ಸಂಸದೆ ಪ್ರಿಯಾಂಕ ಜಾರಕಿಹೊಳಿ
ದಾವಣಗೆರೆ, ಜೂ. 14- ಚಳಿಗಾಲದ ವಿಧಾನ ಮಂಡಲ ಅಧಿವೇಶನ ಸಂದರ್ಭದಲ್ಲಿ ಮಾತ್ರ ಎಲ್ಲಾ ಜನ ಪ್ರತಿನಿಧಿಗಳಿಗೆ ಉತ್ತರ ಕರ್ನಾಟಕ ನೆನಪಾಗುತ್ತದೆ. ಅದರಾಚೆಗೂ ಈ ಭಾಗದ ಅಭಿವೃದ್ಧಿಗೆ ಜನಪ್ರತಿನಿಧಿಗಳು ಗಮನ ಹರಿಸಬೇಕಾದ ಅಗತ್ಯವಿದೆ ಎಂದು ಚಿಕ್ಕೋಡಿ ಸಂಸದೆ ಪ್ರಿಯಾಂಕ ಸತೀಶ್ ಜಾರಕಿಹೊಳಿ ಹೇಳಿದರು.
ನಗರದಲ್ಲಿ ನಾಯಕ ವಿದ್ಯಾರ್ಥಿ ನಿಲಯದಲ್ಲಿ ಸಮಾಜದ ವತಿಯಿಂದ ನಿನ್ನೆ ತಮಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಉತ್ತರ ಕರ್ನಾಟಕ ಭಾಗದಲ್ಲಿ ನಿರುದ್ಯೋಗ, ಕೈಗಾರಿಕೆ ಸ್ಥಾಪನೆ ಒಳಗೊಂಡಂತೆ ಸಾಕಷ್ಟು ಸಮಸ್ಯೆ ಇದೆ. ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಕುರಿತು ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗುವುದು. ವರ್ಷಕ್ಕೊಮ್ಮೆ ಸುವರ್ಣ ಸೌಧದಲ್ಲಿ ಅಧಿವೇಶನ ಮಾಡಿದರೆ ಸಾಲುವುದಿಲ್ಲ. ಪ್ರವಾಹ, ಬರಗಾಲದ ಸಂದರ್ಭದಲ್ಲಿ ಎಲ್ಲಾ ಜನಪ್ರತಿನಿಧಿಗಳು ಈ ಭಾಗದ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಅವರು ಒತ್ತಾಯಿಸಿದರು.
ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕದ ಜನರ ಎಲ್ಲಾ ಸಮಸ್ಯೆಗಳಿಗೆ ಜನಪ್ರತಿನಿಧಿಗಳು ಸ್ಪಂದಿಸುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಈ ಭಾಗದ ಯುವಜನರಿಗೆ ಉದ್ಯೋಗ ನೀಡುವುದು, ಬೃಹತ್ ಕೈಗಾರಿಕೆಗಳ ಸ್ಥಾಪನೆ, ಜನರಿಗೆ ಶುದ್ಧ ಕುಡಿಯುನ ನೀರು ಪೂರೈಕೆಯಂತಹ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಶಸ್ತ್ಯ ನೀಡಲಾಗುವುದು ಎಂದರು.
ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಮನ ಹರಿಸುತ್ತಾರೆ. ಸಮಸ್ಯೆಇವೆ ಎಂದ ಮಾತ್ರಕ್ಕೆ ಪ್ರತ್ಯೇಕ ರಾಜ್ಯದ ಪ್ರಸ್ತಾಪ ಇಲ್ಲ ಎಂದು ಪ್ರಿಯಾಂಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಈ ಸಂದರ್ಭದಲ್ಲಿ ರಾಹುಲ್ ಜಾರಕಿಹೊಳಿ, ಪಾಲಿಕೆ ಮೇಯರ್ ಬಿ.ಹೆಚ್. ವಿನಾಯಕ ಪೈಲ್ವಾನ್, ಸವಿತಾ ಗಣೇಶ್ ಹುಲ್ಮನೆ, ಮೀನಾಕ್ಷಿ, ಜಗದೀಶ್, ನಾಯಕ ಸಮಾಜದ ಮುಖಂಡರುಗಳಾದ ಬಿ. ವೀರಣ್ಣ, ಹದಡಿ ಹಾಲಪ್ಪ, ಶ್ರೀನಿವಾಸ್ ದಾಸಕರಿಯಪ್ಪ, ಹೊದಿಗೆರೆ ರಮೇಶ್ ಇತರರು ಇದ್ದರು.