ಹರಪನಹಳ್ಳಿ, ಜೂ.14- ನರೇಂದ್ರ ಮೋದಿ ಅವರು ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ, ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಲಿ ಎಂದು ಹರಕೆ ಹೊತ್ತಿದ್ದ ತಾಲ್ಲೂಕಿನ ಹಿರೇಮೇಗಳಗೆರೆ ಗ್ರಾಮದ ಅಭಿಮಾನಿಯೊಬ್ಬ ಶುಕ್ರವಾರ ಉಚ್ಚಂಗಿದುರ್ಗದ ಉಚ್ಚಂಗೆಮ್ಮ ದೇವಸ್ಥಾನದವರೆಗೆ 12 ಕಿ.ಮೀ ದೀಡು ನಮಸ್ಕಾರ ಹಾಕಿ ಹರಕೆ ತೀರಿಸಿದರು.
ಹಿರೇಮೇಗಳಗೆರೆ ಗ್ರಾಮದ ಜಿ.ಡಿ ಮಲ್ಲೇಶಪ್ಪ ಅವರು ಸ್ವಗ್ರಾಮದಿಂದ ಬೇವಿನಹಳ್ಳಿ ತಾಂಡಾ, ಯು.ಬೇವಿನಹಳ್ಳಿ ಗ್ರಾಮದ ಮೂಲಕ ಉಚ್ಚಂಗಿದುರ್ಗದ ಉಚ್ಚಂಗೆಮ್ಮ ಪಾದಗಟ್ಟೆ ದೇವಸ್ಥಾನದ ವರೆಗೆ 12 ಕಿ.ಮೀ ದೀಡು ನಮಸ್ಕಾರ ಹಾಕಿ ಎಲ್ಲರನ್ನೂ ಆಕರ್ಷಿಸಿದರು. ಗ್ರಾಮಸ್ಥರೊಂದಿಗೆ ಬೆಳಗ್ಗೆ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ನಂತರ ದೇವಸ್ಥಾನವು ಪ್ರಧಾನಿ ಮೋದಿ ಅವರ ಜೈಕಾರದಲ್ಲಿ ಮೊಳಗಿತ್ತು.
ಈ ವೇಳೆ ಮಾತನಾಡಿದ ಜಿ.ಡಿ. ಮಲ್ಲೇಶಪ್ಪ ಅವರು, ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರು ಗೆಲುವು ಸಾಧಿಸಿ, ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ ರಚನೆಯಾಗ ಬೇಕೆಂದು ಉಚ್ಚಂಗೆಮ್ಮ ದೇವಿಗೆ ಹರಕೆ ಕಟ್ಟಿಕೊಂಡಿದ್ದೆ. ಇಂದು ನನ್ನ ಬೇಡಿಕೆ ಈಡೇರಿದ ಕಾರಣ ಹರಕೆ ತೀರಿಸಿದ್ದೇನೆ ಎಂದು ತಿಳಿಸಿದರು.
ಈ ವೇಳೆ ಗ್ರಾ.ಪಂ ಸದಸ್ಯರಾದ ಅಂಗಡಿ ಪ್ರಕಾಶ, ಪೂಜಾರ ಈರಣ್ಣ, ಮುಖಂಡರಾದ ಲಕ್ಕಳ್ಳಿ ರುದ್ರಪ್ಪ, ಬಣಕಾರ ಮಲ್ಲಿಕಾರ್ಜುನ, ಕೆ. ಸೋಮಣ್ಣ, ಎಸ್. ಮಲ್ಲಿಕಾರ್ಜುನ, ತಳವಾರ ಪರಶುರಾಮ, ಶಿಂಗ್ರಿಹಳ್ಳಿ ಸಿದ್ದೇಶ, ಗುಂಡಗತ್ತಿ ಮಲ್ಲೇಶಪ್ಪ, ಮುನಿಯಪ್ಪ, ಮಂಜುನಾಥ್ ಸೇರಿದಂತೆ, ಇತರರು ಇದ್ದರು.