ಪೂಜೆಯ ಫಲ ಸಿಗಬೇಕಾದರೆ ನಿಷ್ಠೆ, ಪ್ರಾಮಾಣಿಕನಾಗಿರಬೇಕು

ಪೂಜೆಯ ಫಲ ಸಿಗಬೇಕಾದರೆ ನಿಷ್ಠೆ, ಪ್ರಾಮಾಣಿಕನಾಗಿರಬೇಕು

ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಸ್ವಾಮೀಜಿಗೆ ಗಣ ಪದವಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶ್ರೀಗಳ ಹಿತನುಡಿ

ಶಿವಮೊಗ್ಗ, ಜೂ. 3-  ನಿಜವಾದ ಪೂಜೆಯ ಫಲ ಸಿಗಬೇಕು ಅಂದರೆ ನಿಷ್ಠೆ ಮತ್ತು ಪ್ರಾಮಾಣಿಕನಾಗಿರಬೇಕು. ಜನರ ಸುಖವೇ ನಮ್ಮ ಸುಖ ಎಂದು ಭಾವಿಸಬೇಕು. ಸಜ್ಜನರ, ಅರಿವು-ಆಚಾರ ಒಂದಾಗಿರುವಂಥವರ, ಸಾತ್ವಿ ಕರ ಮನಸ್ಸಿಗೆ ನೋವಾಗದ ಹಾಗೆ ನಡೆದುಕೊಳ್ಳಬೇಕು. ಮನುಷ್ಯನಿಗೆ ಆಳವಾದ ಅನುಭಾವ ಪ್ರೀತಿಸುವಂತೆ, ಗೌರವಿಸುವಂತೆ ಮಾಡುತ್ತದೆ ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು. 

ಶಿವಮೊಗ್ಗ ಜಿಲ್ಲೆ ಸಂತೆಕಡೂರಿನಲ್ಲಿ ಮೊನ್ನೆ ನಡೆದ ಜಗಜ್ಯೋತಿ ಗ್ರಂಥ ಲೋಕಾರ್ಪಣೆ, ಸಾಂಸ್ಕೃತಿಕ ನಾಯಕ ಬಸವಣ್ಣನವರ ಮಹೋತ್ಸವ ಹಾಗೂ ಗಣ ಪದವಿ ಪ್ರಶಸ್ತಿ ಪ್ರದಾನದ ಹಿನ್ನೆಲೆಯಲ್ಲಿ ಶಿವಮೊಗ್ಗದ ಕಲ್ಯಾಣ ಮಂಟಪದಲ್ಲಿ ನಡೆದ ವೈಚಾರಿಕ ಕಾರ್ಯಕ್ರಮದಲ್ಲಿ ಗಣಪದವಿ ಪ್ರಶಸ್ತಿ ಸ್ವೀಕಾರ ಮಾಡಿ ಮಾತನಾಡಿದರು.

ಲಿಂಗಧಾರಿಗಳೆಂದು ಬೆಳಗ್ಗೆ, ಮಧ್ಯಾಹ್ನ, ಸಂಜೆ ಮೂರು ಹೊತ್ತು ತಪ್ಪದೇ ಲಿಂಗಪೂಜೆ ಮಾಡ್ತೀವಿ ಅಂತ ಹೇಳಿಕೊಂಡು ಬೇರೆಯವರಿಗೆ ಟೋಪಿ ಹಾಕುವಂಥ ಕೆಲಸ ಮಾಡಿದರೆ, ಬೇರೆಯವರಿಗೆ ಕಷ್ಟ ಕೊಟ್ಟರೆ ಮೂರು ಹೊತ್ತು ಪೂಜೆ ಮಾಡಿದರೂ ಅದರ ಫಲ ಸಿಗೋದಿಲ್ಲ. 

ಇತ್ತೀಚಿನ ದಿನಗಳಲ್ಲಿ ಓದುವ ಪ್ರವೃತ್ತಿ ಕಡಿಮೆಯಾಗಿ ಮೊಬೈಲ್ ಬಳಕೆ ಹೆಚ್ಚಾಗಿದೆ. ಮೊಬೈಲ್ ಬಳಕೆ ಕಡಿಮೆ ಮಾಡಿ ಓದುವ ಪ್ರವೃತ್ತಿಯನ್ನು ಬೆಳೆಸಿಕೊಂಡಾಗ ಪುಸ್ತಕ ಸಂಸ್ಕೃತಿ ಉಳಿಸಿಕೊಳ್ಳಲಿಕ್ಕೆ ಸಾಧ್ಯ. ಇತ್ತೀಚಿನ ದಿನಗಳಲ್ಲಿ ಬೋಧನೆ ಮಾಡುವಂಥವರಿಗೇನೂ ಕೊರತೆಯಿಲ್ಲ. ಆದರೆ ಸಾಧನೆ ಮಾಡಿ ಬೋಧನೆ ಮಾಡಿದಂಥವರು ಬೆರಳೆಣಿಕೆಯಷ್ಟು ಮಾತ್ರ ಎಂದು ಹೇಳಿದರು.

ಈ ನಾಡಿನಲ್ಲಿ ಉಚಿತವಾಗಿ ಏನೇ ಕೊಟ್ಟರೂ ಅದಕ್ಕೆ ಗೌರವ ಇರೋದಿಲ್ಲ. ಅಲ್ಪ ಪ್ರಮಾಣದಲ್ಲಾದರೂ ಹಣ ಕೊಟ್ಟು ಕೊಂಡುಕೊಂಡರೆ ಅದಕ್ಕೆ ಬೆಲೆ ಇರುತ್ತದೆ. 12ನೇಯ ಶತಮಾನದಲ್ಲಿ 770 ಅಮರಗಣಂಗಳಿದ್ದರು. ಅವರೆಲ್ಲರೂ ಅರಿವು, ಆಚಾರ ಒಂದಾಗಿದ್ದವರು. ನಡೆ-ನುಡಿಗಳಲ್ಲಿ ಅಂತರ ಇಲ್ಲದೇ ಇರುವಂಥವರು. ಅಮರಗಣಂಗಳ ಸವಿನೆನಪಿಗಾಗಿ ಪ್ರತಿವರ್ಷ ಸಂತೇ ಕಡೂರಿನ ಪ್ರಭುದೇವ ಜ್ಞಾನ ಕೇಂದ್ರ ಸಂಗಮದಲ್ಲಿ ಅಮರಗಣ ಪ್ರಶಸ್ತಿಯನ್ನು ಕೊಡುತ್ತಿರುವುದು ತುಂಬಾ ಸಂತೋಷ. ಯಾವುದೇ ಪ್ರಶಸ್ತಿಯನ್ನು ಕೊಡುವ ಉದ್ದೇಶ ಬೇರೆಯವರಿಗೆ ಸ್ಪೂರ್ತಿಯನ್ನು ನೀಡುವಂಥದ್ದು. ನಮಗೆ ಪ್ರಶಸ್ತಿ ಕೊಟ್ಟು ನಮ್ಮನ್ನು ದೊಡ್ಡವರನ್ನಾಗಿ ಮಾಡೋದಲ್ಲ. ನಮ್ಮ ಮುಖಾಂತರ ಬೇರೆಯವರಿಗೆ ಸ್ಪೂರ್ತಿಯನ್ನು ನೀಡುತ್ತದೆ. ನಾವೆಲ್ಲರೂ ಅಮರಗಣಗಳಾಗಬೇಕು ಎನ್ನುವ ಭಾವನೆ ಸಾರ್ವಜನಿಕರಲ್ಲಿ ಮೂಡಬೇಕು. ನೂರಾರು ಜನ ಸ್ವಾಮಿಗಳಿದ್ದಾರೆ. ಎಲ್ಲರಿಗೂ ಆ ಪ್ರಶಸ್ತಿಯನ್ನು ಕೊಡಲಿಕ್ಕೆ ಸಾಧ್ಯವಿಲ್ಲ. ಎಲ್ಲರ ಪರವಾಗಿ ನಮಗೆ ಕೊಟ್ಟಿದ್ದಾರೆ ಎಂದು ಭಾವಿಸಿದ್ದೇವೆ. 

ಮನುಷ್ಯ ಕಿರೀಟದಿಂದ ದೊಡ್ಡ ವ್ಯಕ್ತಿಯಾಗಲಾರ. ಯಾವುದೇ ವ್ಯಕ್ತಿ ದೊಡ್ಡವನಾಗುವುದು ಅರಿವು, ಆಚಾರದಿಂದ. ಬಸವಣ್ಣನವರು ಅರಿವು ಆಚಾರವನ್ನು ಒಂದಾಗಿಸಿಕೊಂಡಿದ್ದರಿಂದ ಇವತ್ತಿಗೂ ನಾವು ನೆನಪಿಸಿಕೊ ಳ್ಳುತ್ತೇವೆ. ಬಸವಣ್ಣನವರಷ್ಟು ವಿನಯವಂತಿಕೆ ಜಗತ್ತಿನಲ್ಲಿ ಬೇರೆ ಯಾವ ವ್ಯಕ್ತಿಯಲ್ಲೂ ಕಾಣಲಿಕ್ಕೆ ಸಾಧ್ಯ ಇಲ್ಲ. ಮುಗಿದ ಕೈ ಬಾಗಿದ ತಲೆ ಬಸವಣ್ಣನವರದಾಗಿತ್ತು. ಪ್ರತಿ ಯೊಬ್ಬರು ತತ್ವ, ಸಿದ್ಧಾಂತಗಳನ್ನು ಗಾಳಿಗೆ ತೂರಿ, ಸ್ವೇಚ್ಛಾ ಚಾರಿಗಳಂತೆ ನಡೆದುಕೊಳ್ಳುವಂಥವರು ಸಮಾಜದಲ್ಲಿ ಹೆಚ್ಚಿದ್ದಾರೆ. ಅದು ಖಾವಿಧಾರಿಗಳನ್ನೂ ಬಿಟ್ಟಿಲ್ಲ ಎಂದರು. 

ಈ ಸಂದರ್ಭದಲ್ಲಿ ಬಾಲ್ಕಿಯ ಬಸವಲಿಂಗ ಪಟ್ಟದ್ದೇವರಿಗೆ ಹಾಗೂ ಇಳಕಲ್ಲಿನ ಗುರುಮಹಾಂತ ಮಹಾಸ್ವಾಮಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು. 

ಶಿವಮೊಗ್ಗದ ಬೆಕ್ಕಿನಕಲ್ಮಠ ಮಲ್ಲಿಕಾರ್ಜುನ ಸ್ವಾಮಿಗಳು ಹಾಗೂ ಪಾಂಡೋಮಟ್ಟಿಯ ಗುರುಬಸವ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.

error: Content is protected !!