ದಾವಣಗೆರೆ, ಜೂ. 2- ತಾಲ್ಲೂಕಿನ ಎಲೆಬೇತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆ ಶಾಲಾ ಪ್ರಾರಂಭೋತ್ಸವ ಪ್ರಯುಕ್ತ ಶಾಲಾ ಆವರಣವನ್ನು ಸ್ವಚ್ಛಗೊಳಿಸಿ ಬಾಳೆ ಕಂಬ ಮಾವಿನ ತೋರಣಗಳಿಂದ ಅಲಂಕರಿಸಲಾಗಿತ್ತು.
ಬಿಸಿ ಊಟದ ಅಡುಗೆಯವರು ಪಾತ್ರೆ ಸಾಮಾನುಗಳನ್ನು ಶುಭ್ರಗೊಳಿಸಿ ಸಿಹಿ ಅಡುಗೆ ತಯಾರಿ ಮಾಡಿಕೊಂಡಿದ್ದರು. ಶಾಲಾಮಕ್ಕಳಿಗೆ ಎಸ್‌ಡಿಎಂಸಿ ಅಧ್ಯಕ್ಷರು, ಮುಖ್ಯೋಪಾಧ್ಯಾ ಯರು, ಗ್ರಾಮಸ್ಥರು, ಶಿಕ್ಷಕ ವೃಂದದವರು ಪುಷ್ಪವೃಷ್ಟಿ ಮಾಡಿ ಸಿಹಿ ವಿತರಿಸಿ, ಮಕ್ಕಳನ್ನು ಶಾಲೆಗೆ ಬರಮಾಡಿಕೊಂಡರು. ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಪಠ್ಯಪುಸ್ತಕ ವಿತರಣೆ ಮಾಡಲಾಯಿತು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ವಿಜಯ್, ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ಅಂಬಿಕಾ, ಗ್ರಾಮದ ಮುಖಂಡ ಹೆಚ್. ಬಸವರಾಜಪ್ಪ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ನಿರ್ದೇಶಕ ಷಡಕ್ಷರಪ್ಪ ಎಂ. ಬೇತೂರು, ಶಾಲಾ ಮುಖ್ಯೋಪಾಧ್ಯಾಯರಾದ ಬಿ. ಸುಜಾತ ಮತ್ತು ಇತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮೊನ್ನೆ ವಯೋ ನಿವೃತ್ತರಾದ ದೈಹಿಕ ಶಿಕ್ಷಕರಾದ ಎ.ಆರ್. ಗೋಪಾಲಪ್ಪ ಅವರಿಗೆ ಶಾಲಾ ಎಸ್‌ಡಿಎಂಸಿ ವತಿಯಿಂದ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮತ್ತು ಬೇತೂರು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಇ. ಕರಿಯಪ್ಪ ಇವರಿಂದ ಗೌರವಿಸಿ ಬೀಳ್ಕೊಡಲಾಯಿತು.