ತೆಗ್ಗಿನಮಠದಲ್ಲಿನ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಶ್ರೀ ವರಸದ್ಯೋಜಾತ ಸ್ವಾಮೀಜಿ ಕಳಕಳಿ
ಹರಪನಹಳ್ಳಿ. ಮೇ 30- ಅನಾವಶ್ಯಕವಾಗಿ ಲಕ್ಷಾಂತರ ಹಣ ವೆಚ್ಚ ಮಾಡಿ ಆಡಂಬರದ ಮದುವೆ ಮಾಡುವುದಕ್ಕಿಂತ, ಸರಳವಾಗಿ ಮಾಡಬೇಕು. ಸಾಮೂಹಿಕ ಮದುವೆಗಳು ಭಾಗ್ಯದ ಮದುವೆ ಗಳಾಗಿವೆ ಎಂದು ತೆಗ್ಗಿನಮಠದ ಶ್ರೀ ವರಸದ್ಯೋ ಜಾತ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ತೆಗ್ಗಿನ ಮಠದಲ್ಲಿ ಶ್ರೀ ತೆಗ್ಗಿನಮಠ ಗ್ರಾಮೀಣ ವಿಕಾಸ ಟ್ರಸ್ಟ್ ಹಾಗೂ ಶ್ರೀ ತೆಗ್ಗಿನಮಠ ಪುರಾಣ ಪ್ರವಚನ ಮತ್ತು ಸಾಮೂಹಿಕ ವಿವಾಹ ಸಮಿತಿ ವತಿಯಿಂದ ಲಿಂ. ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ 77ನೇ ಪುಣ್ಯಾರಾಧನೆ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಧರ್ಮಾರ್ಥ ಸಾಮೂಹಿಕ ಕಲ್ಯಾಣ ಮಹೋತ್ಸವ ಕಾರ್ಯಕ್ರಮದ ನೇತೃತ್ವ ವಹಿಸಿ ಶ್ರೀಗಳು ಮಾತನಾಡಿದರು.
ಸರಳ ಹಾಗೂ ಕಡಿಮೆ ವೆಚ್ಚದಲ್ಲಿ ಉಚಿತ ಸಾಮೂ ಹಿಕ ವಿವಾಹಗಳು ನಡೆದರೆ ಹೆಚ್ಚು ಅನುಕೂಲ ವಾಗುತ್ತದೆ. ಮದುವೆ ಮಾಡಿಕೊಂಡು ನಂತರ ಸಾಲ ತೀರಿಸುವುದಕ್ಕಾಗಿ ಎಷ್ಟೋ ಕುಟುಂಬಗಳು ಗುಳೇ ಹೋಗಿ ದುಡಿಯುವ ಗ್ರಾಮೀಣ ಕುಟುಂಬಗಳನ್ನು ನಾವು ಕಂಡಿದ್ದೇವೆ ಎಂದು ಅವರು ತಿಳಿಸಿದರು.
ಸಂಸಾರದಲ್ಲಿ ಬರುವ ಕಷ್ಟ, ಸುಖಗಳನ್ನು ಸಮಾನವಾಗಿ ಸ್ವೀಕರಿಸಿ, ಜೀವನದಲ್ಲಿ ದುಡುಕು, ಕೋಪ ನಿಮ್ಮ ಬದುಕನ್ನು ಹಾಳು ಮಾಡುತ್ತದೆ. ಪರಸ್ಪರರು ಅನ್ಯೋನ್ಯತೆಯಿಂದ ಬದುಕು ಸುಂದರ ಮಾಡಿಕೊಳ್ಳಿ. ಮನುಷ್ಯನಿಗೆ ಆಸೆ, ಬಯಕೆಗಳಿಗೆ ಮಿತಿಯಿಲ್ಲ. ಉತ್ತಮ ಕೆಲಸ ಮಾಡುವ ಮೂಲಕ ಜೀವನ ಸಾರ್ಥಕ ಮಾಡಿಕೊಳ್ಳಿ. ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಸರ್ಕಾರ ಮಾಡುವ ಕೆಲಸವನ್ನು ತೆಗ್ಗಿನ ಮಠ ಮಾಡಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕರಾದ ಎಂ.ಪಿ. ಲತಾ ಮಲ್ಲಿಕಾರ್ಜುನ್ ಅವರು ಮಾತನಾಡಿ, ಮದುವೆ ಸಾಲದ ಸುಳಿಯಲ್ಲಿ ಸಿಕ್ಕು ನಲುಗುವ ಬದಲು, ಸಾಮೂಹಿಕ ವಿವಾಹಗಳಲ್ಲಿ ಮದುವೆಯಾದರೆ ಆರ್ಥಿಕ ವೆಚ್ಚ ಕಡಿಮೆ ಯಾಗುತ್ತದೆ. ಇಂದಿನ ದುಬಾರಿ ಕಾಲದಲ್ಲಿ ಮದುವೆ ಮಾಡುವುದೆಂದರೆ ಕಷ್ಟದ ಕೆಲಸ. ಸಾಲ ಮಾಡಿ ಮದುವೆ ಮಾಡುವುದಕ್ಕಿಂತ, ಸಾಲವಿಲ್ಲದೆ ಸರಳ ಸಾಮೂಹಿಕ ವಿವಾಹಗಳಲ್ಲಿ ಮದುವೆ ಮಾಡಿಕೊಳ್ಳುವುದು ಒಳ್ಳೆಯ ಕೆಲಸ. ಸಾಮೂಹಿಕ ಮದುವೆಗಳು ಹಣ ಉಳಿತಾಯದ ಜೊತೆಗೆ ಸಮಾಜದಲ್ಲಿ ಸಾಮರಸ್ಯದ ಪ್ರತೀಕವಾಗಿವೆ ಎಂದರು.
ತೆಗ್ಗಿನ ಮಠದ ಕಾರ್ಯದರ್ಶಿ ಡಾ.ಟಿ.ಎಂ.ಚಂದ್ರಶೇಖರಯ್ಯ ಮಾತನಾಡಿ, ಅನ್ನ ದಾಸೋಹದ ಮೂಲಕ ದಾಸೋಹ ಮಠವನ್ನಾಗಿ ಮಾಡಿದ ಕೀರ್ತಿ ಲಿಂ. ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾ ಸ್ವಾಮಿಗಳಿಗೆ ಸಲ್ಲುತ್ತದೆ. ಮಧ್ಯ ಕರ್ನಾಟಕದಲ್ಲಿ 65ಕ್ಕೂ ಹೆಚ್ಚು ವಿದ್ಯಾಸಂಸ್ಥೆ ಗಳನ್ನು ಕಟ್ಟಿ ಅಕ್ಷರ ದಾಸೋಹ ಮಾಡುವ ಮೂಲಕ ರಾಜ್ಯದಲ್ಲಿ ಅಕ್ಷರ ಕ್ರಾಂತಿ ಮಾಡಿದ ಹೆಗ್ಗಳಿಕೆ ಇದ್ದು, ಮುಂದಿನ ದಿನಗಳಲ್ಲಿ ಲಿಂ. ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಹೆಸರಿನಲ್ಲಿ ಜಾತ್ರೆ ನಡೆಸಲಾಗುವುದು ಎಂದರು.
ರಾಮಘಟ್ಟ ಪುರವರ್ಗ ಮಠದ ಶ್ರೀ ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ತಿಪ್ಪೇಸ್ವಾಮಿ, ವಿ.ಎನ್.ಸಿ ಮಾಜಿ ಅಧ್ಯಕ್ಷ ಅಸುಂಡಿ ಬಿ.ನಾಗರಾಜ ಗೌಡ್ರು, ಪ್ರಕೃತಿ ವಿದ್ಯಾಸಂಸ್ಥೆ ಅಧ್ಯಕ್ಷ ಶಶಿಧರ ಪೂಜಾರ್ ಮಾತನಾಡಿದರು.
ಜ್ಞಾನಗಂಗೋತ್ರಿ ಕ್ಯಾಂಪಸ್ನ ಆಡಳಿತಾ ಧಿಕಾರಿ ಟಿ.ಎಂ.ಪ್ರತೀಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ಸದಸ್ಯರಾದ ಗೊಂಗಡಿ ನಾಗರಾಜ, ಲಾಟಿ ದಾದಾಪೀರ್, ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷರಾದ ಟಿ.ಎಂ.ಲಲಿತಮ್ಮ, ಮುಖಂಡರಾದ ಹೆಚ್.ಎಂ.ಕೊಟ್ರಯ್ಯ, ಹುಲಿಕಟ್ಟಿ ಚಂದ್ರಪ್ಪ, ಮುದಗಲ್ ಗುರುನಾಥ, ಕೆ.ಎಂ.ಶಿವಕುಮಾರಸ್ವಾಮಿ, ಟಿ.ಎಂ.ಕೊಟ್ರಯ್ಯ, ಕೆ.ಎಂ.ಗುರುಸಿದ್ದಯ್ಯ, ಹುಳ್ಳಿ ಕೊಟ್ರೇಶಪ್ಪ, ಪ್ರಾಂಶುಪಾಲ ಟಿ.ಎಂ. ರಾಜಶೇಖರ್, ನಾಗೇಂದ್ರರಾವ್, ಅರುಣಕುಮಾರ್, ಟಿ.ಎಂ.ವಿಶ್ವನಾಥ, ಕೆ.ಎಂ.ಗುರುಸಿದ್ದಯ್ಯ, ಚಿಂದಿ ಗಿರೀಶ, ಜಿ.ಎಂ.ಪ್ರದೀಪ್ ಸೇರಿದಂತೆ, ಇತರರು ಇದ್ದರು,