`ಸ್ವರಾಭರಣ’ ಕಾರ್ಯಕ್ರಮದಲ್ಲಿ ಹಿರಿಯ ಕವಿ ಬಿ.ಆರ್. ಲಕ್ಷ್ಮಣರಾವ್ ಕಳವಳ
ದಾವಣಗೆರೆ, ಜೂ. 16-ವಾಣಿಜ್ಯ ಮತ್ತು ರಾಜಕೀಯ ನಗರಿಯಾಗಿರುವ ದಾವಣಗೆರೆಯಲ್ಲಿ ಇತ್ತೀಚಿನ ದಿನಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಕ್ಷೀಣಿಸುತ್ತಿವೆ ಎಂದು ನಾಡಿನ ಹಿರಿಯ ಕವಿ ಬಿ.ಆರ್. ಲಕ್ಷ್ಮಣರಾವ್ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ವಿನ್ನರ್ಸ್ ಅಕಾಡೆಮಿ ಸಭಾಂಗ ಣದಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ (ಬೆಂಗಳೂರು), ಅನುಶ್ರೀ ಸಂಗೀತ ಶಾಲೆ, ಕಲಾ ಕುಂಚ ಸಂಸ್ಥೆ (ದಾವಣಗೆರೆ) ಇವರ ಸಂಯುಕ್ತಾ ಶ್ರಯದಲ್ಲಿ ನಿನ್ನೆ ಹಮ್ಮಿಕೊಂಡಿದ್ದ `ಸ್ವರಾಭರಣ’ ಸ್ಥಳೀಯ ಕವಿಗಳ ಪದ್ಯ ಗಾಯನ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಹಿತ್ಯ, ಸಂಗೀತ ಸೇರಿದಂತೆ ಸಾಂಸ್ಕೃತಿಕ ಚಟುವಟಿಕೆಗಳು ಕಡಿಮೆಯಾಗುತ್ತಿದ್ದು, ಮಕ್ಕಳಿಗೆ ಚಿಕ್ಕಂದಿನಿಂದಲೇ ಕನ್ನಡಾಭಿಮಾನದ ಜೊತೆಗೆ ಸಾಹಿತ್ಯ, ಸಂಗೀತ, ಕಲೆ ಬಗ್ಗೆ ಆಸಕ್ತಿ ಮೂಡಿಸುವ ಅಗತ್ಯವಿದೆ ಎಂದರು.
ನಾನು ಸಾಹಿತ್ಯ ಕ್ಷೇತ್ರಕ್ಕೆ ಪಾದರ್ಪಣೆ ಮಾಡಲು ದಾವಣಗೆರೆ ಕಾರಣ. ನನಗೆ ಪ್ರಿಯವಾದ ಜಾಗ ಕೂಡ ಹೌದು. ಇಂತಹ ನಗರದಲ್ಲಿ ಕಲಾಕುಂಚದಂತಹ ಸಂಸ್ಥೆಗಳು ಸಾಹಿತ್ಯ, ಸಂಗೀತ, ಕಲೆ ಮುಂತಾದ ಸಾಂಸ್ಕೃತಿಕ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದು ಶ್ಲ್ಯಾಘನೀಯ ಎಂದು ಹೇಳಿದರು.
ಶಾಸ್ತ್ರೀಯ ಸಂಗೀತದ ತಳಹದಿಯ ಮೇಲೆ ಸುಗಮ ಸಂಗೀತ ಬಂದಿರುವಂತಹದ್ದು, ಅನುಶ್ರೀ ಸಂಗೀತ ಶಾಲೆ ಶಾಸ್ತ್ರೋಕ್ತವಾಗಿ ಸಂಗೀತವನ್ನು ಕಲಿಸುತ್ತಿರುವುದು ಸಂತೋಷದ ಸಂಗತಿ ಎಂದರು.
ಇದೇ ಸಂದರ್ಭದಲ್ಲಿ ಇತ್ತೀಚಿಗೆ ನಿಧನರಾದ ಜಾನಪದ ವಿದ್ವಾಂಸ ಡಾ.ಎಂ.ಜಿ. ಈಶ್ವರಪ್ಪ ಅವರು ಸಾಹಿತ್ಯ, ಸಂಗೀತ, ಕಲಾ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಲಕ್ಷ್ಮಣರಾವ್ ಸ್ಮರಿಸಿಕೊಂಡರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ನಾಡಿನ ಹಿರಿಯ ಚುಟುಕು ಕವಿ ಹೆಚ್.ಡುಂಡಿರಾಜ್ ಮಾತನಾಡಿ, ಕುವೆಂಪು, ಬೇಂದ್ರೆ, ಜಿ.ಎಸ್. ಶಿವರುದ್ರಪ್ಪ, ನಿಸಾರ್ ಅಹಮದ್ ಮುಂತಾದ ಹೆಸರಾಂತ ಕವಿಗಳ ಪದ್ಯಗಳಿಗೆ ರಾಗ ಸಂಯೋಜನೆ ಮಾಡಿ ಹಾಡುವ ವಾಡಿಕೆ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಇದರೊಟ್ಟಿಗೆ ಹೊಸ ಹೊಸ ಕವಿಗಳು, ಹೊಸ ಹೊಸ ಪದ್ಯಗಳಿಗೆ ರಾಗ ಸಂಯೋಜನೆ ಮಾಡಿ ಪ್ರಸ್ತುತಪಡಿಸುವ ಕೆಲಸ ಆಗಬೇಕಾಗಿದೆ ಎಂದರು.
ಇದೇ ಸಂದರ್ಭದಲ್ಲಿ ತಾವೇ ರಚಿಸಿರುವ `ಹಾಲು ಮಾರುವ ಹುಡುಗಿ’ ಪ್ರಥಮ ಪದ್ಯವನ್ನು ಪ್ರಸ್ತುತ ಪಡಿಸಿದ್ದು ವಿಶೇಷವಾಗಿತ್ತು. ಇದರೊಂದಿಗೆ `ನಗದು’ ಚುಟುಕು ಕವಿತೆ ಹೇಳಿದರು.
ಮಕ್ಕಳಿಗೆ ಇಷ್ಟವಾಗಿ ಹಾಡುವಂತಹ ಹೊಸ ಕವಿತೆಗಳು ಹೆಚ್ಚು ಹೆಚ್ಚು ಮೂಡಿ ಬರಲಿ ಎಂದು ಆಶಿಸಿದರು.
ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾಧ್ಯಕ್ಷ ಸಾಲಿಗ್ರಾಮ ಗಣೇಶ್ ಶೆಣೈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅನುಶ್ರೀ ಸಂಗೀತ ಪಾಠಶಾಲೆ ಸಂಸ್ಥಾಪಕರಾದ ಶ್ರೀಮತಿ ವೀಣಾ ಸದಾನಂದ ಹೆಗಡೆ, ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷೆ ಹೇಮಾ ಶಾಂತಪ್ಪ ಪೂಜಾರಿ, ವಿನ್ನರ್ಸ್ ಅಕಾಡೆಮಿ ಅಧ್ಯಕ್ಷ ಶಿವರಾಜ್ ಕಬ್ಬೂರು, ಕವಿ ಬಿ.ಎನ್. ಮಲ್ಲೇಶ್, ಕವಯತ್ರಿ ಶ್ರೀಮತಿ ಹೆಚ್.ಕೆ. ಸತ್ಯಭಾಮ ಮಂಜುನಾಥ್, ಹಿರಿಯ ಪತ್ರಕರ್ತ ಸದಾನಂದ ಹೆಗಡೆ, ಉಮೇಶ್ ಸೇರಿದಂತೆ ಅನೇಕರಿದ್ದರು.