ವಚನ ಸಾಹಿತ್ಯ ಸವೆಯಲಾರದ ಅಮೃತ

ವಚನ ಸಾಹಿತ್ಯ ಸವೆಯಲಾರದ ಅಮೃತ

ಮಾಯಕೊಂಡದ ಓಬಣ್ಣನಹಳ್ಳಿಯ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವರಾಜ ದೇವರು

ಮಾಯಕೊಂಡ, ಜೂ.3- ವಚನ ಸಾಹಿತ್ಯ ಸವೆಯದ ಅಮೃತವಾಗಿದ್ದು, ಇದರ ಅಧ್ಯಯನ ದಿಂದ ಬದುಕು ಸಮೃದ್ದವಾಗುತ್ತದೆ ಎಂದು ಖ್ಯಾತ ಬಸವ ತತ್ವ ಪ್ರಚಾರಕರಾದ ಸವದತ್ತಿ ಬಸವಾ ಶ್ರಮದ ಬಸವರಾಜ ದೇವರು ಕರೆ ನೀಡಿದರು. 

ಶರಣ ಸಾಹಿತ್ಯ ಪರಿಷತ್ತು ಮತ್ತು ಬಸವ ಕಲಾಲೋಕ ಸೋಮವಾರ ಓಬಣ್ಣನಹಳ್ಳಿಯಲ್ಲಿ ಹಮ್ಮಿಕೊಂಡ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಲಿಂಗದ ಮೂಲಕ ಸ್ವಾನುಭಾವ, ವಚನದ ಮೂಲಕ ಅನುಭಾವದ ಸಾಹಿತ್ಯ ನೀಡಿದವರು ಬಸವಣ್ಣ. ಹನ್ನೆರಡನೇ ಶತಮಾನದಿಂದ ಇಂದಿಗೂ ಪ್ರಸ್ತುತವಿರುವ ವಚನ ಸಾಹಿತ್ಯ ಸವೆಯಲಾರದ ಅಮೃತ. ಶರಣರು ಕಲ್ಯಾಣ ಕ್ರಾಂತಿಯ ವೇಳೆ ತಮ್ಮ ಮಕ್ಕಳನ್ನು ಕೈಬಿಟ್ಟು, ವಚನ ಸಾಹಿತ್ಯ ಪುಸ್ತಕ ಹೊತ್ತೊಯ್ದ ರಕ್ಷಿಸಿದರು.

ವಚನ ಸಾಹಿತ್ಯ ಸುಮಾರು 780 ವರ್ಷ ಅಜ್ಞಾತವಾಸ ಅನುಭವಿಸಿತು. ಫ. ಗು. ಹಳಕಟ್ಟಿಯವರ ಶ್ರಮದಿಂದ ವಚನ ಸಾಹಿತ್ಯ ಪುನರುತ್ಥಾನವಾಯಿತು. ಪ್ರಶ್ನಿಸುವವರಿಗಾಗಿಯೇ ಹುಟ್ಟಿದ ಏಕೈಕ ವೇದಿಕೆ ಅನುಭವ ಮಂಟಪ. ಶರಣ ಸಾಹಿತ್ಯ ಓದಿ, ಮಕ್ಕಳಿಗೆ ಕಲಿಸಿ, ಸಂಸ್ಕಾರ ನೀಡುವ ಕೆಲಸ ಮಹಿಳೆಯರಿಂದ ಸಾಧ್ಯ. ಇಂದು ಸಂಸ್ಕಾರದ ಸಂಪರ್ಕದ ಕೊಂಡಿ ಕಳಚಿದೆ. ಮರು ಬೆಸೆಯುವ ಯತ್ನ ನಡೆಯಬೇಕಿದೆ ಎಂದರು.

ಸಂಸ್ಕೃತ ಸಾಹಿತ್ಯಕ್ಕೆ ಜೋಡಿಸಿದರೆ, ವಚನ ಸಾಹಿತ್ಯ ಸುಲಿದ‌ ಬಾಳೆ ಹಣ್ಣಿನಂತೆ ಸುಲಭವಾ ದದ್ದು. ಶರಣ ಸಾಹಿತ್ಯದಲ್ಲಿ ಜೀವನಾನುಭವ, ಬದುಕಿನ ಸಾರ್ಥಕತೆಯ ಸಾರ ಹೊಂದಿದೆ. ಸುವ್ಯ ವಸ್ಥಿತ ಸಮಾಜ ನಿರ್ಮಾಣಕ್ಕಾಗಿ ಲಿಂಗಾಯತರಲ್ಲಿ ಉಪ ಪಂಗಡಗಳು ಹುಟ್ಟಿವಿಯೇ ಹೊರತು, ಬೇರೆ ಯಾವ ಉದ್ದೇಶದಿಂದಲ್ಲ. ಉಪ ಪಂಗಡಗಳ ಮಧ್ಯೆ ಭೇದ ಸಲ್ಲದು ಎಂದರು.

ದೇವರು – ಭಕ್ತರ ನಡುವೆ ಇದ್ದ ಬ್ರಾಹ್ಮಣಿಕೆ ವ್ಯವಸ್ಥೆಯಿಂದ ಆಗುತ್ತಿದ್ದ ಅನ್ಯಾಯ ತಡೆಯಲು ಇಷ್ಟಲಿಂಗದ ಕಲ್ಪನೆ ನೀಡಿದರು. ಕಾಯಕ‌ ದಾಸೋಹ ತಂದ ಜಗತ್ತಿನ ಏಕೈಕ ಪ್ರವಾದಿ ಬಸವಣ್ಣನವರು. ವಚನ ಸಾಹಿತ್ಯ ಅಧ್ಯಯನದಿಂದ ಬದುಕು ಸಮೃದ್ಧವಾಗುತ್ತದೆ.

ಲಿಂಗಾಯತರು ಬಹುವರ್ಷ ವಚನ ಸಾಹಿತ್ಯ ಅಧ್ಯಯನ ಮಾಡದೇ, ಪುಸ್ತಕ ಪೂಜೆ ಮಾಡಿದರು. 

ಇತ್ತೀಚಿನ ವರ್ಷಗಳಲ್ಲಿ ಅವು ಬಹುಪ್ರಾಮುಖ್ಯತೆ ಪಡೆದ ಅಧ್ಯಯನ ವಿಷಯವಾಗಿದೆ ಎಂದು ಬಣ್ಣಿಸಿದರು.

ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಹೊನ್ನಾ ನಾಯ್ಕನಹಳ್ಳಿ ಮುರುಗೇಶಪ್ಪ  ಬಸವಣ್ಣ ಅವ ರದು. ಕಲ್ಮಷವಿಲ್ಲದ ಜೀವನ. ಬಸವಾದಿ ಶರಣರು ವಚನ ಸಾಹಿತ್ಯ ಬರೆಯದಿದ್ದರೆ, ನಾವೆಲ್ಲಾ ಫಲವಿಲ್ಲದ ಮರವಾಗುತ್ತಿದ್ದೆವು. ಶರಣರು ನುಡಿದಂತೆ ನಡೆದು ಸಾಧನೆ ಮಾಡಿದವರು. ಬಸವಣ್ಣನ ಆದರ್ಶ ಪಾಲಿಸಿದರೆ‌ ಎಂದೂ ಕೇಡಾಗುವುದಿಲ್ಲ.‌ ಎಲ್ಲಾ ಶರಣರ ಬದುಕನ್ನು ನಾವು ಅರಿಯಬೇಕು. ಓಬಣ್ಣನಹಳ್ಳಿಯಲ್ಲಿ ಬಸವ ಮಂಟಪ ನಿರ್ಮಿಸಿರುವುದು ಅತ್ಯಂತ ಹೆಮ್ಮೆಯ ಸಂಭ್ರಮದ ಸಂಗತಿ ಎಂದರು. 

ಬಸವ ಬಳಗದ ಅಧ್ಯಕ್ಷ  ಹುಚ್ಚಪ್ಪ ಮಾಸ್ತರ್, ಬಸವ ಜಯಂತಿಯನ್ನು 1913ರಲ್ಲಿ ಹರ್ಡೇಕರ್ ಮಂಜಪ್ಪ ಆರಂಭಿಸಿದ್ದು, ಇಂದು ಹೆಮ್ಮರವಾಗಿದೆ. ಶರಣರು ಪ್ರತೀ ಮನುಷ್ಯನಲ್ಲಿ ದೇವರನ್ನು ಕಂಡವರು. ಮೂಢನಂಬಿಕೆ ಖಂಡತುಂಡವಾಗಿ ವಿರೋಧಿಸಿದವರು. ಶರಣರ ಆದರ್ಶ ಪಾಲಿಸಿ ಸಮೃದ್ದ ನಾಡು ಕಟ್ಟಬೇಕು ಎಂದರು. 

ಬಸವ ಕಲಾಲೋಕದಿಂದ ವಚನ ಗಾಯನ ನಡೆಯಿತು. ಚಿನ್ನಸಮುದ್ರ ಉಮೇಶ್ ನಾಯ್ಕ ಜಾನಪದ ಗೀತೆ ಹಾಡಿ ರಂಜಿಸಿದರು. ಓಬಣ್ಣನಹಳ್ಳಿ ಪ್ರಕಾಶ್ ನಿರೂಪಿಸಿ, ವಂದಿಸಿದರು. 

ಶರಣ ಸಾಹಿತ್ಯ ಪರಿಷತ್ತು ತಾಲ್ಲೂಕು ಅಧ್ಯಕ್ಷ ಗೋಪನಾಳ್‌ ರುದ್ರನಗೌಡ,  ಜಿಲ್ಲಾ ಘಟಕ ಅಧ್ಯಕ್ಷ ಪರಮೇಶ್ವರಪ್ಪ, ಶರಣ ಸಾಹಿತ್ಯ ಪರಿಷತ್ ನಗರ ಘಟಕದ ಅಧ್ಯಕ್ಷ ಸಿರಿಗೆರೆ ಪರಮೇಶ್ವರಪ್ಪ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷ ಆವರಗೆರೆ ರುದ್ರಮುನಿ, ರಾಜ್ಯ ಸಮಿತಿ ಸದಸ್ಯ ಮಹಾಂತೇಶ್ ಅಂಗಡಿ ಮತ್ತಿತರರಿದ್ದರು.

error: Content is protected !!