ರಾಣೇಬೆನ್ನೂರಿನಲ್ಲಿನ ಶ್ರೀ ಸಿದ್ಧಾರೂಢ ಸ್ವಾಮಿ ಜಯಂತಿ ಕಾರ್ಯಕ್ರಮದಲ್ಲಿ ಡಾ. ಶಿವಾನಂದ ಭಾರತಿ ಶ್ರೀಗಳು
ರಾಣೇಬೆನ್ನೂರು,ಮೇ 29- ಬಡವ-ಬಲ್ಲಿದ, ದೇಶ-ವಿದೇಶ, ಹೆಣ್ಣು-ಗಂಡು ಅಥವಾ ಯಾವುದೇ ಜಾತಿ, ಧರ್ಮ ಎನ್ನುವ ತಾರತಮ್ಯವಿಲ್ಲದೆ `ಓಂ ನಮ ಶಿವಾಯ’ ಎನ್ನುವ ಪಂಚಾಕ್ಷರಿ ಮಂತ್ರವನ್ನು ಜಪಿಸ ಬಹುದು. ಆ ಮೂಲಕ ತಮ್ಮೆಲ್ಲ ಪಾಪಗಳಿಗೆ ಪರಿಹಾರ ಕಂಡುಕೊಂಡು ಮುಕ್ತಿ ಪಡೆದುಕೊಳ್ಳಬಹುದು ಎಂದು ಸಂಚಾರಿ ಸಂತ ಇಂಚಲದ ಶಿವಯೋಗೇಶ್ವರ ಸಾಧು ಸಂಸ್ಥಾನ ಮಠದ ಶ್ರೀ ಡಾ. ಶಿವಾನಂದ ಭಾರತಿ ಮಹಾಸ್ವಾಮೀಜಿ ನುಡಿದರು.
ಶ್ರೀಗಳು ತಾಲ್ಲೂಕಿನ ಖಂಡೇರಾಯನ ಹಳ್ಳಿ ಶ್ರೀ ಸಿದ್ಧಾರೂಢ ಸಿದ್ಧಾಶ್ರಮದಲ್ಲಿ ನಡೆದ ಸಿದ್ಧಾರೂಢ ಸ್ವಾಮಿ ಜಯಂತಿ, 30ನೇ ವೇದಾಂತ ಪರಿಷತ್, ತಮ್ಮ 84ನೇ ಜಯಂತ್ಯೋತ್ಸವ ಹಾಗೂ ಸಾಮೂಹಿಕ ವಿವಾಹ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡುತ್ತಿದ್ದರು.
ಯಮ ಪ್ರತಿಕ್ಷಣ ನಮ್ಮ ಆಯಸ್ಸನ್ನು ನುಂಗುತ್ತಲೇ ಇರುತ್ತಾನೆ. ಯಾವ ಕ್ಷಣ ಕೊನೆಗೊಳ್ಳುತ್ತದೆ ಎನ್ನುವುದು ಯಾರಿಗೂ ತಿಳಿಯಲಾರದು. ಕಾರಣ, ಇರುವುದರೊ ಳಗೆ ಪಂಚಾಕ್ಷರಿ ಮಂತ್ರ ಜಪಿಸಿ ಸಂಸಾರ ದಲ್ಲೂ ಸಾಧನೆ ಮಾಡಿ ಬದುಕನ್ನು ಊರ್ಜಿ ತಗೊಳಿಸಿಕೊಳ್ಳಿರಿ ಎಂದು ಶಿವಾನಂದ ಭಾರತಿ ಶ್ರೀಗಳು ಉಪದೇಶಿಸಿದರು.
ಪಂಚಮುಖಿ ಶಿವನ ಮುಖದಿಂದ ಹೊರಹೊಮ್ಮಿದ ಈ ಪಂಚಾಕ್ಷರಿ ಮಂತ್ರವನ್ನು ದಿನಕ್ಕೊಂದು ಬಾರಿ ಜಪಿಸಿ ತಮ್ಮೆಲ್ಲ ಕಷ್ಟಗಳನ್ನು, ಪಾಪಗಳನ್ನು ದೂರ ಮಾಡಿಕೊಂಡು ಪುಣ್ಯ ಸಂಪಾದಿಸಿಕೊಂಡು, ಬದುಕಿನ ಭವಸಾಗರವನ್ನು ದಾಟಿ ಮುಕ್ತಿ ಹೊಂದಿರಿ ಎಂದು ಹಂಪಿ ಹೇಮಕೂಟದ ವಿದ್ಯಾನಂದ ಭಾರತಿ ಶ್ರೀಗಳು, ದಾವಣಗೆರೆ ಜಡೆಸಿದ್ದೇಶ್ವರ ಮಠದ ಶಿವಾನಂದ ಶ್ರೀಗಳು, ಇಂಚಲದ ಪೂರ್ಣಾನಂದ ಭಾರತಿ ಶ್ರೀಗಳು ನುಡಿದರು. ಮಣಕೂರ ಸಿದ್ಧಾರೂಢಾ ಶ್ರಮದ ಮಾತೆ ಶ್ರೀ ಚನ್ನಬಸಮ್ಮ ವೇದಿಕೆಯಲ್ಲಿದ್ದರು.
ಮಠದ ಭಕ್ತ, ವಿಧಾನಸಭೆ ಉಪಸ ಭಾಪತಿ ರುದ್ರಪ್ಪ ಲಮಾಣಿ ಮಾತನಾಡಿ, ಭಕ್ತರ ಸಹಾಯ, ಸಹಕಾರದಿಂದ ಮುಂದಿನ ಜಾತ್ರೆಯ ಸಮಯಕ್ಕೆ ರಥೋತ್ಸವ, ಯಾತ್ರಿ ನಿವಾಸ ಹಾಗೂ ಸಿದ್ದಾರೂಢರ ಪ್ರತಿಮೆ ಪ್ರತಿಷ್ಠಾಪನೆ ಕಾರ್ಯಗಳನ್ನು ಪೂರೈಸಲಾಗುವುದು ಎಂದು ಹೇಳಿದರು.
ಡಾ.ಶಿವಾನಂದ ಭಾರತಿ ಶ್ರೀಗಳ ತುಲಾಭಾರ, ಮಠದ ಅಭಿವೃದ್ಧಿಗೆ ಹೆಗಲು ಕೊಟ್ಟ ವಿವಿಧ ಗ್ರಾಮಗಳ ಪ್ರಮುಖರ ಸನ್ಮಾನ, ಸಾಮೂಹಿಕ ವಿವಾಹ ನಡೆದವು. ಹಡಗಿನಹಾಳ ಮಠದ ಮಲ್ಲೇಶ್ವರ ಶರಣರು ಕಾರ್ಯಕ್ರಮ ನಿರೂಪಿಸಿದರು.