ ತೋಟಗಾರಿಕೆಯ ಒಟ್ಟು 8,000ಕ್ಕೂ ಅಧಿಕ ಬೀಜಗಳನ್ನು ನೀಡಿ, ಅವುಗಳನ್ನು ಮಣ್ಣಿನೊಂದಿಗೆ ಬೆರೆಸಿ ಉಂಡಿಯನ್ನು ಮಾಡಿ, ತಮ್ಮ ತಮ್ಮ ಮನೆಗಳ ನೆರಳಿನಲ್ಲಿ ಒಣಗಿಸಲು ತಿಳಿಸಿದ್ದರು. ಅದೇ ರೀತಿ ಇಂದು ಆಣೂರು ಗ್ರಾಮದ ಭರಮದೇವರ ಗುಡ್ಡದಲ್ಲಿ ಶಾಲೆಯ ಮಕ್ಕಳಿಂದ ತಯಾರಿಸಿದ ಬೀಜದುಂಡೆಗಳನ್ನು ಎಸೆಯ ಲಾಯಿತು. ಹೀಗೆ ಎಸೆದ ಬೀಜಗಳು ಮುಂದಿನ ದಿನಗಳಲ್ಲಿ ಮೊಳಕೆಯೊಡೆದು ಗಿಡಗಳಾಗಿ ಪರಿವರ್ತನೆಗೊಳ್ಳುತ್ತವೆ ಎಂದು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನೀಡ್ಸ್ ಸಂಸ್ಥೆಯ ಸಿ.ಇ.ಓ ಎಚ್. ಎಫ್ ಅಕ್ಕಿ ಮಾತನಾಡಿ, ಜೈವಿಕ ಇಂಧನ ಭವಿಷ್ಯದ ಇಂಧನವಾಗಿದ್ದು, ನಾವು ಬಳಸುತ್ತಿರುವ ಪೆಟ್ರೋಲ್, ಡೀಸೆಲ್ ಮುಗಿದುಹೋಗುವ ಸಂಪನ್ಮೂಲವಾಗಿದ್ದು, ಇದರ ಬಳಕೆಯಿಂದಾಗಿ ಜಾಗತಿಕ ತಾಪಮಾನ ಹೆಚ್ಚುತ್ತಿದ್ದು, ಮನುಕುಲ ಹಾಗೂ ಜೀವರಾಶಿಗಳ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತಿದೆ. ಆದ್ದರಿಂದ ಹಸಿರು ಇಂಧನ ಅಥವಾ ಜೈವಿಕ ಇಂಧನ ಅನಿವಾರ್ಯವಾಗಿದೆ. ಈ ಜೈವಿಕ ಇಂಧನ ಸಂಪನ್ಮೂಲಗೊಳಿಸಲು ಪ್ರತಿಯೊಬ್ಬ ನಾಗರಿಕರು ಜೈವಿಕ ಇಂಧನ ಗಿಡಗಳಾದ ಹೊಂಗೆ, ಬೇವು, ನಾಗಸಂಪಿಗೆ, ಸೀಮರೂಬಾ ಹಾಗೂ ಇತರೆ ಗಿಡಗಳನ್ನು ನೆಡುವುದರೊಂದಿಗೆ ಪಾಲನೆ, ಪೋಷಣೆಯನ್ನು ಮಾಡಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾಮಾಜಿಕ ಅರಣ್ಯ ಇಲಾಖೆಯ ಅರಣ್ಯಾಧಿಕಾರಿಗಳಾದ ಚಮನ್‍ಸಾಬ ಎಂ. ಬಿಲ್ಲಳ್ಳಿ, ಜಗದೀಶ್ ದ್ಯುಟರ್ ಹಾಗೂ ಇಲಾಖಾ ಸಿಬ್ಬಂದಿ ವರ್ಗ, ಸುಜಲಾನ್ ಫೌಂಡೇಶನ್ ಇಂಜಿನಿಯರ್ ಚಿರಂಜೀವಿ, ಸತ್ಯೇಂದ್ರ, ಮಂಜುನಾಥ, ಸಲೀಮ್, ನೀಡ್ಸ್ ಸಂಸ್ಥೆಯ ಜಿಲ್ಲಾ ಸಂಯೋಜಕ ತಿಪ್ಪೇಶಪ್ಪ ಕನ್ನಮ್ಮನವರ್, ಜೈವಿಕ ಇಂಧನ ಯೋಜನಾ ಸಹಾಯಕಿ ಪ್ರಿಯಾಂಕ ಹಾಗೂ ಇತರರು ಭಾಗವಹಿಸಿದ್ದರು.