ವಿದ್ಯೆಯನ್ನು ಪಡೆದರೆ ಭವಿಷ್ಯದಲ್ಲಿ ಅತ್ಯುತ್ತಮ ಜೀವನ ಸಾಧ್ಯ : ಗುರುಬಸವ ಸ್ವಾಮೀಜಿ

ವಿದ್ಯೆಯನ್ನು ಪಡೆದರೆ ಭವಿಷ್ಯದಲ್ಲಿ ಅತ್ಯುತ್ತಮ ಜೀವನ ಸಾಧ್ಯ : ಗುರುಬಸವ ಸ್ವಾಮೀಜಿ

ವಿಶ್ವ ವೀರಶೈವ ಲಿಂಗಾಯತ ಏಕೀಕರಣ ಪರಿಷತ್ತಿನಿಂದ ಪ್ರತಿಭಾ ಪುರಸ್ಕಾರ

ದಾವಣಗೆರೆ, ಜೂ. 16- ಜೀವನದಲ್ಲಿ ವಿದ್ಯಾರ್ಜನೆ ಪಡೆಯುವುದು ಅತಿ ಪ್ರಮುಖವಾಗಿದ್ದು, ವಿದ್ಯೆಯನ್ನು ಪಡೆದಲ್ಲಿ ಭವಿಷ್ಯದಲ್ಲಿ ಅತ್ಯುತ್ತಮ ಜೀವನ ನಿರ್ವಹಿಸಬಹುದು ಎಂದು ಕಮ್ಮತ್ತಹಳ್ಳಿ ವಿರಕ್ತಮಠ-ಪಾಂಡೋಮಟ್ಟಿಯ ಶ್ರೀ ಡಾ. ಗುರುಬಸವ ಸ್ವಾಮೀಜಿ ಪ್ರತಿಪಾದಿಸಿದರು.

ವಿಶ್ವ ವೀರಶೈವ ಲಿಂಗಾಯತ ಏಕೀಕರಣ ಪರಿಷತ್ ಮತ್ತು ವಿಶ್ವ ಕಲ್ಯಾಣ ಪರಿಸರ ಗ್ರಾಹಕ ಸಾಂಸ್ಕೃತಿಕ ಪರಿಷತ್ ಇವರ ಜಂಟಿ ಆಶ್ರಯದಲ್ಲಿ ನಗರದ ಗುರುಭವನದಲ್ಲಿ ನಿನ್ನೆ ಏರ್ಪಾಡಾಗಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ವಿದ್ಯಾರ್ಥಿ ಜೀವನ ಅಮೂಲ್ಯವಾದ ಅವಕಾಶ. ಈ ಅವಕಾಶವನ್ನು ಸದುಪಯೋ ಗಪಡಿಸಿಕೊಳ್ಳುವ ನಿಟ್ಟಿನಲ್ಲಿ ಏಕಾಗ್ರತೆಗೆ ಆದ್ಯತೆ ನೀಡಬೇಕು. ಚಂಚಲವಾದ ಮನಸ್ಸನ್ನು ಏಕಾಗ್ರತೆಯಲ್ಲಿ ತಂದುಕೊಂಡು ವಿದ್ಯಾಭ್ಯಾಸ ಮಾಡಿದಲ್ಲಿ ಜೀವನದ ಚಿತ್ರಣ ವನ್ನೇ ಬದಲಾಯಿಸಬಹುದು ಎಂದು ಶ್ರೀಗಳು ಉದಾಹರಣೆಯೊಂದಿಗೆ ವಿದ್ಯಾ ರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.

ಕೇವಲ ಅಂಕ ಗಳಿಕೆಯೇ ಸಾಧನೆ ಯಲ್ಲ. ಅಂಕಗಳಿಂದ ಸಾಧನೆ ಮಾಡದ ಹಲವರು ಭವ್ಯ ಭವಿಷ್ಯದ ಸಾಧಕರಾಗಿ ದ್ದಾರೆ. ಈ ಹಿನ್ನೆಲೆಯಲ್ಲಿ ಅಂಕ ಗಳಿಕೆಯ ಸಾಧನೆ ಮೀರಿದ ಜೀವನವಿದೆ ಎಂಬುದನ್ನು ಅರಿತುಕೊಂಡು ಜೀವನ ಸಾಗಿಸಬೇಕು ಎಂದು ಶ್ರೀಗಳು ಹಿತ ನುಡಿದರು.

ನೂರಕ್ಕೆ ನೂರು ಅಂಕಗಳನ್ನು ಪಡೆದ ಎಲ್ಲಾ ವಿದ್ಯಾರ್ಥಿಗಳೂ ಸಾಧಕರಲ್ಲ. ಅದಕ್ಕಿಂತ ಕಡಿಮೆ ಅಂಕ ಪಡೆದ ಎಷ್ಟೋ ವಿದ್ಯಾರ್ಥಿಗಳೂ ಸಾಧಕರಾಗಿದ್ದಾರೆ. ಈ ನಿಟ್ಟಿನಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಗಳಿಗೆ ಕಡಿಮೆ ಅಂಕ ಪಡೆದ ತಮ್ಮನ್ನು ಹೋಲಿಕೆ ಮಾಡಿಕೊಂಡು ಜಿಗುಪ್ಸೆ ಹೊಂದದೆ ಆಶಾಭಾವನೆ ಹೊಂದಿ ಮುನ್ನಡೆ ಯಬೇಕು ಎಂದು ಶ್ರೀಗಳು ಕರೆ ನೀಡಿದರು.

ಛಲ ಹೊಂದಬೇಕು : ಜೀವನದಲ್ಲಿ ಗುರಿ ಮುಖ್ಯ. ಯಾವುದೇ ಅಡೆ-ತಡೆಗಳು ಬಂದರೂ ಛಲ ಬಿಡದೇ ವಿದ್ಯಾಭ್ಯಾಸ ಮಾಡಿದಾಗ ಸಾಧನೆ ಮಾಡಲು ಸಾಧ್ಯ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶರಾದ ಅರಳಿ ನಾಗರಾಜ್ ಗಂಗಾವತಿ ಅವರು ಅಭಿಪ್ರಾಯಪಟ್ಟರು.

ಸಮಾರಂಭವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ದೃಢ ಚಿತ್ತ – ಶ್ರದ್ಧೆ-ಸತತ ಪರಿಶ್ರಮದಿಂದ ಸಾಧನೆ ಮಾಡಬಹುದು ಎಂದು ಹಲವಾರು ಸಾಧಕರ ಸಾಧನೆಯನ್ನು ಮುಂದಿಟ್ಟು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ಗುರಿ ಮುಖ್ಯವಾಗಿರಲಿ : ಜೀವನದಲ್ಲಿ ಗುರಿಯನ್ನು ಮುಖ್ಯವಾಗಿಟ್ಟುಕೊಂಡಲ್ಲಿ ಎಂತಹ ಸಮಸ್ಯೆಗಳನ್ನಾದರೂ ಎದುರಿಸಲು ಸಾಧ್ಯ ಎಂದು ವಿಶ್ವ ವೀರಶೈವ ಲಿಂಗಾಯತ ಏಕೀಕರಣ ಪರಿಷತ್ ಅಧ್ಯಕ್ಷರೂ, ಹಿರಿಯ ನ್ಯಾಯವಾದಿಗಳೂ ಆದ ರೇವಣ್ಣ ಬಳ್ಳಾರಿ ಪ್ರತಿಪಾದಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಮ್ಮ ಜೀವನದಲ್ಲಿ ಅನುಭವಿಸಿದ ಹಲವಾರು ಸಮಸ್ಯೆಗಳು ಮತ್ತು ಆ ಸಮಸ್ಯೆಗಳನ್ನು ಎದುರಿಸಿ ಮಾಡಿದ ಸಾಧನೆಗಳನ್ನು ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗೆ ಹಂಚಿಕೊಂಡ ರಲ್ಲದೇ, ಪ್ರತಿಯೊಬ್ಬರೂ ಸಾಧಕರಾಗ ಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಇ.ಎಂ. ಮಂಜುನಾಥ, ಮಲೇಬೆನ್ನೂರಿನ ದರ್ಶನ್ ಟ್ರೇಡರ್ಸ್ ರೈಸ್ ಮಿಲ್ ಮಾಲೀಕ ಹೆಚ್.ಎಸ್. ರುದ್ರಯ್ಯ, ವಿಶ್ವ ವೀರಶೈವ ಲಿಂಗಾಯತ ಏಕೀಕರಣ ಪರಿಷತ್ ಕಾರ್ಯಾಧ್ಯಕ್ಷ ಇಂದೂಧರ ನಿಶಾನಿಮಠ, ಉಪಾಧ್ಯಕ್ಷ ಬಸವರಾಜ ಸಿರಿಗೆರೆ ಅವರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಜಾಗತಿಕ ಲಿಂಗಾಯತ ಮಹಾಸಭಾದ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಶ್ರೀಮತಿ ಕುಸುಮಾ ಲೋಕೇಶ್ ಮತ್ತು ಪ್ರೌಢಶಾಲೆಯ ವಿಶ್ರಾಂತ ಮುಖ್ಯೋ ಪಾಧ್ಯಾಯಿನಿ ಶ್ರೀಮತಿ ಜಿ.ಕೆ. ಶಕುಂತಲಾ ಅವರುಗಳು ವಿವಿಧ ವಿಷಯಗಳ ಕುರಿತಂತೆ ಉಪನ್ಯಾಸ ನೀಡಿದರು.

ಇದೇ ಸಂದರ್ಭದಲ್ಲಿ ಶ್ರೀ ಗುರು ರೇಣುಕರ ಯುಗಮಾನೋತ್ಸವ ಮತ್ತು 891ನೇ ಶ್ರೀ ಬಸವೇಶ್ವರ ಜಯಂತ್ಯೋತ್ಸವವನ್ನು ಆಚರಿಸಲಾಯಿತು. ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯ ಸರ್ವಧರ್ಮದ 150 ಹೆಚ್ಚು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ವೈದ್ಯ ಡಾ. ಟಿ.ಎಂ. ರವೀಂದ್ರಕುಮಾರ್, ಏಕದಂತ ಎಂಟರ್‌ಪ್ರೈಸಸ್ ಮಾಲೀಕ ಹೆಚ್.ಎಸ್. ಶಿವಕುಮಾರ್, ಪೌರ ಕಾರ್ಮಿಕರಾದ ಎನ್. ರಾಜು, ಹೊನ್ನಾಳಿಯ ಹಿರಿಯ ಸಾಹಿತಿ ಎಸ್.ಎನ್. ಸಂಗನಾಳ್‌ಮಠ, ಮೈಸೂರಿನ ನಟ ವಿಶಾರದ ಸಾಹಿತಿ ಎನ್.ವಿ. ರಮೇಶ್, ಮೈಸೂರಿನ ಬೇರ್ಯ ರಾಮಕುಮಾರ್ ಅವರುಗಳಿಗೆ ಕಾಯಕ ಯೋಗಿ ಬಸವಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಹಿರಿಯ ಶಿಕ್ಷಕರೂ ಆಗಿರುವ ಸಾಹಿತಿ ಶ್ರೀಮತಿ ಸಂಧ್ಯಾ ಸುರೇಶ್, ಶಿಕ್ಷಕಿ ಶ್ರೀಮತಿ ಮಾಹಿನೂರು ಖಾನಂ, ಬಾಪೂಜಿ ಆಸ್ಪತ್ರೆಯ ಹಿರಿಯ ಶುಶ್ರೂಷಕಿ ಶ್ರೀಮತಿ ರೂಪಾ ಬಸವರಾಜ್ ಮಾತೂರ್, ಪೌರ ಕಾರ್ಮಿಕರಾದ ಶ್ರೀಮತಿ ಎನ್. ಹನುಮಕ್ಕ ಅವರುಗಳಿಗೆ ಕಾಯಕಯೋಗಿ ಶರಣೆ ಪ್ರಶಸ್ತಿ ನೀಡಿ ಗೌರವ ಸಲ್ಲಿಸಲಾಯಿತು.

ಸಾಹಿತಿ ಶ್ರೀಮತಿ ಉಮಾದೇವಿ ಮತ್ತು ವಚನ ಗಾಯಕ ಸಂಗಪ್ಪ ತೋಟದ್ ಅವರ ಪ್ರಾರ್ಥನೆ ನಂತರ ವಿಶ್ವ ವೀರಶೈವ ಲಿಂಗಾಯತ ಏಕೀಕರಣ ಪರಿಷತ್ ಮಹಿಳಾ ಘಟಕದ ಅಧ್ಯಕ್ಷರೂ ಆಗಿರುವ ಪತ್ರಕರ್ತೆ ಶ್ರೀಮತಿ ಎ.ಬಿ. ರುದ್ರಮ್ಮ ಸ್ವಾಗತಿಸಿದರು. ವಿಶ್ವ ವೀರಶೈವ ಲಿಂಗಾಯತ ಏಕೀಕರಣ ಪರಿಷತ್ ಕಾರ್ಯದರ್ಶಿ ಶಿವಕುಮಾರ್ ಶೆಟ್ಟರ್ ಅವರಿಂದ ಪ್ರಾಸ್ತಾವಿಕ ಭಾಷಣ, ಸಂಘಟನಾ ಕಾರ್ಯದರ್ಶಿ ಶ್ರೀಮತಿ ಸುಜಾತ ಬೂಸ್ನೂರ್ ಅವರಿಂದ ವಂದನಾರ್ಪಣೆ, ಹಿರಿಯ ಸಾಹಿತಿ ಎನ್.ಜೆ. ಶಿವಕುಮಾರ್ ಅವರಿಂದ ಕಾರ್ಯಕ್ರಮ ನಿರೂಪಣೆ ನಡೆಯಿತು.

ಚಿತ್ರದುರ್ಗ ಜಿಲ್ಲಾ ಬಣಜಿಗ ಸಮಾಜದ ಅಧ್ಯಕ್ಷ ಬಿ.ಆರ್. ಬಸವರಾಜ್ (ಭರಮಸಾಗರ) ಮತ್ತು ಮಲೇಬೆನ್ನೂರಿನ ದರ್ಶನ್ ಟ್ರೇಡರ್ಸ್ ರೈಸ್‌ಮಿಲ್ ಮಾಲೀಕ ಹೆಚ್.ಎಸ್. ವೀರಭದ್ರಯ್ಯ ಅವರುಗಳು ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿದ್ದರು.

error: Content is protected !!