ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ಗೃಹರಕ್ಷಕರ ಪಾತ್ರ ದೊಡ್ಡದು

ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ಗೃಹರಕ್ಷಕರ ಪಾತ್ರ ದೊಡ್ಡದು

ಗೃಹರಕ್ಷಕ ದಳದ ಪರಿಸರ ದಿನಾಚರಣೆಯಲ್ಲಿ ಉಪನ್ಯಾಸಕ ಹೆಚ್.ಮಲ್ಲಿಕಾರ್ಜುನ್‌ 

ಹರಪನಹಳ್ಳಿ, ಜೂ.16-  ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ಗೃಹರಕ್ಷಕ ದಳದ ಪಾತ್ರ ಮುಖ್ಯವಾಗಿದೆ. ಕಾನೂನು ರಕ್ಷಣೆಯ ಜೊತೆಗೆ ಪರಿಸರ ಸಂರಕ್ಷಣೆಯ ಹೊಣೆ ಹೊತ್ತಿರುವುದು ಅತ್ಯಂತ ಶ್ಲ್ಯಾಘನೀಯ ಎಂದು ಎಸ್.ಯು.ಜೆ.ಎಂ. ಕಾಲೇಜಿನ ಕನ್ನಡ ಉಪನ್ಯಾಸಕ ಹೆಚ್.ಮಲ್ಲಿಕಾರ್ಜುನ್‌ ಅಭಿಪ್ರಾಯಪಟ್ಟರು.  

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಗೃಹರಕ್ಷಕ ದಳದ ವತಿಯಿಂದ ಏರ್ಪಡಿಸಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಸಸಿಗಳನ್ನು ನೆಡುವುದರ ಮೂಲಕ   ಉದ್ಘಾಟಿಸಿ ಅವರು  ಮಾತನಾಡಿದರು.

ಪರಿಸರ ಸಂರಕ್ಷಣೆಯಲ್ಲಿ ಯುವ ಕರ ಪಾತ್ರ ಮುಖ್ಯವಾಗಿದೆ.   ಯುವಕರು ಗೃಹರಕ್ಷಕ ದಳ ಸೇರಲು ಮುಂದೆ ಬರಬೇಕು. ಗೃಹರಕ್ಷಕ ದಳದ ಸಿಬ್ಬಂದಿ ಸಣ್ಣ ಪುಟ್ಟ ಕಾಯಕದ ಜೊತೆಗೆ ಕಾನೂನು ರಕ್ಷಣೆ, ದೇಶ ರಕ್ಷಣೆ ಮಾಡುವುದು, ಜೊತೆಗೆ ಪರಿಸರ ಸಂರಕ್ಷಣೆ ಮಾಡುತ್ತಿರುವುದು ತುಂಬಾ ಸಂತೋಷದಾಯಕ ವಿಚಾರ ಎಂದರು. 

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶಿಕ್ಷಕ ಬಿ.ಜಯ ಮಾಲತೇಶ ಮಾತನಾಡಿ, ಗೃಹರಕ್ಷಕ ದಳದ ಸೇವೆ ದೊಡ್ಡದು, ಅವರು ಆರ್ಥಿಕವಾಗಿ, ಸಾಮಾಜಿಕವಾಗಿ ಬಲಿಷ್ಠರಾಗಬೇಕು ಮತ್ತು ದುರಭ್ಯಾಸಗಳಿದ್ದಲ್ಲಿ ಬದಲಾಯಿಸಿಕೊಳ್ಳಬೇಕು ಎಂದರು. 

ಜಿಲ್ಲಾ ಗೃಹರಕ್ಷಕ ದಳದ ಬೋಧಕ ಪ್ರಶಾಂತ ಪಾಟೀಲ್ ಮಾತನಾಡಿ, ವಾತಾವರಣದಲ್ಲಿ ತಾಪಮಾನ ಹೆಚ್ಚಾಗುತ್ತಿದ್ದು, ಹೀಗೆಯೇ ಮುಂದುವರೆದರೆ ಮುಂದಿನ ದಿನಗಳು ಕಷ್ಟಕರವಾಗಲಿವೆ. ಆದುದರಿಂದ ಪರಿಸರ ಸಂರಕ್ಷಿಸಲು  ಗಿಡ ಬೆಳೆಸುವುದರ ಜೊತೆಗೆ ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ನಿಲ್ಲಿಸಬೇಕು  ಎಂದರು. 

ಇದೇ ಸಂದರ್ಭದಲ್ಲಿ ಉಪನ್ಯಾಸಕ ಹೆಚ್.ಮಲ್ಲಿಕಾರ್ಜುನ, ವಿಜಯನಗರ ಜಿಲ್ಲಾ ಗೃಹ ರಕ್ಷಕದಳದ ಬೋಧಕ ಪ್ರಶಾಂತ ಪಾಟೀಲ್ ಮತ್ತು ಶಿಕ್ಷಕ ಬಿ.ಜಯಮಾಲತೇಶ ಇವರನ್ನು ಸನ್ಮಾನಿಸಲಾಯಿತು.  ಕಾರ್ಯಕ್ರಮದಲ್ಲಿ ವಾಗೀಶ್ ಪೂಜಾರ್, ಘಟಕಾಧಿಕಾರಿಗಳಾದ ಎಸ್.ಎಂ. ಮಲ್ಲಿಕಾರ್ಜುನಯ್ಯ, ಹಿರಿಯ ಅಧಿಕಾರಿಗಳಾದ ಪೂಜಾರ್ ವಾಗೀಶ್,  ಎಂ.ಮಾಲತೇಶ, ಶಾನುಬೋಗರ ಹಾಲಸ್ವಾಮಿ, ಕೆ.ಸುಭಾಷ್, ಹೆಚ್.ಬಸವರಾಜ, ಹೆಚ್.ರಾಜಪ್ಪ, ಜಿ.ರಾಮಚಂದ್ರಪ್ಪ, ಕೆ.ಕೋಟೆಪ್ಪ, ಕ್ರೀಡಾಂಗಣದ ಸಿಬ್ಬಂದಿ ಮಂಜುನಾಥ ಮುಂತಾದವರು ಇದ್ದರು.

error: Content is protected !!