ಹೆಚ್. ಮಲ್ಲಿಕಾರ್ಜುನ ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಶ್ರೀ ಮಳೆ ಯೋಗೀಶ್ವರ ಸ್ವಾಮೀಜಿ
ಹರಪನಹಳ್ಳಿ,ಜೂ.12- ಶಿಕ್ಷಕ ವೃತ್ತಿ ಪವಿತ್ರ ವೃತ್ತಿಯಾಗಿದ್ದು, ಸಮಾಜ ತಿದ್ದುವಲ್ಲಿ ಶಿಕ್ಷಕರ ಪಾತ್ರ ಅಮೋಘವಾಗಿದೆ ಎಂದು ಹಿರೇಹಡಗಲಿಯ ಮಾನಿಹಳ್ಳಿ ಪುರವರ್ಗ ಮಠದ ಶ್ರೀ ಮಳೆಯೋಗೀಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಶಿಕ್ಷಣ ಮಹಾ ವಿದ್ಯಾಲಯದಲ್ಲಿ, ಶಿಕ್ಷಣ ಮಹಾವಿದ್ಯಾಲಯ, ಸಪ್ನ ಪ್ರಕಾಶನ ಮತ್ತು ನವಜ್ಯೋತಿ ಸಾಂಸ್ಕೃತಿಕ ಸೇವಾ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ, ಹೆಚ್. ಮಲ್ಲಿಕಾರ್ಜುನ ವಿರಚಿತ `ನಾನು ಗೆದ್ದೇ ಗೆಲ್ಲುತ್ತೇನೆ ಮತ್ತು ಕನ್ನಡ ನಾಡು ನುಡಿ ವೈಭವ’ ಕೃತಿಗಳ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಕೆಲವರು ಸಾಧನೆಯಿಂದ ದೊಡ್ಡವರಾದರೆ, ಕೆಲವರು ಸ್ಥಾನದಿಂದ ದೊಡ್ಡವರಾಗುತ್ತಾರೆ. ಆದರೆ ಸಾಧನೆಯಿಂದ ದೊಡ್ಡವರಾದವರ ಜೀವನ ಸಾರ್ಥಕವಾಗುತ್ತದೆ. ಮನುಷ್ಯ ಸಾಧನೆಗೆ ಪ್ರಯತ್ನ ಶೀಲರಾದರೆ ಗುರಿ ಮುಟ್ಟಲು ಸಾಧ್ಯವಾಗುತ್ತದೆ. ಬಡವ ಬಲ್ಲಿದ ಎನ್ನದೇ, ಶಿಕ್ಷಣವೆಂಬ ಸಾಗರ ದಾಟಿದರೆ ನೀವು ಜಯಶೀಲರಾಗುತ್ತೀರಿ. ಶಿಕ್ಷಣದಿಂದ ಸರ್ಕಾರಿ ನೌಕರಿ ಸಿಗಲಿ, ಸಿಗದೇ ಇರಲಿ ಯಾವುದಾದರೂ ಕಾಯಕ ಮಾಡಿ, ಕಾಯಕದಲ್ಲಿ ದೇವರನ್ನು ಕಾಣಿ ಎಂದರು.
ಅಕ್ರಮದಿಂದ ಗಳಿಸಿದ ಸಂಪತ್ತು ಶಾಶ್ವತವಲ್ಲ, ನಿಯತ್ತಿನಿಂದ ದುಡಿದ ಹಣದಿಂದ ಸುಖಮಯ ಜೀವನ ನಡೆಸಬೇಕು. ಆತ್ಮ ತೃಪ್ತಿಯಿಂದ ಜೀವನ ನಡೆಸಲು ಇದ್ದುದರಲ್ಲಿಯೇ ತೃಪ್ತಿಪಡಬೇಕು, ಜಾತಿ, ಮತ ಎನ್ನದೇ ವಿಶಾಲ ಮನೋ ಭಾವನೆಯಿಂದ ಜೀವನ ನಡೆಸಬೇಕು ಎಂದು ಅವರು ತಿಳಿಸಿದರು.
ತೆಗ್ಗಿನಮಠದ ಕಾರ್ಯದರ್ಶಿ ಡಾ.ಟಿ.ಎಂ.ಚಂದ್ರಶೇಖರ ಮಾತನಾಡಿ, ವಿದ್ಯಾರ್ಥಿಗಳು ಗುರಿ ಮತ್ತು ಸಾಧನೆಯ ಬಗ್ಗೆ, ಯೋಗ ಮತ್ತು ಆರೋಗ್ಯದ ಬಗ್ಗೆ ಈ ಪುಸ್ತಕದಲ್ಲಿ ಬರೆದಿದ್ದು, ಪುಸ್ತಕವನ್ನು ಓದಿ, ತಮ್ಮ ಜೀವನದಲ್ಲಿ ಆಳವಡಿಸಿಕೊಳ್ಳಿ ಎಂದರು.
ಕೃತಿಗಳ ಕರ್ತೃ ಉಪನ್ಯಾಸಕ ಎಚ್.ಮಲ್ಲಿಕಾರ್ಜುನ ಮಾತನಾಡಿ, ಕನ್ನಡ ಭಾಷೆಯ ಉಳಿವಿಗೆ ಮತ್ತು ಬೆಳವಣಿಗೆಗೆ ಭಾಷಾಭಿಮಾನ, ಭಾಷೆಯನ್ನು ಶ್ರೀಮಂತಗೊಳಿಸುವ, ಮುನ್ನಡೆಸುವ ಇಚ್ಚಾಶಕ್ತಿ ಬೇಕು. ಅನ್ಯಭಾಷಿಗರಿಗೆ ಕನ್ನಡ ಕಲಿಸೋಣ, ಕನ್ನಡಿಗರೆಲ್ಲರೂ ಕನ್ನಡ ಭಾಷೆಯನ್ನು ಹೆಬ್ಬಾಗಿಲಿನಂತೆ ಬಳಸಿ ಇತರೆ ಭಾಷೆಗಳನ್ನು ಗಾಳಿ ಬೆಳಕಿಗೆ ಬೇಕಾದ ಕಿಟಿಕಿಗಳಂತೆ ಉಪಯೋಗಿಸಿ ಬೇಕು ಎಂದರು.
`ಕನ್ನಡ ನಾಡು-ನುಡಿ ವೈಭವ ‘ ಪುಸ್ತಕ ಕುರಿತು ನಿವೃತ್ತ ಕನ್ನಡ ಉಪನ್ಯಾಸಕ ಎಂ.ಪಿ.ಎಂ. ಶಾಂತವೀರಯ್ಯ ಮಾತನಾಡಿದರು.
`ನಾನು ಗೆದ್ದೆ ಗೆಲ್ಲುತ್ತೇನೆ’ ಪುಸ್ತಕ ಕುರಿತು ನಿವೃತ್ತ ಶಿಕ್ಷಕ ಬಣಕಾರ ರಾಜಶೇಖರ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಡಿ.ರಾಮನಮಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಉಚ್ಚೆಂಗೆಪ್ಪ, ಮಾಜಿ ಅಧ್ಯಕ್ಷ ಮಾಡ್ಲಗೇರಿ ಸುಭದ್ರಮ್ಮ, ಕನ್ನಡ ಸಾಹಿತ್ಯ ಪರಿಷತ್ತು ತೆಲಿಗಿ ಘಟಕದ ಅಧ್ಯಕ್ಷ ಕೆ.ಎಸ್.ವೀರಭದ್ರಪ್ಪ ಮಾತನಾಡಿದರು.
ಸಪ್ನ ಪ್ರಕಾಶನ ಮತ್ತು ನವಜ್ಯೋತಿ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷೆ ಸ್ವಪ್ನ ಮಲ್ಲಿಕಾ ರ್ಜುನ್, ಸಾಹಿತಿ ಇಸ್ಮಾಯಿಲ್ ಎಲಿಗಾರ್, ಕವಿ ಕೃಷ್ಣ ದೊಡ್ಡಬಾತಿ, ಉಪನ್ಯಾಸಕ ಗಿರೀಶ ಸೇರಿದಂತೆ ಇತರರು ಇದ್ದರು.