ವೈಚಾರಿಕತೆಗೆ ಭದ್ರ ಬುನಾದಿ ಹಾಕಿದ ಕುವೆಂಪು

ವೈಚಾರಿಕತೆಗೆ ಭದ್ರ ಬುನಾದಿ ಹಾಕಿದ ಕುವೆಂಪು

ಜಗಳೂರಿನ ಕಾರ್ಯಕ್ರಮದಲ್ಲಿ ನಿವೃತ್ತ ಕನ್ನಡ ಉಪನ್ಯಾಸಕ ಡಿ.ಸಿ. ಮಲ್ಲಿಕಾರ್ಜುನ್

ಜಗಳೂರು, ಡಿ. 30- ರಸಋಷಿ ಕುವೆಂಪು ಅವರು ಸಾಹಿತ್ಯದ ಮೂಲಕ ವೈಚಾರಿಕತೆಗೆ ಭದ್ರ ಬುನಾದಿ ಹಾಕಿದ ರಾಷ್ಟ್ರಕವಿ  ಎಂದು ನಿವೃತ್ತ ಕನ್ನಡ ಉಪನ್ಯಾಸಕ ಡಿ.ಸಿ. ಮಲ್ಲಿಕಾರ್ಜುನ್ ಸ್ಮರಿಸಿದರು.

ಜಗಳೂರು ತಾಲ್ಲೂಕು ಕಚೇರಿಯಲ್ಲಿ ಗುರುವಾರ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಶ್ವವೇ ಒಂದು ಕುಟುಂಬ ಎಂಬ ಸಂದೇಶವನ್ನು ನೀಡಿದ ಅವರು ರಾಮಕೃಷ್ಣ ಪರಮಹಂಸ ಮತ್ತು ವಿವೇಕಾನಂದರ ವಿಚಾರಧಾರೆಗೆ ಪ್ರಭಾವಿತರಾದ ಅವರು ವಿಶ್ವಮಾನವ ಸಂದೇಶ ಸಾರಿದರು. ಸರ್ಕಾರ ಅವರ ಜನ್ಮದಿನವನ್ನು ವಿಶ್ವಮಾನವ ದಿನಾಚರಣೆ ಮಾಡಿರುವುದು ಸಂತೋಷದ ವಿಚಾರ ಎಂದರು.

ಕುವೆಂಪು ಅವರ ಕವಿತೆ ಮತ್ತು ಬರಹಗಳಲ್ಲಿ ಸಮಾಜ ಶುದ್ಧತೆಯ ಸಂದೇಶವಿದೆ. ಹೀಗಾಗಿ ಸಾಮರಸ್ಯದ ಸಂಕೇತವಾದ ಅವರ ಬರಹಗಳು ಬಹುತ್ವದ ಭಾರತಕ್ಕೆ ಮಾರ್ಗದರ್ಶನವಾಗಿವೆ. ನಾಡು-ನುಡಿ ಕಟ್ಟಲು ಆಯ್ಕೆ ಮಾಡಿಕೊಂಡಿದ್ದು ಕನ್ನಡ ಸಾಹಿತ್ಯವನ್ನು. ಕುವೆಂಪು ಅವರ ಕಾವ್ಯ. ಬರಹಗಳು ವೈಚಾರಿಕತೆಗೆ ವೇದಿಕೆಯಾಗಿವೆ. ಸರ್ವರಿಗೂ ಸಮಪಾಲು, ಸಮಬಾಳು ಎಂದು ಸಾರಿದರು. ಕಂದಾಚಾರ, ಅಸ್ಪೃಶ್ಯತೆಯನ್ನು ತೊಡೆದು ಹಾಕಲು ಬರಹಗಳಿಂದ ಸಾಧ್ಯ ಎಂದು ತೋರಿಸಿಕೊಟ್ಟವರು ಕುವೆಂಪು ಎಂದು ಬಣ್ಣಿಸಿದರು.

ತಹಶೀಲ್ದಾರ್ ಜಿ. ಸಂತೋಷ್ ಕುಮಾರ್, ಕುವೆಂಪು ಅವರು ಬರೆದಂತೆ ಬದುಕಿದರು. ಬದುಕಿ ದಂತೆ ಬರೆದರು. ಅವರ ಆದರ್ಶದ ಜೀವನ ಇಡೀ ಯುವಜನತೆಗೆ ಮಾರ್ಗದರ್ಶನವಾಗಿದೆ ಎಂದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ ಮಾತನಾಡಿ, ಸಾಮರಸ್ಯದ ಬದುಕು , ಕನ್ನಡ ಭಾಷೆಗೆ ಅವರು ಕೊಟ್ಟ ಬರಹಗಳಾದ ಶ್ರೀರಾಮಾಯಣ ದರ್ಶನಂ, ಬೆರಳ್‌ಗೆ ಕೊರಳ್, ಅನಿಕೇತನ ಇವು ವಿಶ್ವಮಾನವ ಕವಿ ಪುಟ್ಟಪ್ಪನವರ ಹೃದಯದ ಶ್ರೀಮಂತಿಕೆಯ ಬರಹಗಳು ಎಂದು ಸ್ಮರಿಸಿಕೊಂಡರು.

ಕಾರ್ಯಕ್ರಮದಲ್ಲಿ ತಾಪಂ ಇಓ ಚಂದ್ರಶೇಖರ್, ಕಸಾಪ ಅಧ್ಯಕ್ಷೆ ಸುಜಾತಮ್ಮ, ನಿವೃತ್ತ ಉಪನ್ಯಾಸಕ ರಾಜಪ್ಪ, ರೈತ ಸಂಘದ ತಿಪ್ಪೇಸ್ವಾಮಿ, ಡಿಎಸ್‌ಎಸ್  ಸಂಚಾಲಕ ಕುಬೇಂದ್ರಪ್ಪ, ಹಿರಿಯ ನಾಗರಿಕರ ಸಂಘದ ತಾಲ್ಲೂಕು ಅಧ್ಯಕ್ಷ ಸಿ. ತಿಪ್ಪೇಸ್ವಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

error: Content is protected !!