ಪಿಕಪ್‌ ಕಾಲುವೆಯ ದುರ್ನಾತಕ್ಕೆ ಸ್ಥಳೀಯರಿಗೆ ಭಯ

ಪಿಕಪ್‌ ಕಾಲುವೆಯ ದುರ್ನಾತಕ್ಕೆ ಸ್ಥಳೀಯರಿಗೆ ಭಯ

ಹರಿಹರದ ಬೆಂಕಿ ನಗರ ಮತ್ತು ಪ್ರಶಾಂತ ನಗರ ಬಳಿಯ ನೀರಾವರಿ ಕಾಲುವೆಯಲ್ಲಿ ಕಸ, ಪ್ಲಾಸ್ಟಿಕ್, ಹೂಳು ಮತ್ತು ತ್ಯಾಜ್ಯ ತುಂಬಿಕೊಂಡು ನೀರು ಹರಿಯದಂತೆ ಸಂಪೂರ್ಣ ಹಾಳಾಗಿ, ನಾಲೆಯೂ ಬೃಹತ್‌ ಚರಂಡಿ ಸ್ವರೂಪ ತಾಳಿದೆ.

ಹೌದು, ದೇವರಬೆಳೆಕೆರೆ ಪಿಕಪ್‌ ಜಲಾಶಯದಿಂದ ಬನ್ನಿಕೋಡು, ಕೆ. ಬೇವಿನಹಳ್ಳಿ, ಶೇರಾಪುರ ಮತ್ತು ಅಮರಾವತಿ ಮೂಲಕ ಕೋಡಿಹಳ್ಳಿ ತಲುಪಿ ಸುಮಾರು 13 ಸಾವಿರ ಹೆಕ್ಟೇರ್‌ ಮಳೆಯಾಶ್ರಿತ ಜಮೀನುಗಳಿಗೆ ನೀರುಣಿಸಬೇಕಾದ ನಾಲೆ ಹರಿಹರ ನಗರ ಪ್ರದೇಶದಲ್ಲಿ ತ್ಯಾಜ್ಯ ತುಂಬಿಕೊಂಡು ಸಂಪೂರ್ಣ ಹಾಳಾಗಿದೆ.

ಕಾಲುವೆಯ ದಂಡೆ ಭಾಗದ ಬೆಂಕಿನಗರದಲ್ಲಿ ಕಸ ಸಂಗ್ರಹಣಾ ವಾಹನಗಳು ಸಕಾಲಕ್ಕೆ ಬರದೇ ಇರುವ ಕಾರಣ, ಸ್ಥಳೀಯ ನಾಗರಿಕರು ಕಸವನ್ನು ಕಾಲುವೆಗೆ ಹಾಕುತ್ತಿದ್ದಾರೆ.

ಚಿಕನ್‌ ಅಂಗಡಿ ತ್ಯಾಜ್ಯ, ಮೆಡಿಸಿನ್‌ಗಳು, ಗಾಜಿನ ಚೂರುಗಳು, ಅಪಾರ ಪ್ರಮಾಣದ ಪ್ಲಾಸ್ಟಿಕ್‌ ಪೇಪರ್‌ಗಳು ಮತ್ತು ಹಳೇ ಬಟ್ಟೆಗಳ ರಾಶಿ-ರಾಶಿ ಕಸ ನಾಲೆಯ ದಂಡೆಯಲ್ಲಿ ಕಾಣುತ್ತಿದೆ. ನಾಲೆಯಲ್ಲಿ ಬಿಸಾಡುವ ತ್ಯಾಜ್ಯದಿಂದ ದುರ್ನಾತ ಹಬ್ಬುತ್ತಿದ್ದು, ಸೊಳ್ಳೆಗಳ ಕಾಟ ವಿತರೀತವಾಗಿದೆ ಮತ್ತು ಇಲ್ಲಿನ ಸಣ್ಣ ಮಕ್ಕಳು ಕಾಲುವೆಯ ಅಕ್ಕಪಕ್ಕದಲ್ಲೇ ಆಡುವು ದರಿಂದ ಸಾಂಕ್ರಾಮಿಕ ಕಾಯಿಲೆಗೆ ತುತ್ತಾಗುವುದನ್ನು ಅಧಿಕಾರಿಗಳು ತಪ್ಪಿಸಬೇಕಿದೆ.

ಬಯಲು ಶೌಚ ಮುಕ್ತವಾಗಿಲ್ಲ: ಸ್ಮಾರ್ಟ್ ಸಿಟಿಗೆ ಹತ್ತಿರವಿರುವ ಹರಿಹರದಲ್ಲಿ ಇಂದಿಗೂ ಬಯಲು ಶೌಚ ಮುಕ್ತವಾಗಿಲ್ಲ. ಕಾಲುವೆಯ ದಂಡೆಯು ಬಹಿರ್ದೆಸೆಯ ಸ್ಥಾನವಾಗಿದೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಬಹಿರ್ದೆಸೆಯಿಂದ ಹರಡುವ ರೋಗದ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಸರಿಯಾದ ಸಮಯಕ್ಕೆ ಚರಂಡಿ ಸ್ವಚ್ಚಗೊಳಿಸುವುದು, ಕಸ ಸಂಗ್ರಹಿಸುವುದು ಮಾಡಬೇಕು ಮತ್ತು ದುರ್ನಾತ ಬೀರುವ ಕಾಲುವೆಯನ್ನು ಸ್ಚಚ್ಛಗೊಳಿಸುವ ಕಾರ್ಯ ನಡೆದರೆ, ಸ್ಥಳೀಯರು ರೋಗ ಭಯದಿಂದ ಮುಕ್ತರಾಗುವರು. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಈ ಕುರಿತು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು  ಹಾಗೂ ರೈತರು ಆಗ್ರಹಿಸಿದ್ದಾರೆ.


– ಸುನೀಲ್‌ ಹರಿಹರ

error: Content is protected !!