ಉನ್ನತ ಶಿಕ್ಷಣ ಪಡೆದು, ಸಮಾಜ ಮುಖಿ ಕೆಲಸ ಮಾಡುವಂತಾಗಲಿ

ಉನ್ನತ ಶಿಕ್ಷಣ ಪಡೆದು, ಸಮಾಜ ಮುಖಿ ಕೆಲಸ ಮಾಡುವಂತಾಗಲಿ

ಹೊನ್ನಾಳಿ ಕಾರ್ಯಕ್ರಮದಲ್ಲಿ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ

ಹೊನ್ನಾಳಿ, ಜೂ. 2- ಶೈಕ್ಷಣಿಕ ಸಾಧಕರಿಗೆ ಸನ್ಮಾನ, ಪ್ರೋತ್ಸಾಹದ ಮೂಲಕ ಸಮಾಜದ ಯುವಪೀಳಿಗೆ ಐ.ಎ.ಎಸ್. ಐ,ಪಿ.ಎಸ್, ಐಐಟಿಗಳಂತಹ ಉನ್ನತ ಮಟ್ಟದ ಶಿಕ್ಷಣ ಪಡೆದು ಸಮಾಜಮುಖಿ ಕೆಲಸ ಮಾಡುವಂತಾಗಲಿ ಎಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮೀಜಿ ಆಶಯ ವ್ಯಕ್ತಪಡಿಸಿದರು. 

ಹೊನ್ನಾಳಿ ತಾಲ್ಲೂಕು ವೀರಶೈವ ಪಂಚಮಸಾಲಿ ಸಮಾಜ  ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿ ಇಂದು ಹಮ್ಮಿಕೊಂಡಿದ್ದ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಪಂಚಮಸಾಲಿ ಸಮಾಜದ ಪ್ರತಿಭಾನ್ವಿತ ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ಹೆಚ್ಚು ಸಾಧನೆ ಗೈಯ್ಯಲು ಪಂಚಮಸಾಲಿ ಪೀಠದಿಂದ ಈವರೆಗೆ ಸುಮಾರು 20 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಪ್ರೋತ್ಸಾಹಿಸಿದೆ ಎಂದು ಶ್ರೀಗಳು ಹೇಳಿದರು. 

ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷರು ಹಾಗೂ ಪೀಠದ ಧರ್ಮದರ್ಶಿ ಬಿ.ಸಿ. ಉಮಾಪತಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಒಳ್ಳೆಯ ವಿಚಾರಧಾರೆಯನ್ನು ಅಳವಡಿಸಿಕೊಳ್ಳುವ ಮೂಲಕ ಸಮಾಜ ಹಾಗೂ ತಮ್ಮ ಪ್ರಗತಿಗೆ ಕಾರಣವಾಗಬೇಕಿದೆ. ವಿದ್ಯಾರ್ಥಿಗಳ ಬದುಕು ಬಂಗಾರದ ಬದುಕು ಎಂಬುದನ್ನು ಅರಿತು ಧರ್ಮದ ಆಚರಣೆ ಹಾಗೂ ಸಂಸ್ಕಾರ ಅರಿತು ನಡೆಯುವ ಮೂಲಕ ಸಮಾಜದ ಉನ್ನತಿಗೆ ಎಲ್ಲಾ ಹಂತಗಳಲ್ಲೂ ಕೈಜೋಡಿಸುವಂತೆ ಕರೆ ನೀಡಿದರು.

ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಕಾರ್ಯಾಧ್ಯಕ್ಷ ಸೋಮನಗೌಡ ಪಾಟೀಲ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಕಷ್ಟದಾಯಕವಾಗಿದೆ. ದೇಶದಲ್ಲಿ ಪ್ರಸ್ತುತ ಸುಮಾರು 7 ಧರ್ಮಗಳಿವೆ. ವೀರಶೈವ ಲಿಂಗಾಯತ ಪಂಚಮಸಾಲಿ ಎಂಟನೇ ಧರ್ಮವಾಗಿ ಹೊರಹೊಮ್ಮಬೇಕಾಗಿದೆ. ಇದಕ್ಕಾಗಿ ಸಮಾಜದವರು ಹೋರಾಟ ಮಾಡಬೇಕಾಗಿದೆ. ಜೊತೆಗೆ ಸರ್ಕಾರ ಪಂಚಮಸಾಲಿ ಸಮುದಾಯವನ್ನು ಓ.ಬಿ.ಸಿ. ವರ್ಗಕ್ಕೆ ಸೇರಿಸಬೇಕಾಗಿದೆ ಎಂದು ಹೇಳಿದರು. 

ಪಂಚಮಸಾಲಿ ಸಮಾಜದ ತಾಲ್ಲೂಕು ಅಧ್ಯಕ್ಷ ಬೆನಕನಹಳ್ಳಿ ವೀರಣ್ಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಹರಿಹರ ಪೀಠದ ನಿತ್ಯ ದಾಸೋಹಕ್ಕೆ  25 ಸಾವಿರ ರೂ. ದಾನ ಮಾಡಿದ ವೀರಣ್ಣ ಪಟ್ಟಣಶೆಟ್ಟಿ, ಹೊನ್ನಾಳಿಯ ಹೆಚ್.ಬಿ. ಪ್ರಭು, ರೂಪಾ ಅಶೋಕ್, ಸೋಮಶೇಖರಪ್ಪ, ಉತ್ತಂಗಿ ಕೊಟ್ರೇಶ್, ಬೆನಕನಹಳ್ಳಿ ಶಿವಲಿಂಗಪ್ಪ, ಚನ್ನಬಸಪ್ಪ, ಸಾಸ್ವೆಹಳ್ಳಿ ಬಸವರಾಜಪ್ಪ, ಗಿರೀಶ್‌ ನಾಡಿಗ, ಮಂಜುನಾಥ ನಾಡಿಗ ಅವರುಗಳನ್ನು ಸನ್ಮಾನಿಸಲಾಯಿತು.

ಪಂಚಮಸಾಲಿ ಸಾಮಾಜದ ಗೌರವಾಧ್ಯಕ್ಷರು ಹಾಗೂ ಗುರುಪೀಠದ ಆಡಳಿತಾಧಿಕಾರಿ ಡಾ. ಎಚ್.ಪಿ.ರಾಜಕುಮಾರ್ ಅವರು ನಿವೃತ್ತ ನೌಕರರನ್ನು ಸನ್ಮಾನಿಸಿ ಮಾತನಾಡಿದರು. ರಾಜ್ಯ ಪಂಚಮಸಾಲಿ ಸಮಾಜದ ಉಪಾಧ್ಯಕ್ಷ ಪರಮೇಶ್ವರಪ್ಪ ಪಟ್ಟಣ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
ಸೋಮಣ್ಣ ಬೇವಿನ ಮರದ, ಹರಿಹರದ ಹರ ಪೀಠದ ಧರ್ಮದರ್ಶಿ ಜ್ಯೋತಿಪ್ರಕಾಶ್‌, ದಾವಣಗೆರೆ ವಕೀಲ ಪ್ರಕಾಶ ಪಾಟೀಲ್, ಮಹಿಳಾ ಅಧ್ಯಕ್ಷೆ ಶಿಲ್ಪಾ ರಾಜು ಗೌಡ, ಯುವ ಘಟಕದ ಅಧ್ಯಕ್ಷ ಕೆ.ಎನ್‍. ಹಾಲೇಶ್, ನಗರ ಘಟಕದ ಅಧ್ಯಕ್ಷ ಗಿರೀಶ್, ಹಾಲೇಶ್ ಕುಂಕೋದ, ಶಿಕ್ಷಕ ಪ್ರಸನ್ನ, ಎಚ್ .ಪಿ.ಗಿರೀಶ, ಶಕುಂತಲಾ ರಾಜ್ ಕುಮಾರ್, ಸೇರಿದಂತೆ, ಸಮಾಜದ ಹಲವಾರು ಗಣ್ಯರು ಭಾಗವಹಿಸಿದ್ದರು.

error: Content is protected !!