ಧರ್ಮ ನಮಗಾಗಿ ಹೊರತು, ಧರ್ಮಕ್ಕಾಗಿ ನಾವಿಲ್ಲ

ಧರ್ಮ ನಮಗಾಗಿ ಹೊರತು, ಧರ್ಮಕ್ಕಾಗಿ ನಾವಿಲ್ಲ

ದಾವಣಗೆರೆ, ಡಿ. 30 – ಧರ್ಮ ನಮಗಾಗಿ ಇದೆಯೇ ಹೊರತು, ನಾವು ಧರ್ಮಕ್ಕಾಗಿ ಇಲ್ಲ. ಧರ್ಮ ನಾಲ್ಕು ಜನರಿಗೆ ಒಳಿತು ಮಾಡಬೇಕೇ ಹೊರತು, ಧರ್ಮಗಳನ್ನು ಮುಂದಿಟ್ಟುಕೊಂಡು ಜನರ ನಡುವೆ ಗೋಡೆ ಕಟ್ಟಬಾರದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳಿದರು.

ನಗರಸಭೆ ಮಾಜಿ ಅಧ್ಯಕ್ಷ ಬಿ. ವೀರಣ್ಣ ಹಾಗೂ ಪಾಲಿಕೆ ಮಾಜಿ ಸದಸ್ಯೆ ಲಕ್ಷ್ಮೀದೇವಿ ಬಿ. ವೀರಣ್ಣನವರ ಎಲ್‌.ಬಿ.ಕೆ. ಕಲ್ಯಾಣ ಟ್ರಸ್ಟ್ ವತಿಯಿಂದ ಹೊಂಡದ ಸರ್ಕಲ್‌ನಲ್ಲಿ ಆಯೋಜಿಸಲಾಗಿದ್ದ 7ನೇ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬರೂ ಮಾನವರಾಗಿ ಬದುಕಲು ಇರುವ ಜೀವನ ಕ್ರಮವೇ ಧರ್ಮ. ಧರ್ಮ ಬೇರೆ ಬೇರೆ ಇದ್ದರೂ ನಾವೆಲ್ಲರೂ ಮನುಷ್ಯರು ಎಂಬುದನ್ನು ಅರಿತುಕೊಳ್ಳಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ನನಗೇನಾದರೂ ರೋಗ ಬಂದು ರಕ್ತದ ಅಗತ್ಯವಾದರೆ, ನಾನು ಕುರುಬರ ರಕ್ತವೇ ಬೇಕು ಎನ್ನಲಾಗದು. ಜೀವ ಉಳಿಯಲು ಯಾವ ಧರ್ಮದವರ ರಕ್ತವಾದರೂ ಸ್ವೀಕರಿಸುತ್ತೇವೆ. ಬೇರೆಯವರ ರಕ್ತವನ್ನೇ ಸ್ವೀಕರಿಸಿ ಬದುಕುವ ನಾವು, ಜೀವ ಉಳಿದ ಮೇಲೆ ಧರ್ಮ ಭೇದ ಮಾಡುವುದು ಸರಿಯೇ? ಎಂದು ಪ್ರಶ್ನಿಸಿದರು.

ಧರ್ಮಗಳ ನಡುವೆ ಗೋಡೆ ಕಟ್ಟಿ ಲಾಭ ಪಡೆಯುವವರು ಹುಟ್ಟಿಕೊಂಡಿದ್ದಾರೆ. ಈ ಗೋಡೆಗಳನ್ನು ಒಡೆದಾಗ ಮಾತ್ರ ಕುವೆಂಪು ಅವರ ಆಶಯದಂತೆ ನಮ್ಮ ನಾಡು ಸರ್ವ ಜನಾಂಗದ ಶಾಂತಿಯ ತೋಟವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಸರ್ವಧರ್ಮಗಳ ಸಾಮೂಹಿಕ ವಿವಾಹ ಒಳ್ಳೆಯ ಹೆಜ್ಜೆ. ರಾಜಕೀಯದವರೂ ಸೇರಿದಂತೆ ಎಲ್ಲ ವರ್ಗದವರು ಈ ರೀತಿಯ ಮದುವೆಗಳಿಗೆ ಮುಂದಾಗಬೇಕು ಎಂದರು.

ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ಗಂಡ – ಹೆಂಡತಿ ಬಂಡಿಯ ಎರಡು ಗಾಲಿಗಳಿದ್ದಂತೆ. ಪರಸ್ಪರ ಅರಿತು ಮುಂದೆ ಸಾಗಬೇಕು. ದುಡಿಮೆಯ ಒಂದು ಭಾಗವನ್ನು ಸಮಾಜಕ್ಕೆ ಸಲ್ಲಿಸಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಎರಡು ಕಣ್ಣಿದ್ದರೂ ಒಂದೇ ದೃಷ್ಟಿ ಇರುವಂತೆ ದಂಪತಿಗಳು ಇರಬೇಕು. ಪ್ರೀತಿ, ಸಾಮರಸ್ಯ ಹಾಗೂ ಸಹನೆ ಇರುವ ಕುಟುಂಬಗಳು ಸ್ವರ್ಗವಾಗುತ್ತವೆ ಎಂದು ತಿಳಿಸಿದರು.

ಬಂಜಾರ ಗುರುಪೀಠದ ಶ್ರೀ ಬಸವ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಿದ್ದರು.

ಎಂ.ಟಿ. ಸುಭಾಷ್‌ಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆಯ ಮೇಲೆ ಶಾಸಕ ವೈ. ರಾಮಪ್ಪ, ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಸಾಬ್, ಕಾಂಗ್ರೆಸ್ ಮುಖಂಡರಾದ ಡಿ. ಬಸವರಾಜ್, ಸೈಯದ್ ಸೈಫುಲ್ಲಾ, ಹೊದಿಗೆರೆ ರಮೇಶ್, ಸಿರಾಜ್, ಸಾಧಿಕ್ ಪೈಲ್ವಾನ್, ಕೆ.ಪಿ. ಪಾಲಯ್ಯ, ಸವಿತಾ ಬಾಯಿ ಮಲ್ಲೇಶ್ ನಾಯಕ್, ಪಾಲಿಕೆ ಮಾಜಿ ಸದಸ್ಯೆ ಲಕ್ಷ್ಮಿದೇವಿ ಬಿ. ವೀರಣ್ಣ ಮತ್ತಿತರರು ಉಪಸ್ಥಿತರಿದ್ದರು.

ನಗರಸಭೆ ಮಾಜಿ ಅಧ್ಯಕ್ಷ ಬಿ. ವೀರಣ್ಣ ಸ್ವಾಗತಿಸಿದರು. ಎನ್.ಎಂ. ಆಂಜನೇಯ ಗುರೂಜಿ ನಿರೂಪಿಸಿದರೆ, ಕರಿಗಾರ ಬಸಪ್ಪ ವಂದಿಸಿದರು.

error: Content is protected !!