10ಕ್ಕೂ ಹೆಚ್ಚು ಮನೆಗಳ ನೀರಿನ ತೊಟ್ಟಿಯಲ್ಲಿ ಲಾರ್ವಾ ಪತ್ತೆ

10ಕ್ಕೂ ಹೆಚ್ಚು ಮನೆಗಳ ನೀರಿನ ತೊಟ್ಟಿಯಲ್ಲಿ ಲಾರ್ವಾ ಪತ್ತೆ

ಜಿ. ಬೇವಿನಹಳ್ಳಿ ಗ್ರಾಮದ ಟಿಹೆಚ್ಓ ಭೇಟಿ : ಡೆಂಗ್ಯೂ ಬಗ್ಗೆ ಜನರಿಗೆ ಜಾಗೃತಿ

ಮಲೇಬೆನ್ನೂರು, ಮೇ 28- ಜಿ.ಬೇವಿನಹಳ್ಳಿ ಗ್ರಾಮದಲ್ಲಿ ಡೆಂಗ್ಯೂ ರೋಗದ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಮಂಗಳವಾರ ಟಿಹೆಚ್ಓ ಡಾ. ಖಾದರ್ ನೇತೃತ್ವದ ಆರೋಗ್ಯ ಇಲಾಖೆಯ ತಂಡ ಲಾರ್ವಾ ಸಮೀಕ್ಷೆ ನಡೆಸಿತು.

ಗ್ರಾಮದಲ್ಲಿ ವಾರದ ಹಿಂದೆ ಅನಾರೋಗ್ಯದಿಂದ ಮೃತಪಟ್ಟ ಮಹಿಳೆಯೊಬ್ಬರಿಗೆ ಡೆಂಗ್ಯೂ ರೋಗದ ಲಕ್ಷಣಗಳಿದ್ದವು ಎಂಬ ಬಗ್ಗೆ ಅವರ ಮನೆಗೆ ಭೇಟಿ ನೀಡಿದ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದರು.

ಮೃತಪಟ್ಟ ಮಹಿಳೆಯ ಮನೆಯಲ್ಲಿ ಎಲ್ಲರಿಗೂ ಜ್ವರ ಬಂದಿತ್ತು ಎಂಬ ಮಾಹಿತಿ ಈ ವೇಳೆ ಗೊತ್ತಾಯಿತು. ಆದರೆ, ಇವರೆಲ್ಲರಿಗೂ ಡೆಂಗ್ಯೂ ಜ್ವರ ಬಂದಿತೋ ಅಥವಾ ಮಾಮೂಲಿ ಜ್ವರ ಬಂದಿತೋ ಎನ್ನುವ ಬಗ್ಗೆ ಅಧಿಕೃತವಾದ ಮಾಹಿತಿ ಲಭ್ಯವಾಗಲಿಲ್ಲ.

ನಂತರ ಈ ಮನೆಯ ಸುತ್ತಮುತ್ತಲಿನ ಜನರಿಗೆ ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸಿ, ಮನೆಯ ಹೊರಗಡೆ ಇರುವ ನೀರಿನ ತೊಟ್ಟಿಯನ್ನು ಮುಚ್ಚಬೇಕು. ಮನೆಯ ಬಳಿ ಚರಂಡಿ ಅಥವಾ ತಗ್ಗು ಪ್ರದೇಶದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ. ಟೈರ್, ಚಿಪ್ಪುಗಳನ್ನು ಮನೆಯ ಹತ್ತಿರ ಇಡಬೇಡಿ. ಯಾವುದೇ ರೀತಿಯ ಜ್ವರ, ಶೀತ, ಸುಸ್ತು ತರಹದ ಲಕ್ಷಣ ಕಂಡಲ್ಲಿ ತಕ್ಷಣ ಸರ್ಕಾರಿ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳುವ ಜೊತೆಗೆ  ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಟಿಹೆಚ್ಓ ಡಾ. ಖಾದರ್ ಅವರು ಗ್ರಾಮಸ್ಥರಿಗೆ ತಿಳಿಸಿದರು.

ಗ್ರಾಮದಲ್ಲಿ ಈ ದಿನ ಒಟ್ಟು 14 ದಿನ ಆಶಾ ಕಾರ್ಯಕರ್ತರನ್ನು 7 ತಂಡಗಳನ್ನಾಗಿ ಮಾಡಿ, ಲಾರ್ವಾ ಸಮೀಕ್ಷೆ ಮಾಡಿಸುತ್ತಿದ್ದೇವೆ. ಇದುವರೆಗೆ 10 ಮನೆಗಳ ನೀರಿನ ತೊಟ್ಟಿಗಳಲ್ಲಿ ಲಾರ್ವಾ ಕಂಡು ಬಂದಿದ್ದು, ಅವುಗಳನ್ನು ನಾಶ ಪಡಿಸಿದ್ದೇವೆ ಎಂದು ತಾ. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಉಮಣ್ಣ ತಿಳಿಸಿದರು.

ಕೊಕ್ಕನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಹರ್ಚಿತ್, ಆರೋಗ್ಯ ನಿರೀಕ್ಷಣಾಧಿಕಾರಿ ಚಂದ್ರಶೇಖರಯ್ಯ, ಆಶಾ ಕಾರ್ಯ ಕರ್ತರಾದ ಶಾಂತಮ್ಮ, ರಾಧಮ್ಮ, ಶೈಲಜಾ, ಸುನಂದ ಈ ವೇಳೆ ಹಾಜರಿದ್ದರು.

error: Content is protected !!